ಪೂಜೆ ಮಾಡ್ತಿದ್ದಾಗಲೇ ಚಿಕ್ಕಮ್ಮನ ಕತ್ತು ಸೀಳಿದ

Public TV
1 Min Read

– ಗಂಟೆ ಶಬ್ದ ಕೇಳ್ತಿದ್ದಂತೆ ಮನೆಗೆ ನುಗ್ಗಿದ

ಬೆಂಗಳೂರು: ಆಸ್ತಿಗಾಗಿ ಸ್ವಂತ ಚಿಕ್ಕಮ್ಮನನ್ನೇ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ನಲ್ಲಯ್ಯನ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ನಾರಾಯಣಮ್ಮ ಮೃತ ಮಹಿಳೆ. ಮೃತ ಮಹಿಳೆಯ ಪತಿ ತಾತಪ್ಪನಿಗೆ ಇಬ್ಬರು ಹೆಂಡತಿಯರಿದ್ದು, ನಾರಾಯಣಮ್ಮ ಎರಡನೇ ಪತ್ನಿಯಾಗಿದ್ದಳು. ತಾತಪ್ಪ ಎರಡನೇ ಮದುವೆಯಾದ ನಂತರ ಮೊದಲ ಪತ್ನಿ ಮತ್ತು ಮಕ್ಕಳನ್ನು ದೂರ ಇಟ್ಟಿದ್ದು, ಆಸ್ತಿಯನ್ನು ಭಾಗ ಮಾಡಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಮಹೇಶ್ ತನ್ನ ಚಿಕ್ಕಮ್ಮನನ್ನು ಕೊಲೆ ಮಾಡಿದ್ದಾನೆ.

ಏನಿದು ಪ್ರಕರಣ?
ತಾತಪ್ಪನ ಬಳಿ ನಲ್ಲಯ್ಯನ ದೊಡ್ಡಿಯಲ್ಲಿ 5-6 ಎಕರೆಯಷ್ಟು ಜಮೀನಿತ್ತು. ತಾತಪ್ಪನ ಮೊದಲನೇ ಪತ್ನಿಯ ಹೆಸರಲ್ಲಿ 2 ಎಕರೆ, ಎರಡನೇ ಪತ್ನಿಯ ಹೆಸರಲ್ಲಿ 2 ಎಕರೆ ಜಮೀನನ್ನು ಬರೆದಿದ್ದನು. ಇದಕ್ಕೆ ಮೊದಲನೇ ಪತ್ನಿಯ ಕಡೆಯವರು ಆಕ್ಷೇಪ ವ್ಯಕ್ತಪಡಿಸಿದ್ದು, ಕೋರ್ಟ್ ಮೊರೆ ಹೋಗಿದ್ದರು. ಕಳೆದ ಹತ್ತು ವರ್ಷಗಳ ಹಿಂದೆಯೇ ಇವರು ಕೇಸ್ ದಾಖಲಿಸಿದ್ದರು.

ಇತ್ತೀಚೆಗೆ ಮೃತ ನಾರಾಯಣಮ್ಮನಿಗೆ ಒಂದೂವರೆ ಎಕರೆ ಆಸ್ತಿಗೆ ನೀಡಬೇಕೆಂದು ಕೋರ್ಟ್ ತೀರ್ಪು ನೀಡಿತ್ತು. ಇದರಿಂದ ಕೋಪಗೊಂಡ ಮಹೇಶ್ ಮತ್ತೆ ಕ್ಯಾತೆ ತೆಗೆದು ಪದೇ ಪದೇ ನಾರಾಯಣಮ್ಮನ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದನು. ಆಗ ನಾರಾಯಣಮ್ಮ ಕೂಡ ಆತನಿಗೆ ಬೈದು ಕಳುಹಿಸಿದ್ದಳು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಆಕೆಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ.

ಅದರಂತೆಯೇ ಆರೋಪಿ ಮಹೇಶ್ ಇಂದು ಮುಂಜಾನೆ ನಾರಾಯಣಮ್ಮನ ಮನೆ ಬಳಿ ಬಂದಿದ್ದಾನೆ. ನಂತರ ಅಕ್ಕಪಕ್ಕ ಯಾರೂ ಇಲ್ಲದನ್ನು ಗಮನಿಸಿ ಆಕೆ ಪೂಜೆ ಮಾಡೋ ಸಮಯದಲ್ಲಿ ಕೊಲೆ ಮಾಡಲು ಪ್ಲಾನ್ ಮಾಡಿ ಕಾದು ಕುಳಿತಿದ್ದನು. ನಂತರ ಗಂಟೆ ಶಬ್ದ ಕೇಳುತ್ತಿದ್ದಂತೆ ಮನೆ ಒಳಗಡೆ ನುಗ್ಗಿದ್ದು, ಮಚ್ಚಿನಿಂದ ಆಕೆಯ ಕುತ್ತಿಗೆಯನ್ನ ಕತ್ತರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.

ಮಾಹಿತಿ ತಿಳಿದು ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *