ಗೊಂದಲಗಳ ನಡುವೆ ಹೇಗೆ ಆಡಳಿತ ನಡೆಸುತ್ತಾರೋ ನೋಡುತ್ತೇನೆ: ಪರಮೇಶ್ವರ್

Public TV
2 Min Read

ತುಮಕೂರು: ಒಂದೆಡೆ ಅತೃಪ್ತ ಶಾಸಕರ ಗೊಂದಲ, ಇನ್ನೊಂದೆಡೆ ಮನಿ ಬಿಲ್ ಪಾಸ್ ಮಾಡುವುದು ಸೇರಿದಂತೆ ವಿವಿಧ ಅಡೆತಡೆಗಳಿದ್ದು, ಈ ಎಲ್ಲ ಗೊಂದಲಗಳ ನಡುವೆ ಹೇಗೆ ಆಡಳಿತ ನಡೆಸುತ್ತಾರೋ ನೋಡುತ್ತೇನೆ ಎಂದು ನಿರ್ಗಮಿತ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕುಟುಕಿದ್ದಾರೆ.

ತುಮಕೂರಿನ ಗೊಲ್ಲಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಎಂಟು ತಿಂಗಳಲ್ಲಿ ಹಣಕಾಸು ಆಯವ್ಯಯದ ಅನುಮತಿಯನ್ನು ಸದನದಲ್ಲಿ ಪಡೆದುಕೊಳ್ಳಬೇಕು. ಹೀಗಾಗಿ ಅವರು ಅಧಿಕಾರ ಸ್ವೀಕರಿಸಿದ ತಕ್ಷಣವೇ ಮನಿ ಬಿಲ್ ಪಾಸ್ ಮಾಡಿಕೊಳ್ಳಬೇಕಾಗುತ್ತದೆ. ಸಂಖ್ಯಾ ಬಲದ ಮೇಲೆ ಬಿಲ್ ಪಾಸ್ ಆಗುತ್ತದೆ. ಒಂದು ಸರ್ಕಾರ ಅಸ್ತಿತ್ವಕ್ಕೆ ಬರಬೇಕಾದಲ್ಲಿ 113 ಸ್ಥಾನ ಇರಬೇಕು. ಇದನ್ನು ಅವರು ಸಾಬೀತು ಮಾಡಬೇಕು. ಯಾವ ರೀತಿ ಸಾಬೀತು ಮಾಡುತ್ತಾರೆ. ಇಂತಹ ಹಲವು ಸವಾಲುಗಳನ್ನು ಹೇಗೆ ಬಗೆಹರಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ ಎಂದು ತಿಳಿಸಿದ್ದಾರೆ.

