ಲಕ್ನೋ: 17 ವರ್ಷದ ಹುಡುಗನೊಂದಿಗೆ 30 ವರ್ಷದ ಮಹಿಳೆ ಏಕಾಂತದಲ್ಲಿರುವ ಸಂದರ್ಭ ಜೋಡಿಯನ್ನು ನೋಡಿದ ಬಾಲಕಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಸಿಕಂದ್ರಾ ರಾವ್ ಪೊಲೀಸ್ ಠಾಣೆ (Sikandra Rau Police Station) ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ.
ಉರ್ವಿ (6) ಕೊಲೆಯಾದ ಬಾಲಕಿ. ಉರ್ವಿ ಬುಧವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಮನೆಯಿಂದ ನಾಪತ್ತೆಯಾಗಿದ್ದಳು. ಮಧ್ಯಾಹ್ನ 1:30ರ ಸುಮಾರಿಗೆ ಬಾವಿಯಲ್ಲಿ ಪತ್ತೆಯಾಗಿತ್ತು. ಆಕೆಯ ಮೃತದೇಹ ಗೋಣಿಚೀಲದಲ್ಲಿ ತುಂಬಿಸಿ ಕುತ್ತಿಗೆಗೆ ಬಟ್ಟೆ ಕಟ್ಟಿದ ರೀತಿಯಲ್ಲಿ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆ ಪೊಲೀಸರು ತನಿಖೆ ನಡೆಸಿದಾಗ ರಹಸ್ಯ ಬಯಲಾಗಿದೆ. ಇದನ್ನೂ ಓದಿ: 800 ವರ್ಷ ಹಳೆಯ ಸೂಗೂರೇಶ್ವರ ದೇವಸ್ಥಾನಕ್ಕೆ ತಟ್ಟದ ಗ್ರಹಣ ದೋಷ – ವಿಶಿಷ್ಟ ವಾಸ್ತುಶಿಲ್ಪವೇ ಇಲ್ಲಿ ಶ್ರೀರಕ್ಷೆ
30ರ ಮಹಿಳೆ ಕಳೆದ ಮೂರು ತಿಂಗಳಿನಿಂದ 17 ವರ್ಷದ ಹುಡುಗನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಒಂದು ದಿನ ಮಹಿಳೆಯ ಪತಿ ಹಾಗೂ ಅತ್ತೆ ಮನೆಯಲ್ಲಿ ಇಲ್ಲದ ವೇಳೆ ಮಹಿಳೆ ಪ್ರಿಯಕರನನ್ನು ಮನೆಗೆ ಕರೆಸಿ ಇಬ್ಬರು ಏಕಾಂತದಲ್ಲಿದ್ದರು. ಇದನ್ನು ಬಾಲಕಿ ನೋಡಿ ತನ್ನ ತಂದೆಗೆ ಹೇಳುವುದಾಗಿ ತಿಳಿಸಿದಳು. ಬಾಲಕಿಗೆ ಬೆದರಿಸಿದರೂ ಕೂಡ ಆಕೆ ಕೇಳದೆ ತನ್ನ ತಂದೆಗೆ ವಿಷಯ ತಿಳಿಸಲು ಮುಂದಾದಳು. ಈ ವೇಳೆ ಮಹಿಳೆ ಹಾಗೂ ಹುಡುಗ ಆಕೆಯ ಕತ್ತು ಹಿಸುಕಿ ಕೊಂದು ಬಳಿಕ ಗೋಣಿ ಚೀಲದಲ್ಲಿ ತುಂಬಿ ಪಾಳುಬಿದ್ದ ಬಾವಿಗೆ ಎಸೆದಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಘಟನೆ ಸಂಬಂಧ ಹುಡುಗ ಹಾಗೂ ಮಹಿಳೆಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಗಣೇಶ ಮೆರವಣಿಗೆ ವೇಳೆ ಹುಚ್ಚಾಟ; ಪೊಲೀಸರ ಮೇಲೆ ಹಲ್ಲೆಗೆ ಯತ್ನ – ಲಘು ಲಾಠಿಚಾರ್ಜ್
