ಇತ್ತೀಚಿಗೆ ಟೊಯೋಟಾ ಕಂಪನಿಯು ತನ್ನ ಗ್ಲಾಂಝಾ ಕಾರನ್ನು ನವೀಕರಿಸಿ, ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿತ್ತು. ಈಗ ಮಾರುತಿ ಸುಜುಕಿ ಕಂಪನಿಯ ಸರದಿ. ಬಲೆನೊ (Maruti Baleno) ಕಾರನ್ನು ನವೀಕರಿಸಿರುವ ಕಂಪನಿ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ. ಇದಕ್ಕೂ ಮೊದಲು, ಬಲೆನೊದ ಜೀಟಾ ಮತ್ತು ಆಲ್ಫಾ ಟ್ರಿಮ್‌ಗಳು ಮಾತ್ರ ಆರು ಏರ್‌ಬ್ಯಾಗ್‌ಗಳನ್ನು (six airbags) ಹೊಂದಿದ್ದವು. ಆರು ಏರ್‌ಬ್ಯಾಗ್‌ಗಳನ್ನು ನೀಡುತ್ತಿರುವುದರಿಂದ ಬಲೆನೊ ಕಾರಿನ ಬೆಲೆಗಳು ಶೇಕಡಾ 0.5 ರಷ್ಟು ಹೆಚ್ಚಳವಾಗಿದೆ.
ಆಲ್ಟೊ, ವ್ಯಾಗನ್ ಆರ್, ಸೆಲೆರಿಯೊ ಮತ್ತು ಈಕೊ ಕಾರುಗಳು ಈಗಾಗಲೇ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತಿವೆ. ಬಲೆನೊ ಈ ಕಾರುಗಳ ಸಾಲಿಗೆ ಹೊಸ ಸೇರ್ಪಡೆ. ನವೀಕರಣದ ನಂತರ ಬಲೆನೊದ ಎಕ್ಸ್-ಶೋರೂಂ ಬೆಲೆ ರೂ. 6.74 ಲಕ್ಷದಿಂದ ರೂ. 9.96 ಲಕ್ಷದವರೆಗೆ ಇದೆ.
ಬಲೆನೊ ಕಾರಿನ ಇತರ ಸುರಕ್ಷತಾ ವೈಶಿಷ್ಟ್ಯಗಳು ಹೀಗಿವೆ. ಹಿಲ್ ಹೋಲ್ಡ್‌ನೊಂದಿಗೆ ESP, 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಬ್ರೇಕ್ ಅಸಿಸ್ಟ್ ಮತ್ತು ISOFIX ಆಂಕರೇಜ್‌ಗಳು. ಆಲ್ಫಾ ಟ್ರಿಮ್‌ನಲ್ಲಿ 360-ಡಿಗ್ರಿ ಕ್ಯಾಮೆರಾ ಕೂಡ ಇದೆ. ಬಲೆನೊದ 1.2-ಲೀಟರ್ ಪೆಟ್ರೋಲ್ ಎಂಜಿನ್ 66kW ಶಕ್ತಿ ಮತ್ತು 113Nm ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ.
ಈ ವರ್ಷದ ಅಂತ್ಯದ ವೇಳೆಗೆ ನಮ್ಮ ಎಲ್ಲಾ ಕಾರುಗಳು 6 ಏರ್‌ಬ್ಯಾಗ್‌ಗಳನ್ನು ಹೊಂದಿರುತ್ತವೆ ಎಂದು ಈ ವರ್ಷದ ಏಪ್ರಿಲ್‌ನಲ್ಲಿ ಮಾರುತಿ ಸುಜುಕಿ ಅಧ್ಯಕ್ಷ ಆರ್.ಸಿ.ಭಾರ್ಗವ ಹೇಳಿದ್ದರು. ಎರ್ಟಿಗಾ, ಫ್ರಾಂಕ್ಸ್, ಇಗ್ನಿಸ್, ಎಸ್-ಪ್ರೆಸ್ಸೊ ಮತ್ತು XL6 ಕಾರುಗಳಲ್ಲಿ ಪ್ರಸ್ತುತ 2 ಏರ್‌ಬ್ಯಾಗ್‌ಗಳನ್ನು ಮಾತ್ರ ಹೊಂದಿವೆ. ಅತ್ಯಂತ ಜನಪ್ರಿಯ ಎರ್ಟಿಗಾ ಕಾರು ಅತಿ ಶೀಘ್ರದಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಪಡೆಯುವ ಸಾಧ್ಯತೆ ಇದೆ. ಕಾರಿನ ಬೆಲೆಯೂ ಕೂಡ ಶೇಕಡಾ 1.4 ರಷ್ಟು ಹೆಚ್ಚಳವಾಗುವ ಬಗ್ಗೆ ಕಂಪನಿ ಸುಳಿವು ನೀಡಿದೆ.