ಮದ್ವೆಯಾದ 40 ದಿನಕ್ಕೆ ಸ್ನೇಹಿತನಿಂದ ಪತ್ನಿಯನ್ನೇ ರೇಪ್ ಮಾಡಿಸ್ದ

Public TV
2 Min Read

-ಅತ್ಯಾಚಾರಿಯೊಂದಿಗೆ 19ರ ಪತಿಯಿಂದ ಹೆಂಡತಿಯ ವಿವಾಹ

ರಾಯ್ಪುರ್: 19 ವರ್ಷದ ಯುವಕನೊಬ್ಬ ವಿಚ್ಛೇದನ ಪಡೆಯಲು ತನ್ನ ಸ್ನೇಹಿತನಿಂದ ಪತ್ನಿಯನ್ನೇ ಅತ್ಯಾಚಾರ ಮಾಡಿಸಿರುವ ಆಘಾತಕಾರಿ ಘಟನೆ ಛತ್ತೀಸ್‍ಗಢದಲ್ಲಿ ನಡೆದಿದೆ.

ಆರೋಪಿ ಪತಿಯನ್ನು ಖಿಲೇಂದ್ರ ಸಾಹೂ ಎಂದು ಗುರುತಿಸಲಾಗಿದೆ. ಈತನ ಗೆಳೆಯ ಕಮ್ಲೇಶ್ ತನ್ನ ಸ್ನೇಹಿತನ ಪತ್ನಿಯನ್ನೇ ಅತ್ಯಾಚಾರ ಮಾಡಿದ್ದಾನೆ. ಇದೀಗ ಇಬ್ಬರ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಕಬೀರ್ಧಾಮ್ ಜಿಲ್ಲೆಯ ಪೈಪರ್ ಟೋಲಾ ಗ್ರಾಮದ ನಿವಾಸಿ ಖಿಲೇಂದ್ರ ಸಾಹೂ 40 ದಿನಗಳ ಹಿಂದೆ ಅಪ್ರಾಪ್ತ ಹುಡುಗಿಯನ್ನು ಮದುವೆಯಾಗಿದ್ದನು. ಆದರೆ ಈತನಿಗೆ ಈ ಮದುವೆ ಇಷ್ಟವಿರಲಿಲ್ಲ. ಮನೆಯವರ ಒತ್ತಾಯದ ಮೇರೆಗೆ ವಿವಾಹವಾಗಿದ್ದನು. ಒಂದು ದಿನ ಪತಿ ತನ್ನ ಆಧಾರ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಕಾವರ್ಧಾಗೆ ಪತ್ನಿಯನ್ನು ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಹೋಟೆಲ್‍ಗೆ ಪತ್ನಿಯನ್ನು ಕರೆದುಕೊಂಡು ಹೋಗಿದ್ದು, ಅಲ್ಲಿಗೆ ಸ್ನೇಹಿತ ಕಮ್ಲೇಶ್‍ನನ್ನು ಕರೆಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಹೋಟೆಲ್‍ನಲ್ಲಿ ಆರೋಪಿ ಪತಿ ತಲಾ 50 ರೂ. ಮೌಲ್ಯದ ಎರಡು ಸ್ಟಾಂಪ್ ಪೇಪರ್‌ಗಳಿಗೆ ಪತ್ನಿಯ ಕೈಯಿಂದ ಸಹಿ ಪಡೆದುಕೊಂಡಿದ್ದಾನೆ. ಒಂದು ಪೇಪರ್ ವಿಚ್ಛೇದನಕ್ಕೆ ಸಂಬಂಧಿಸಿದ್ದಾಗಿದ್ದು, ಮತ್ತೊಂದು ಅತ್ಯಾಚಾರಿಯ ಜೊತೆ ಆಕೆಯ ಮದುವೆಯ ಪೇಪರ್ ಆಗಿತ್ತು. ಸ್ವಲ್ಪ ಸಮಯದ ನಂತರ ಖಿಲೇಂದ್ರ ತನ್ನ ಪತ್ನಿಯನ್ನು ಹೋಟೆಲ್‍ನಲ್ಲಿ ಬಿಟ್ಟು ಶೀಘ್ರದಲ್ಲೇ ಬರುವುದಾಗಿ ಹೇಳಿ ಹೋಗಿದ್ದನು. ಇದೇ ವೇಳೆ ಕಮ್ಲೇಶ್ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಘಟನೆಯ ನಂತರ ಖಿಲೇಂದ್ರ ತನ್ನ ಪತ್ನಿಯನ್ನು ಪೋಷಕರ ಮನೆಗೆ ಬಿಟ್ಟು ಬಂದಿದ್ದಾನೆ.

ಕೆಲವು ದಿನಗಳ ನಂತರ ಅತ್ಯಾಚಾರಿ ಕಮ್ಲೇಶ್ ಸ್ಟಾಂಪ್ ಪೇಪರ್ ಜೊತೆ ಬಂದು ಸಂತ್ರಸ್ತೆ ತನ್ನ ಪತ್ನಿ ಎಂದು ಗಲಾಟೆ ಮಾಡಿದ್ದಾನೆ. ಆಗ ಸ್ಥಳೀಯ ಹಿರಿಯರು ಈ ಬಗ್ಗೆ ವಿಚಾರಿಸಿದ್ದಾರೆ. ಆರೋಪಿ ಖಿಲೇಂದ್ರ ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ತನ್ನ ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದ್ದಾನೆ. ಪಾರ್ಕಿನಲ್ಲಿ ಕಮ್ಲೇಶ್ ಜೊತೆ ನನ್ನ ಪತ್ನಿಯನ್ನು ನೋಡಿದ್ದೇನೆ. ಹೀಗಾಗಿ ಇವರಿಬ್ಬರು ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾನೆ.

ಇತ್ತ ಆರೋಪಿ ಕಮ್ಲೇಶ್, ಆತ ತನ್ನ ಪತ್ನಿಗೆ ವಿಚ್ಛೇದನ ಕೊಡಲು ಸಹಾಯ ಮಾಡುವಂತೆ ಕೇಳಿಕೊಂಡ. ಆದ್ದರಿಂದ ನಾನು ಅವನು ಹೇಳಿದ ಕೆಲಸ ಮಾಡಿದ್ದೇನೆ. ಹೀಗಾಗಿ ಆಕೆ ನನಗೆ ಪತ್ನಿಯಾಗಿದ್ದಾಳೆ ಎಂದು ಹೇಳಿದ್ದಾನೆ. ಆಗ ನಡೆದ ಘಟನೆಯ ಬಗ್ಗೆ ತಿಳಿದು ಸಂತ್ರಸ್ತೆಯ ಕುಟುಂಬದವರು ಈ ಕುರಿತು ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

ಸದ್ಯಕ್ಕೆ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಖಿಲೇಂದ್ರ ಮತ್ತು ಕಮ್ಲೇಶ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *