ಬಾಗಿನ ಅರ್ಪಿಸಲು ಕುದುರೆ ಏರಿ ಬಂದ ಬಿಜೆಪಿ ಶಾಸಕ

Public TV
1 Min Read

ತುಮಕೂರು: ತುಂಬಿದ ಕೆರೆಗೆ ಬಾಗಿನ ಅರ್ಪಿಸಲು ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಮ್ ಕುದುರೆ ಏರಿ ಬಂದು ಸುದ್ದಿಯಾಗಿದ್ದಾರೆ.

ತಾಲೂಕಿನ ಸಿಎಸ್ ಪುರ ಹೋಬಳಿಯ ಚೆಂಗಾವಿ ಕೆರೆ ಈ ಬಾರಿ ಪೂರ್ಣಪ್ರಮಾಣದಲ್ಲಿ ತುಂಬಿ ಕೋಡಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಇಂದು ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಮಸಾಲೆ ಜಯರಾಮ್ ಅವರು ಕುದುರೆ ಏರಿ ಬಂದು ಕೆರೆಗೆ ಬಾಗಿನ ಅರ್ಪಿಸಿದ್ದು ವಿಶೇಷವಾಗಿತ್ತು. ಅಲ್ಲದೆ ಶಾಸಕರು ಕುದುರೆ ಏರಿ ಬಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ.

ಈ ಹೊಸಾ ಗೆಟಪ್ ನೋಡಿದ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಕುದುರೆ ಮೇಲಿದ್ದ ಶಾಸಕರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. ಹಾಗೆಯೇ ಕುದುರೆ ಏರಿ ಬಂದು ಪೂಜೆ ಸಲ್ಲಿಸಿದ್ದು ಮಸಾಲೆ ಜಯಾರಾಮ್ ಅವರಿಗೂ ಖುಷಿಕೊಟ್ಟಿದೆ.

ಈ ಹಿಂದೆ ತುರುವೆಕೆರೆ ತಾಲೂಕಿನ ದೊಡ್ಡಮಲ್ಲಿಗೇರೆಯಲ್ಲಿ ಅ. 6ರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮಸಾಲೆ ಜಯರಾಮ್ ಸಖತ್ ಮನರಂಜನೆ ನೀಡುವ ಮೂಲಕ ದಸರಾ ವೈಭವನ್ನು ಇನ್ನಷ್ಟು ಹೆಚ್ಚಿಸಿದ್ದರು.

ದಸರಾ ಕಾರ್ಯಕ್ರಮದಲ್ಲಿ ರಂಜಿಸಿದ ಶಾಸಕ ಮಸಾಲೆ ಜಯರಾಮ್ ಹಾಡಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೂಲತಃ ನಾಟಕ ಕಲಾವಿದರಾಗಿರುವ ಶಾಸಕರು ದಸರಾ ಕಾರ್ಯಕ್ರಮದಲ್ಲಿ ಸಖತ್ ಮನರಂಜನೆ ನೀಡಿ ಎಲ್ಲರ ಗಮನ ಸೆಳೆದಿದ್ದರು. ದೊಡ್ಡಮಲ್ಲಿಗೇರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಡು ಹೇಳಿ ಶಾಸಕರು ಎಲ್ಲರ ಮನ ಗೆದ್ದಿದ್ದರು.

ರಾಮನ ಅವತಾರ ರಘುಕುಲ ಸೋಮನ ಅವತಾರ ಸಂಪೂರ್ಣ ಹಾಡು ಹಾಡಿ ಮಿಂಚಿದ್ದರು. ಶಾಸಕರ ಹಾಡಿಗೆ ಕಾರ್ಯಕ್ರಮದಲ್ಲಿ ನೆರೆದ ಪ್ರೇಕ್ಷಕರು ತಲೆದೂಗಿ, ಶಿಳ್ಳೆ, ಚಪ್ಪಾಳೆಗಳ ಸುರಿಮಳೆ ಮೂಲಕ ಮೆಚ್ಚುಗೆ ಸೂಚಿಸಿದ್ದರು. ಕಾರ್ಯಕ್ರಮಕ್ಕೆ ಬಂದಿದ್ದ ಶಾಸಕರಿಗೆ ಕಾರ್ಯಕರ್ತರು ಒತ್ತಾಯ ಮಾಡಿದ್ದಕ್ಕೆ ಅವರು ಹಾಡು ಹೇಳಿದರು. ಹೀಗಾಗಿ ಶಾಸಕರ ಗಾಯನ ಕೇಳಿ ಕಾರ್ಯಕರ್ತರು ಸಿಕ್ಕಾಪಟ್ಟೆ ಖುಷಿಪಟ್ಟಿದ್ದರು. ಜೊತೆಗೆ ವೇದಿಕೆ ಮೇಲೆ ಮಸಾಲ ಜಯರಾಮ್ ಅವರು ಮೈಕ್ ಹಿಡಿದು ಹಾಡು ಹೇಳುತ್ತಾ ಎಲ್ಲರನ್ನು ರಂಜಿಸುತ್ತಿರುವುದನ್ನು ಸ್ಥಳೀಯರು ವಿಡಿಯೋ ಕೂಡ ಮಾಡಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *