ಮಂತ್ರಾಲಯ ಶ್ರೀಗಳಿಂದ ಹೊಸ ಸಂಪ್ರದಾಯಕ್ಕೆ ನಾಂದಿ – ಸ್ವಾಮೀಜಿಗಳ ರಕ್ಷಣೆಗೆ ಬೌನ್ಸರ್​​​ಗಳ ನೇಮಕ

Public TV
1 Min Read

ರಾಯಚೂರು: ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರಿಗೆ ಜೀವ ಭಯ ಕಾಡುತ್ತಿದೆಯಾ ಅನ್ನೋ ಅನುಮಾನಗಳು ಭಕ್ತರಲ್ಲಿ ಕಾಡುತ್ತಿದೆ. ಸ್ವಾಮೀಜಿಗಳ ರಕ್ಷಣೆಗೆ ಬೌನ್ಸರ್ ಗಳ ನೇಮಕ ಮಾಡಿರುವುದರಿಂದ ಭಕ್ತರಲ್ಲಿ ಅನುಮಾನ ಶುರುವಾಗಿದೆ.

ತಮ್ಮ ರಕ್ಷಣೆಗೆ ಬೌನ್ಸರ್ ಗಳನ್ನ ನೇಮಕ ಮಾಡಿಕೊಳ್ಳುವ ಮೂಲಕ ಮಂತ್ರಾಲಯ ಶ್ರೀಗಳು ಮಠದಲ್ಲಿ ಹೊಸ ಸಂಪ್ರದಾಯಯಕ್ಕೆ ನಾಂದಿ ಹಾಡಿದ್ದಾರೆ. ಮಠದಲ್ಲಿ ನೂರಾರು ಜನ ಸಿಬ್ಬಂದಿಗಳಿದ್ದರೂ ರಾಯರ ಆರಾಧನೆ ಹಿನ್ನೆಲೆ ಬೌನ್ಸರ್ ಗಳ ನೇಮಕ ಮಾಡಲಾಗಿದೆ. ಶ್ರೀಗಳ ಸುತ್ತ ರಕ್ಷಣೆಗೆ 6 ಜನ ಬಾಡಿಗಾರ್ಡ್ ಗಳು ನಿಂತಿದ್ದಾರೆ.

ಕಲಬುರಗಿ ಮೂಲದ 6 ಜನ ಬಾಡಿಗಾರ್ಡ್ ಗಳನ್ನ ಕರೆಸಲಾಗಿದೆ. ಮಡಿಯಲ್ಲಿರುವ ಶ್ರೀಗಳ ಹತ್ತಿರ ಭಕ್ತರು ಸುಳಿಯದಂತೆ ಬೌನ್ಸರ್ ಗಳು ತಡೆಯುತ್ತಿದ್ದಾರೆ. ಈ ಮೊದಲು ಮಡಿಯಲ್ಲಿರುವ ಸಿಬ್ಬಂದಿಗೆ ಮಾತ್ರ ಹತ್ತಿರ ಬಿಟ್ಟುಕೊಳ್ಳುತ್ತಿದ್ದ ಶ್ರೀಗಳು ಈಗ ಬಾಡಿಗಾರ್ಡ್ ಗಳ ರಕ್ಷಣೆಯಲ್ಲಿದ್ದಾರೆ.

ಮಠದಲ್ಲಿ ರಾಯರ ಪೂರ್ವಾರಾಧನೆಯ ದಿನವಾದ ಇಂದು ಭಕ್ತರಿಗೆ ಮುದ್ರಾಧಾರಣೆ, ಮಂತ್ರಾಕ್ಷತೆಯನ್ನ ಶ್ರೀಗಳು ನೀಡಿದರು. ಈ ವೇಳೆ ಶ್ರೀಗಳ ಸುತ್ತ ಬಾಡಿಗಾರ್ಡ್‍ಗಳು ಇರುವುದನ್ನ ಕಂಡು ರಾಯರ ಭಕ್ತರು ಗೊಂದಲಕ್ಕೀಡಾಗಿದ್ದಾರೆ.

ರಾಯರು 700 ವರ್ಷಕಾಲ ವೃಂದಾವನದಲ್ಲಿರುತ್ತಾರೆ ಅನ್ನೋ ಪ್ರತೀತಿಯಿದೆ. ಅರ್ಧ ಅವಧಿ ಈ ವರ್ಷ ಪೂರ್ಣಗೊಳ್ಳುವ ಹಿನ್ನೆಲೆ ರಾಯರ 350 ನೇ ಆರಾಧನೆ ವಿಶೇಷವಾಗಿದೆ. ಪೂರ್ವಾರಾಧನೆ ಹಿನ್ನೆಲೆ ವಿಶೇಷ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಗುರುರಾಯರ ಆರಾಧನಾ ಸಂಭ್ರಮ

ರಾಯರು ಸಶರೀರರಾಗಿ ವೃಂದಾವನಸ್ಥರಾದ ದಿನದ ಮುನ್ನಾ ದಿನವನ್ನು ಪೂರ್ವಾರಾಧನೆಯಾಗಿ ಮಂತ್ರಾಲಯ ಸೇರಿದಂತೆ ದೇಶದ ಎಲ್ಲಾ ರಾಯರ ಮಠಗಳಲ್ಲಿ ಆಚರಿಸಲಾಗುತ್ತಿದೆ. ಬೆಳಿಗ್ಗೆಯಿಂದಲೇ ಮಠದಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ನಿರ್ಮಾಲ್ಯ ವಿಸರ್ಜನೆ, ಉತ್ಸವರಾಯರ ಪಾದಪೂಜೆ, ಪಂಚಾಮೃತ ಅಭಿಷೇಕ, ರಜತ ಸಿಂಹವಾಹನೋತ್ಸವ ನಡೆಯುತ್ತಿವೆ. ರಾಜ್ಯದ ವಿವಿಧೆಡೆಯಿಂದ ಭಕ್ತರು ಮಂತ್ರಾಲಯಕ್ಕೆ ಆಗಮಿಸಿದ್ದಾರೆ. ಮಠದಲ್ಲಿ ಏಳುದಿನ ಕಾಲ ಸಪ್ತರಾತ್ರೋತ್ಸವ ನಡೆಯುತ್ತಿದೆ.  ಇದನ್ನೂ ಓದಿ: ಗುರು ರಾಯರ ಸನ್ನಿಧಿ ಮಂತ್ರಾಲಯದಲ್ಲಿ ವಿಶೇಷ ಪಂಚರಥೋತ್ಸವ

Share This Article
Leave a Comment

Leave a Reply

Your email address will not be published. Required fields are marked *