ತನಿಖೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮನ್ಸೂರ್ ಖಾನ್

Public TV
2 Min Read

ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ಪ್ರಾಥಮಿಕ ತನಿಖೆ ವೇಳೆ ಸ್ಫೋಟಕ ಮಾಹಿತಿ ತಿಳಿಸಿದ್ದಾನೆ.

ಜಾರಿ ನಿದೇಶನಾಲಯ(ಇಡಿ) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದ ವೇಳೆ ಪ್ರಕರಣದ ಕುರಿತು ಸ್ಫೋಟಕ ಮಾಹಿತಿಯನ್ನು ಮನ್ಸೂರ್ ಬಾಯ್ಬಿಟ್ಟಿದ್ದಾನೆ. ಈ ವೇಳೆ 1000ಕ್ಕೂ ಹೆಚ್ಚು ಕೋಟಿ ಮೌಲ್ಯದ ವ್ಯವಹಾರದ ರಹಸ್ಯ ವಿವರವನ್ನು ಇಡಿ ಅಧಿಕಾರಿಗಳು ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೆ ಕೆಲ ಪ್ರಭಾವಿಗಳ ಹೆಸರುಗಳನ್ನು ಕೂಡ ಮನ್ಸೂರ್ ಪ್ರಸ್ತಾಪಿಸಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಪ್ರಭಾವಿಗಳ ಜೊತೆಗಿನ ನಂಟು ಹಾಗೂ ಪ್ರಭಾವಿಗಳಿಗೆ ಹಂಚಿಕೆಯಾಗಿರುವ ಐಎಂಎನ ಲಾಭಾಂಶದ ಕುರಿತು ಮನ್ಸೂರ್ ಬಾಯ್ಬಿಟ್ಟಿದ್ದಾನೆ. ಮನ್ಸೂರ್ ಗೆ ಜೀವ ಬೆದರಿಕೆ ಇರುವ ಹಿನ್ನೆಲೆ ಆತನಿಗೆ ಹೈ ಸೆಕ್ಯುರಿಟಿ ನೀಡಲಾಗಿದೆ. ಹೀಗಾಗಿ ಖಾನ್ ಗೆ ರಾತ್ರಿಯಿಡಿ ಬಿಗಿ ಭದ್ರತೆ ಒದಗಿಸಲಾಗುತ್ತಿದೆ. ಸದ್ಯ ಶಾಂತಿನಗರದ ಇಡಿ ಕಚೇರಿಯಲ್ಲಿ ಮನ್ಸೂರ್ ನನ್ನು ಇಡಿ ಅಧಿಕಾರಿಗಳು ಇರಿಸಿದ್ದಾರೆ.

ಶನಿವಾರ ಬೆಂಗಳೂರಿನ ಶಾಂತಿ ನಗರದಲ್ಲಿರುವ ಇಡಿ ಕಚೇರಿಗೆ ಕರೆತಂದ ಬಳಿಕ ಸಿವಿಲ್ ಕೋರ್ಟ್ ಗೆ ಇಡಿ ಅಧಿಕಾರಿಗಳು ಹಾಜರುಪಡಿಸಿದ್ದರು. ಹಲವು ವಿಷಯಗಳ ಕುರಿತು ವಿಚಾರಣೆ ನಡೆಸಬೇಕಿದೆ. ಆದ್ದರಿಂದ 15 ದಿನಗಳ ಕಾಲ ವಶಕ್ಕೆ ನೀಡಿ ಅಂತ ಇಡಿ ಕೇಳಿತು. ಆದರೆ, ಕೇವಲ 3 ದಿನಗಳಿಗೆ ಮಾತ್ರ ನೀಡೋದಾಗಿ ಜಡ್ಜ್ ಆದೇಶಿಸಿದರು. ಹೀಗಾಗಿ ಖಾನ್‍ನನ್ನು 3 ದಿನಗಳ ಅವಧಿಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ.

ಐಎಂಎ ಕಚೇರಿ ಸೇರಿದಂತೆ ಮನ್ಸೂರ್ ಖಾನ್ ಮನೆ ಮೇಲೆ ದಾಳಿ ನಡೆಸಿದ ವೇಳೆ ಲಭ್ಯವಾದ ಆಸ್ತಿಪಾಸ್ತಿ, ಚಿನ್ನಾಭರಣಗಳು, ದಾಖಲೆಗಳ ಕುರಿತು ಇಡಿ ವಿಚಾರಣೆ ನಡೆಸುತ್ತಿದೆ. ಇನ್ನೊಂದೆಡೆ, ಎಸ್‍ಐಟಿ ಹಾಗೂ ತೆಲಂಗಾಣ ಪೊಲೀಸರು ಕೂಡ ಮನ್ಸೂರ್ ನನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ.

ವಂಚನೆ ಎಸಗಿ ಮನ್ಸೂರ್ ಖಾನ್ ದುಬೈಗೆ ತೆರಳಿದ್ದ. ಈತನ ಚಲನವಲನಗಳ ಕಣ್ಣಿಟ್ಟಿತ್ತ ಎಸ್‍ಐಟಿ ಭಾರತಕ್ಕೆ ಬರುವಂತೆ ಹೇಳಿತ್ತು. ಅಲ್ಲದೇ ರಕ್ಷಣೆ ನೀಡಲಾಗುವುದು ಎಂದು ಎಸ್‍ಐಟಿ ಹೇಳಿತ್ತು. ದುಬೈನಿಂದ ದೆಹಲಿಗೆ ಬಂದಿಳಿದ ಮನ್ಸೂರ್ ಖಾನ್‍ನನ್ನು ಗುರುವಾರ ಮಧ್ಯರಾತ್ರಿ 1:50ರ ಸುಮಾರಿಗೆ ಬಂಧಿಸಲಾಗಿತ್ತು. ಮನ್ಸೂರ್ ಖಾನ್‍ನನ್ನು ಇ.ಡಿ ಅಧಿಕಾರಿಗಳು ವಿಚಾರಣೆ ಪೂರ್ಣಗೊಳಿಸಿದ ಬಳಿಕ ಎಸ್‍ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *