ಮನ್ಸೂರ್ ಖಾನ್ ಬಂಧಿಸುವುದು ದೊಡ್ಡ ವಿಷಯವಲ್ಲ- ಸತೀಶ್ ಜಾರಕಿಹೊಳಿ

Public TV
1 Min Read

ಬೆಳಗಾವಿ: ಐಎಂಎ ಬಹುಕೋಟಿ ಹಗರಣ ಪ್ರಕರಣ ಸಂಬಂಧ ಇಚ್ಚಾಶಕ್ತಿ ಇದ್ದರೆ ಆರೋಪಿಯನ್ನ ಬಂಧಿಸುತ್ತಾರೆ. ಮನ್ಸೂರ್ ಖಾನ್ ಬಂಧಿಸುವುದು ದೊಡ್ಡ ವಿಷಯವಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಆರೋಪಿಯನ್ನ ಸಚಿವ ಜಮೀರ್ ಅಹ್ಮದ್ ಮನೆಯಲ್ಲಿ ಇಟ್ಟುಕೊಳ್ಳಲು ಹೇಗೆ ಸಾಧ್ಯ. ಸೌಹಾರ್ದ ಕಾಯ್ದೆ ಬಂದ ಮೇಲೆ ಕೋ ಆಪರೇಟಿವ್ ಸರ್ಕಾರ ನಿಯಂತ್ರಣ ಮಾಡಲು ಆಗುತ್ತಿಲ್ಲ. ಅವರು ಸ್ವತಂತ್ರ ಇದ್ದಾರೆ. ಈ ಕುರಿತು ಸರ್ಕಾರ ಮರು ಚಿಂತನೆ ಮಾಡುವುದು ಅಗತ್ಯವಿದೆ. ಐಎಂಎ ಹಗರಣದ ಕುರಿತು ಸರ್ಕಾರ ಗಮನ ಹರಿಸುವುದು ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

ಎಸ್‍ಐಟಿಯವರು ಆರೋಪಿಯನ್ನು ಪತ್ತೆ ಹಚ್ಚುತ್ತಾರೆ. ಜಮೀರ್ ಮೇಲೆ ಆರೋಪ ಇದೆ. ಆದರೆ ಯಾವುದೂ ಪ್ರೂವ್ ಮಾಡಿಲ್ಲ. ಅವರಿಗೆ ರಾಜೀನಾಮೆ ಕೊಡು ಎನ್ನುವುದು ಸರಿಯಲ್ಲ. ಬಿಜೆಪಿಯವರದ್ದು ಎಲ್ಲವನ್ನೂ ವಿರೋಧ ಮಾಡುವ ಭಾವನೆ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಜಿಂದಾಲ್ ಗೆ ಭೂಮಿ ಕೊಡುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಭೂಮಿಯನ್ನ ಯಾರ ಅವಧಿಯಲ್ಲಿ ನೀಡಿದ್ದಾರೆ. ಈ ಕುರಿತು ಟಿವಿಯಲ್ಲಿ ಬಿಜೆಪಿ ಕಾಂಗ್ರೆಸ್ ಎಲ್ಲರನ್ನೂ ಕುಡಿಸಿ ಪ್ಯಾನಲ್ ಡಿಸ್ಕಷನ್ ಮಾಡಲಿ. ಇದರ ನಿಯಮವೇನಿದೆ, ವಿರೋಧ ಪಕ್ಷದವರದ್ದು ಎಷ್ಟು ನಿಜಾಂಶ ಇದೆ ಎಂಬುದು ಜನರಿಗೆ ಗೊತ್ತಾಗಬೇಕು ಎಂದರು.

ಬಿಜೆಪಿಯವರ ಪ್ರತಿಭಟನೆಯಲ್ಲಿ ಯಾವುದೇ ಅರ್ಥ ಇಲ್ಲ. ಅವರ ಅವಧಿಯಲ್ಲೇ ಜಮೀನು ಕೊಟ್ಟಿದ್ದು. ಈಗ ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ರಮೇಶ್ ಜಾರಕಿಹೊಳಿಯಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಅವರ ಕುರಿತು ನಾನೇನು ಹೇಳುವುದಿಲ್ಲ ಅಂದರು.

ಆಡಳಿತ ಪಕ್ಷದಲ್ಲಿ ವಿರೋಧಗಳು ಹೆಚ್ಚಾಗುತ್ತಿದೆ ಎಂಬ ವಿಚಾರ ಸಂಬಂಧ ಮಾತನಾಡಿದ ಅವರು, ಸರ್ಕಾರದಲ್ಲಿ ಸಂಖ್ಯೆ ಕಡಿಮೆ ಇದೆ ಅದಕ್ಕೆ ಹೀಗಾಗುತ್ತಿದೆ. ಟ್ವೆಂಟಿ ಟ್ವೆಂಟಿ ಮ್ಯಾಚ್ ಇದ್ದಂಗೆ ಸ್ವಲ್ಪ ಸಮಸ್ಯೆ ಇರುತ್ತದೆ. ಶಾಸಕರು ಅವರ ಭಾವನೆಗಳನ್ನ ಹೇಳಿಕೊಳ್ಳುತ್ತಿದ್ದಾರೆ. ಅಂತಿಮವಾಗಿ ಸರ್ಕಾರ ಅದರ ಬಗ್ಗೆ ಗಮನ ಹರಿಸುತ್ತದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *