ಲೋ ಬಿಪಿಯಿಂದ ಪತ್ನಿ ಸಾವೆಂದ ದರ್ಶನ್-‌ ಪತಿಯಿಂದ್ಲೇ ಕೊಲೆ ಅಂತಾ ಪೋಷಕರ ಆರೋಪ

Public TV
1 Min Read

ಹಾಸನ: ವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ (Hassan Woman Death) ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಸುರಭಿ (24) ಮೃತ ಮಹಿಳೆ. ಪತಿಯೇ ಕೊಲೆ ಮಾಡಿದ್ದಾನೆಂದು ಮೃತಳ ಪೋಷಕರು ಗಂಭೀರ ಆರೋಪ ಮಾಡುತ್ತಿದ್ದಾರೆ. ಜೊತೆಗೆ ಸುರಭಿ ಸಾವಿಗೆ ಪತಿ ದರ್ಶನ್ ಕಾರಣವಾಗಿದ್ದು, ಆತನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಪ್ರಕರಣದ ವಿವರ: ಮೂರು ವರ್ಷದ ಹಿಂದೆ ನಾಗಯ್ಯನಕೊಪ್ಪಲು ಗ್ರಾಮದ ದರ್ಶನ್ ಜೊತೆ ಹುಣಸೂರಿನ ಸುರಭಿಯನ್ನು ಅದ್ಧೂರಿಯಾಗಿ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ವರ್ಷದ ಹೆಣ್ಣುಮಗುವಿದ್ದು, ಪತಿ ದರ್ಶನ್‌ಗೆ ಬೇರೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ‌. ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದನ್ನೂ ಓದಿ: 6 ವರ್ಷ ಪ್ರೀತಿಸಿ ಕೈಕೊಟ್ಟ, ಸಪ್ತಪದಿ ತುಳಿದವನೂ ಬೇಡವೆಂದ- ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಯುವತಿ ಕಂಗಾಲು

ನಿಮ್ಮ ಮಗಳು ಲೋ ಬಿಪಿಯಾಗಿ ಸಾವನ್ನಪ್ಪಿದ್ದಾಳೆ ಎಂದು ದರ್ಶನ್ ಗುರುವಾರ ಸುರಭಿ ಪೋಷಕರಿಗೆ ಕರೆ ಮಾಡಿದ್ದಾನೆ. ನಂತರ ನಾಗಯ್ಯನಕೊಪ್ಪಲಿಗೆ ಬಂದ ಪೋಷಕರು, ಸುರಭಿ ಲೋಬಿಪಿಯಿಂದ ಸತ್ತಿಲ್ಲ. ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಸುರಭಿಯನ್ನು ನೇಣುಬಿಗಿದು ಕೊಲೆ ಮಾಡಿ ನಾಟವಾಡುತ್ತಿದ್ದಾರೆ. ಸುರಭಿ ಕುತ್ತಿಗೆಯ ಮೇಲೆ ಗಾಯದ ಗುರುತುಗಳಿವೆ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article