ಇದೀಗ ರಾಜ್ಯದಲ್ಲಿ ಹೊಸ ರಾಜಕಾರಣವನ್ನು ನೋಡ್ತಿದ್ದೇವೆ. ಶಾಸಕರನ್ನು ಮನವೊಲಿಸಿ, ಆಸೆ, ಆಮೀಷಗಳನ್ನೊಡ್ಡಿ ರಾಜೀನಾಮೆ ಕೊಡಿಸಿ ಪಕ್ಷ ಬದಲಾಯಿಸೋ ಘಟನೆಗಳು ನಡೆಯುತ್ತಿವೆ. 2008ರಲ್ಲಿ ಬಿ.ಎಸ್.ಯಡಿಯೂರಪ್ಪನವರ ಆಡಳಿತಾವಧಿಯಲ್ಲಿ ಇಂತಹ ಘಟನೆಗಳು ನಡೆದಿದ್ದವು. ಇಂದು ಅದೇ ರೀತಿಯ ಕೆಟ್ಟ ವಾತಾವರಣವನ್ನು ನೋಡುತ್ತಿದ್ದೇವೆ. ವೈಯಕ್ತಿಕವಾಗಿ ಇಂತಹ ಬೆಳವಣಿಗೆಗಳು ಪ್ರಜಾಪ್ರಭುತ್ವಕ್ಕೆ ಒಳ್ಳೇಯದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈಗಿನ್ನು ಮೂವರು ಶಾಸಕರನ್ನು ಮಾತ್ರ ಸ್ಪೀಕರ್ ಅಮಾನತು ಮಾಡಿದ್ದಾರೆ. ಬಹುಶಃ ಉಳಿದವರ ಭವಿಷ್ಯ ಏನಾಗುತ್ತೋ ಗೊತ್ತಿಲ್ಲ. ಅಮಾನತುಗೊಳಿಸಿದ ಆಧಾರದ ಮೇಲೆ ಕೂಡ 113 ಸಂಖ್ಯಾಬಲ ಕಡಿಮೆ ಆಗಬಹುದು. ಉಳಿದವರ ರಾಜೀನಾಮೆ ವಿಚಾರದಲ್ಲಿ ಸ್ಪಿಕರ್ ಏನಾದರೂ ತೀರ್ಮಾನ ಕೈಗೊಳ್ಳಲೇಬೇಕು. ಅವರ ರಾಜೀನಾಮೆಯನ್ನು ಪುರಸ್ಕರಿಸಬೇಕು ಇಲ್ಲವೆ ತಿರಸ್ಕರಿಸಬೇಕು. ಹತ್ತನೇ ಶೆಡ್ಯೂಲ್ ಪ್ರಕಾರ ಅವರನ್ನು ಅನರ್ಹ ಮಾಡಬೇಕಾಗುತ್ತದೆ. ಈಗಾಗಲೇ ಸ್ಪೀಕರ್ ಪ್ರಕ್ರಿಯೆ ಶುರು ಮಾಡಿದ್ದಾರೆ. ಸ್ಪೀಕರ್ ಗೆ 14 ದಿನಗಳ ಕಾಲ ಸಮಯ ಕಾಲಾವಕಾಶವಿದೆ. ಇವತ್ತು, ನಾಳೆ ಯಾವ ತೀರ್ಮಾನ ಮಾಡುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ ಎಂದು ತಿಳಿಸಿದರು.

ಹೊಸ ಸರ್ಕಾರ ಬಂದ ನಂತರ, ಹೊಸ ಸ್ಪೀಕರ್ ಅಯ್ಕೆಗೆ ಈಗಿನ ಸ್ಪೀಕರ್ ಅನುವು ಮಾಡಿಕೊಡಬೇಕು. ಅಷ್ಟರೊಳಗೆ ಅತೃಪ್ತರ ಬಗ್ಗೆ ನಿರ್ಧಾರ ಮಾಡಬೇಕು. ನಾವು ಅತೃಪ್ತರ ಮನವೊಲಿಸಿಲ್ಲ. ಅವರು ನಮಗೆ ಕೊಟ್ಟಿರುವ ಸಂದೇಶಗಳು ಉತ್ತೇಜನಕಾರಿಯಾಗಿಲ್ಲ. ರಾಜಿನಾಮೆಯನ್ನು ವಾಪಸ್ ಪಡೆಯಲ್ಲ ಎಂಬ ಸಂದೇಶ ಮಾತ್ರ ಕಳುಹಿಸಿದ್ದಾರೆ. ಹೀಗಾಗಿ ಅವರಿಗೆ ಪದೇ ಪದೆ ಒತ್ತಾಯ ಮಾಡುವುದು ಸರಿಯಲ್ಲ ಎಂದರು.

ನನ್ನ ಪಾತ್ರವಿಲ್ಲ
ರಾಜಣ್ಣ ನಾನು ಆತ್ಮೀಯ ಸ್ನೇಹಿತರು. ಯಾವ ಕಾರಣಕ್ಕೆ ಸೂಪರ್ ಸೀಡ್ ಆಗಿದೆ ಎನ್ನುವುದು ಅವರಿಗೆ ತಿಳಿದಿದೆ. ಅನಾವಶ್ಯಕವಾಗಿ ನನ್ನನ್ನು ಹೊಣೆ ಮಾಡುವುದು, ದೂಷಣೆ ಮಾಡುವುದು, ಸರಿಯಲ್ಲ. ಅವರು ನಮ್ಮ ಸಂಸ್ಥೆಗಳ ವಿರುದ್ಧ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಇದು ಸಾರ್ವಜನಿಕರ ಆಸ್ತಿ ರಾಜಣ್ಣ ಮಾತ್ರವಲ್ಲ, ಯಾರು ಬೇಕಾದರೂ ತನಿಖೆ ಮಾಡಬಹುದು ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *