ತನ್ನನ್ನು ನಿರ್ಲಕ್ಷ್ಯಿಸಿದ್ದಕ್ಕೆ ಸಲಿಂಗಕಾಮಿ ಸಂಗಾತಿಯನ್ನೇ ಕೊಲೆಗೈದ ವಿವಾಹಿತ!

Public TV
2 Min Read

– ನಿವೃತ್ತ ಸ್ಟೆನೋಗ್ರಾಫರ್ ಸಾವಿನ ರಹಸ್ಯ ಭೇದಿಸಿದ ಪೊಲೀಸ್ರು

ಥಾಣೆ: ವಿವಾಹಿತ ವ್ಯಕ್ತಿಯೋರ್ವ ತನ್ನನ್ನು ನಿರ್ಲಕ್ಷ್ಯ ಮಾಡಿದನೆಂದು ಬೇಸರಗೊಂಡು ಸಲಿಂಗಕಾಮಿ ಸಂಗಾತಿಯನ್ನು ಬರ್ಬರವಾಗಿ ಕೊಲೆಗೈದ ಗಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.

ಮುಂಬೈ ನ್ಯಾಯಾಲಯದ ನಿವೃತ್ತ ಸ್ಟೆನೋಗ್ರಾಫರ್ ಸಾವಿನ ರಹಸ್ಯ ಭೇದಿಸಿದಾಗ ಅಚ್ಚರಿಯ ಸಂಗತಿ ಬಯಲಾಗಿದೆ. ಗುರುವಾರ 56 ವರ್ಷದ ವ್ಯಕ್ತಿಯ ಮೃತದೇಹವೊಂದು ಬ್ಯಾಗಿನಲ್ಲಿ ಪತ್ತೆಯಾಗಿತ್ತು. ಇದನ್ನು ಪರಿಶೀಲಿಸಿದ ಪೊಲೀಸರು, ಗುರುತು ಪತ್ತೆ ಹಚ್ಚಿದ್ದು, ಉಮೇಶ್ ಪಿ ಪಾಟೀಲ್ ಎಂದು ವ್ಯಕ್ತಿಯನ್ನು ಗುರುತಿಸಿದ್ದಾರೆ. ಉಮೇಶ್ ಪಾಟೀಲ್ ಎರಡು ದಿನಗಳ ಹಿಂದೆ ತಮ್ಮ ಮನೆಯಿಂದ ನಾಪತ್ತೆಯಾಗಿದ್ದ.

ಕೆಲಸದಿಂದ ನಿವೃತ್ತರಾದ ಬಳಿಕ ಪಾಟೀಲ್, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ದೊಂಬಿವಲಿ ರೈಲ್ವೇ ಮೈದಾನದ ಪಕ್ಕ ಪೊದೆಯಲ್ಲಿ ಪಾಟೀಲ್ ಶವ ಪತ್ತೆಯಾಗಿದೆ. ಆದರೆ ಮೃತದೇಹದಲ್ಲಿ ಗಾಯಗಳಾದ ಕುರುಹುಗಳು ಇರಲಿಲ್ಲ ಎಂದು ವಿಷ್ಣು ನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಆರ್ ಎನ್ ಮುನಗೇಕರ್ ತಿಳಿಸಿದ್ದಾರೆ.

ನಡೆದಿದ್ದೇನು?
ಪಾಟೀಲ್ ಮುಂಬೈನ ಸೆಷನ್ಸ್ ಕೋರ್ಟಿನಲ್ಲಿ ಸ್ಟೆನೋಗ್ರಾಫರ್ ಆಗಿ ಕಾರ್ಯನಿರ್ವಹಿಸಿದ್ದು, 5 ವರ್ಷಗಳ ಹಿಂದೆ ಕೆಲಸದಿಂದ ನಿವೃತ್ತಿ ಹೊಂದಿದ್ದ. ಆ ಬಳಿಕ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ ಏಕಾಏಕಿ ಅಂದರೆ ಫೆಬ್ರವರಿ 4ರಂದು ಪಾಟೀಲ್ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಅವರ ಕುಟುಂಬ ನಾಪತ್ತೆ ದೂರು ದಾಖಲಿಸಿತ್ತು. ದೂರು ಸ್ವೀಕರಿಸಿದ ಪೊಲಿಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಲು ಆರಂಭಿಸಿದ್ದರು. ಈ ವೇಳೆ ಪಾಟೀಲ್ ಮೃತದೇಹ ಪೊದೆಯೊಂದರಲ್ಲಿದ್ದ ಬ್ಯಾಗಿನಲ್ಲಿ ಸಿಕ್ಕಿದೆ.

ಮೃತದೇಹ ಸಿಕ್ಕಿದ 1 ಗಂಟೆಯೊಳಗೆ ಪೊಲೀಸರು 56 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಪ್ರಫುಲ್ ಪವಾರ್ ಎಂದು ಗುರುತಿಸಲಾಗಿದೆ. ಕೆಲ ವರದಿಗಳ ಪ್ರಕಾರ, ಪವಾರ್ ಹಾಗೂ ಪಾಟೀಲ್ 6 ತಿಂಗಳ ಹಿಂದೆ ರೈಲಿನಲ್ಲಿ ಭೇಟಿಯಾಗಿದ್ದರು. ಆ ಬಳಿಕ ಇಬ್ಬರೂ ಸಂಬಂಧ ಹೊಂದಿದ್ದರು. ಆದರೆ ಪವಾರ್ ಗೆ ಮದುವೆಯಾದ ಬಳಿಕ ಪಾಟೀಲ್ ನನ್ನು ಕಡೆಗಣಿಸಲು ಆರಂಭಿಸಿದ್ದಾನೆ. ಇದೇ ವಿಚಾರಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದೆ.

ಮದುವೆಯ ನಂತರ ನಡವಳಿಕೆಯಲ್ಲಿ ಬದಲಾವಣೆ ಕಂಡು ಪಾಟೀಲ್ ಹಾಗೂ ಪವಾರ್ ಮಧ್ಯೆ ಜಗಳವಾಗಿದೆ. ಈ ವೇಳೆ ಸಿಟ್ಟುಗೊಂಡ ಪವಾರ್, ಪಾಟೀಲ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಬಾಗಿನಲ್ಲಿ ತುಂಬಿಸಿ, ಪೊದೆಯಲ್ಲಿ ಬಿಸಾಕಿ ಹೋಗಿದ್ದಾನೆ. ಪ್ರಕರಣ ಸಂಬಂಧ ಆರೋಪಿ ಪವಾರ್ ನನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಕೊಲೆ ಕೇಸ್ ದಾಖಲಿಸಿದ್ದಾರೆ. ಅಲ್ಲದೆ ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *