ಕೃಷಿಕರನ್ನ ಮದ್ವೆಯಾದ್ರೆ ಬಂಪರ್ ಆಫರ್..!

Public TV
1 Min Read

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ದಶಕದಿಂದ ರೈತಾಪಿ ಯುವಕರಿಗೆ ಮದುವೆನೇ ಆಗುತ್ತಿಲ್ಲ. ಹೀಗಾಗಿ ಗ್ರಾಮದ ಸೇವಾ ಸಹಕಾರ ಸಂಘ ರೈತಾಪಿ ಯುವಕನನ್ನು ವರಿಸಿದವರಿಗೆ ಒಂದು ಬಂಪರ್ ಆಫರ್ ನೀಡಲು ಮುಂದಾಗಿದೆ.

ಹೌದು. ಇಲ್ಲಿನ ಕೃಷಿಕರಿಗೆ ಹೆಣ್ಣುಕೊಡಲು ಯಾರು ಮುಂದಾಗುತ್ತಿಲ್ಲ. ಇದರಿಂದಾಗಿ 40 ವರ್ಷ ದಾಟಿದರೂ ಕಂಕಣ ಭಾಗ್ಯವಿಲ್ಲದೆ ಬೇಸತ್ತಿದ್ದಾರೆ. ಯಲ್ಲಾಪುರ ತಾಲೂಕಿನ ಆನಗೋಡು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು, 30ಕ್ಕೂ ಹೆಚ್ಚು ಜನ ಯುವಕರು ಇನ್ನೂ ಬ್ರಹ್ಮಚಾರಿಗಳಾಗಿಯೇ ಉಳಿದುಕೊಂಡಿದ್ದಾರೆ. ಈ ಸಮಸ್ಯೆ ನೀಗಿಸಲು ಆನಗೋಡು ಗ್ರಾಮದ ಸೇವಾ ಸಹಕಾರ ಸಂಘ, ಬಂಪರ್ ಆಫರ್ ನೀಡಿದೆ. ತಮ್ಮ ಸಂಘದ ರೈತರ ಮಕ್ಕಳಿಗೆ ಯಾರು ಹೆಣ್ಣು ಕೊಡುತ್ತಾರೋ ಅವರ ಹೆಸರಲ್ಲಿ ಉಚಿತವಾಗಿ ಒಂದು ಲಕ್ಷ ರೂಪಾಯಿ ಠೇವಣಿ ಇಡಲು ನಿರ್ಧರಿಸಿದೆ ಎಂದು ಆನಗೋಡು ಸೇವಾ ಸಹಕಾರ ಸಂಘದ ಅಧ್ಯಕ್ಷ ಎನ್.ಕೆ ಹೆಗಡೆ ಹೇಳಿದ್ದಾರೆ.

ಎಲ್ಲಾ ಸದಸ್ಯರ ಬೆಂಬಲ ಪಡೆದು ರೈತರ ಕಲ್ಯಾಣ ಯೋಜನೆ ಜಾರಿಗೆ ತರಲು ಸಂಬಂಧಪಟ್ಟ ಇಲಾಖೆಯ ಅನುಮೋದನೆಗಾಗಿ ಕಳುಹಿಸಲಾಗಿದೆ. ಇದಕ್ಕೆ ಬಹುತೇಕ ಅಂಕಿತ ಬೀಳುವ ಸಾಧ್ಯತೆ ಇದ್ದು, ಏಪ್ರಿಲ್ 1ರಿಂದ ಜಾರಿಗೆ ಬರುವ ಸಾಧ್ಯತೆಗಳಿವೆ. ಇದಕ್ಕೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯ ಗಣಪತಿ ಭಟ್ ತಿಳಿಸಿದ್ದಾರೆ.

ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಸಹಕಾರ ಸಂಘವೊಂದು ಈ ರೀತಿಯ ಕಾರ್ಯ ಮಾಡುತ್ತಿರುವುದು. ಈ ಕಾರ್ಯ ಯಶಸ್ವಿಯಾದಲ್ಲಿ ರಾಜ್ಯಾದ್ಯಂತ ಸರ್ಕಾರ ವಿಸ್ತರಿಸಿದರೆ ಕೃಷಿಯಿಂದ ವಿಮುಖರಾದ ಯುವಕರಿಗೆ ಆಸಕ್ತಿ ಮೂಡಬಹುದೇನೋ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *