ಮದ್ವೆ ಮಾತ್ರವಲ್ಲದೇ ನಿಶ್ಚಿತಾರ್ಥವನ್ನೂ ಸಾಮೂಹಿಕವಾಗಿ ನಡೆಸಿದ ಬಂಟ್ವಾಳದ ಯುವಕರ ಸಂಘ

Public TV
2 Min Read

ಮಂಗಳೂರು: ಬಡತನದಲ್ಲಿರುವವರಿಗೆ ಸಹಕಾರಿಯಾಗಲಿ ಎಂದು ಎಲ್ಲೆಡೆ ಸಂಘ ಸಂಸ್ಥೆಗಳು ಸಾಮೂಹಿಕ ವಿವಾಹಗಳನ್ನು ನಡೆಸೋದು ಮಾಮೂಲಿ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಯುವಕರ ಸಂಘವೊಂದು ಕೇವಲ ಮದುವೆಯನ್ನು ಮಾತ್ರವಲ್ಲ ನಿಶ್ವಿತಾರ್ಥವನ್ನು ಸಾಮೂಹಿಕವಾಗಿ ನಡೆಸಿದ್ದಾರೆ.

ಮದುವೆ ಅನ್ನೋದು ಗಂಡು ಹೆಣ್ಣಿನ ದಾಂಪತ್ಯ ಜೀವನದ ಮೊದಲ ಮೆಟ್ಟಿಲು. ಆದರೆ ಬಡತನದಲ್ಲಿರುವವರಿಗೆ ಮದುವೆಯಾಗೋದು ಕಷ್ಟವಾಗಿದೆ. ಆದ್ದರಿಂದ ಕೆಲವೊಂದು ಸಂಘಸಂಸ್ಥೆಗಳು ಸಾಮೂಹಿಕ ವಿವಾಹವನ್ನು ಮಾಡಿಸುತ್ತವೆ.

ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಬಡ ಕುಟುಂಬದ ವಧುವರಿಗೆ ಒಂದು ವಿಭಿನ್ನ ಕಾರ್ಯಕ್ರಮ ಆಯೋಜಿಸಿದ್ದು, ಎಲ್ಲಾ ಕಡೆಗಳಲ್ಲಿ ಸಾಮೂಹಿಕ ವಿವಾಹಗಳನ್ನು ಮಾತ್ರ ಮಾಡುತ್ತಾರೆ. ಆದರೆ ಈ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನವರು ಮದುವೆಯ ಮೊದಲು ಶಾಸ್ತ್ರೋಕ್ತವಾಗಿ ನಡೆಯುವ ನಿಶ್ವಿತಾರ್ಥವನ್ನು ಕೂಡ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ಒಂದು ವಾರ ಬಿಟ್ಟು ಮದುವೆ, ನಂತರ ಮದುವೆಯಾಗಿ ಗರ್ಭಿಣಿಯಾದವರಿಗೆ ಸೀಮಂತ ಕಾರ್ಯವನ್ನು ಕೂಡ ಈ ಕ್ಲಬ್ ಮಾಡಿಸುತ್ತದೆ.

ಸಾಮೂಹಿಕ ವಿವಾಹದಲ್ಲಿ ಮದುವೆಯಾದರೆ ಇತರೆ ಸಂಪ್ರದಾಯಗಳು, ಆಚರಣೆಗಳು ಇರುವುದಿಲ್ಲ ಎಂಬ ಬೇಸರ ಇಲ್ಲಿ ಮದುವೆಯಾಗುವ ದಂಪತಿಗಳಿಗೆ ಆಗಬಾರದೆಂದು ಸಂಘಟಕರು ಶಾಸ್ತ್ರೋಕ್ತವಾಗಿ ಎಲ್ಲಾ ಕಾರ್ಯಕ್ರಮವನ್ನು ಮಾಡುತ್ತಾರೆ ಎಂದು ಆಯೋಜಕ ತುಂಗಪ್ಪ ಬಂಗೇರ ಹೇಳಿದ್ದಾರೆ.

ಸಾಮೂಹಿಕ ವಿವಾಹಕ್ಕೆ ಹೆಸರು ನೊಂದಾಯಿಸಿದ ದಂಪತಿಗಳಿಗೆ ಮದುವೆಯ ಒಂದು ವಾರದ ಮೊದಲು ನಿಶ್ಚಿತಾರ್ಥವನ್ನು ಇದೇ ಕ್ಲಬ್ ಮಾಡುತ್ತದೆ. ಇಬ್ಬರಿಗೂ ಬಂಗಾರದ ಉಂಗುರ ಸೀರೆ, ಉಡುಗೆಗಳನ್ನು ನೀಡಿ ಸಂಪ್ರದಾಯದಂತೆಯೇ ನಿಶ್ವಿತಾರ್ಥವನ್ನೂ ಸಾಮೂಹಿಕವಾಗಿ ಮಾಡುತ್ತಾರೆ. ಬಳಿಕ ಇದೇ ದಂಪತಿಗಳಿಗೆ ಒಂದು ವಾರದ ಬಳಿಕ ಮದುವೆ ಮಾಡಿಸುತ್ತಾರೆ. ಮದುವೆಗೂ ಕರಿಮಣಿ ಸರ, ಸೀರೆ, ಮದುಮಗನಿಗೆ ಧೋತಿ, ಅಂಗಿ, ಪೇಟ ಸೇರಿದಂತೆ ಎಲ್ಲವನ್ನು ನೀಡುವುದರ ಜೊತೆಗೆ ಅದ್ಧೂರಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಮದುವೆ ಮಾಡಿ ಸುಮ್ಮನೆ ಕೂರದ ಈ ಕ್ಲಬ್ ಆಯಾ ದಂಪತಿಗಳ ಸಂಪರ್ಕದಲ್ಲಿದ್ದು ಗರ್ಭಿಣಿಯರಾದ ಬಳಿಕ ಸೀಮಂತವನ್ನು ಇದೇ ಕ್ಲಬ್‍ನವರು ಮಾಡುತ್ತಾರೆ. ಹೀಗಾಗಿ ನಾವು ಯಾವುದರಿಂದಲೂ ವಂಚಿತರಾಗದಂತೆ ನಿಶ್ಚಿತಾರ್ಥ, ಮದುವೆ, ಸೀಮಂತ ಮಾಡಿಸುವ ಈ ಕ್ಲಬ್‍ಗೆ ನವ ವಧುವರರು ಕೃತಜ್ಞತೆ ಸಲ್ಲಿಸಿದ್ದಾರೆ.

ಕಳೆದ 10 ವರ್ಷಗಳಿಂದಲೂ ಈ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಈ ಸೇವೆಯನ್ನು ಮಾಡುತ್ತಿದ್ದು, ಇಲ್ಲಿಯವರೆಗೆ 389 ಜೋಡಿಗಳಿಗೆ ಮದುವೆ ಮಾಡಿಸಿದ್ದಾರೆ. ಈ ಬಾರಿ 21 ಜೋಡಿಗಳು ಈ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸ್ಥಳೀಯ ಸಮಾಜಸೇವಕ ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಈ ಕೆಲಸ ನಡೆಯುತ್ತಿದ್ದು, ಎಲ್ಲರ ಪ್ರಶಂಸೆಗೂ ಪಾತ್ರವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *