ವಿಧಾನಸಭೆ ಕಲಾಪ: ಉಮೇಶ್ ಕತ್ತಿ ಕ್ರಿಯಾಶೀಲ, ವರ್ಣರಂಜಿತ ರಾಜಕಾರಣಿ- ಸಿಎಂ

Public TV
3 Min Read

ಬೆಂಗಳೂರು: ಇಂದಿನಿಂದ ಹತ್ತು ದಿನಗಳ ಕಾಲ ನಡೆಯುವ ಅಧಿವೇಶನ (Session) ಇಂದು ಆರಂಭಗೊಂಡಿದ್ದು, ರಾಜಕೀಯ ನಾಯಕರು ಇತ್ತೀಚೆಗೆ ಅಗಲಿದ ಸಚಿವ ಉಮೇಶ್ ಕತ್ತಿ (Umesh Katti) ಅವರನ್ನು ನೆನಪಿಸಿಕೊಂಡರು. ವಂದೇ ಮಾತರಂ ಗೀತೆಯ ಮೂಲಕ ಮೊದಲ ದಿನದ ಕಲಾಪ ಆರಂಭದಲ್ಲಿ ಸಚಿವ ಉಮೇಶ್ ಕತ್ತಿ, ಮಾಜಿ ಸಚಿವ ಪ್ರಭಾಕರ್ ರಾಣೆ, ಮಾಜಿ ಶಾಸಕ ಎ ಕೆಂಪೇಗೌಡ, ಮಾಜಿ ಶಾಸಕ ಜಿ ವಿ ಶ್ರೀರಾಮರೆಡ್ಡಿ ಮಾಜಿ ಶಾಸಕ ದೇಸಾಯಿ, ಸುಗಮ ಸಂಗೀತಗಾರ ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಸ್ಪೀಕರ್ ಕಾಗೇರಿಯವರು ಮೊದಲಿಗೆ ಉಮೇಶ್ ಕತ್ತಿ ನಿಧನಕ್ಕೆ ಸಂತಾಪ ಸೂಚಕ ಪ್ರಸ್ತಾವ ಮಂಡಿಸಿದರು. ನಂತರ ಉಳಿದ ಗಣ್ಯರು ಹಾಗೂ ಇಂಗ್ಲೆಂಡ್ ರಾಣಿ ಎಲಿಜಬೆತ್ ನಿಧನಕ್ಕೆ ಸಂತಾಪ ಸೂಚಕ ನಿರ್ಣಯ ಮಂಡಿಸಿದರು. ಇದನ್ನೂ ಓದಿ: ನನ್ನಿಷ್ಟದಂತೆ ಬದುಕದಿದ್ದರೆ ಏಕೆ ಇರಬೇಕು? – ಫಿಲ್ಟರ್ ಇಟ್ಕೊಂಡು ಬದುಕುವ ಮಗ ನಾನಲ್ಲ ಎಂದಿದ್ದರು ಉಮೇಶ್ ಕತ್ತಿ

ಸಂತಾಪ ಸೂಚನೆ ನಿರ್ಣಯಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai), ಕತ್ತಿ ಹಿಡಿದ ಕೆಲಸ ಮುಗಿಸದೇ ಬಿಡ್ತಿರ್ಲಿಲ್ಲ. ಬಹಳ ಹಾಸ್ಯ ಪ್ರವೃತ್ತಿ ಇತ್ತು. ಬಹಳ ಸಲ ಪಕ್ಷ ಬದಲಾಯಿಸಿದ್ರೂ ಗೆಲ್ಲುತ್ತಿದ್ದರು. ಪಕ್ಷ ಬದಲಾವಣೆ ಮಾಡುತ್ತಿದರೂ ಜನ ಅವರನ್ನು ಜನ ಕೈ ಬಿಟ್ಟಿರಲಿಲ್ಲ. ಶ್ರೀಮಂತಿಕೆ ಇದ್ದರೂ ಜನಸಾಮಾನ್ಯರ ನೆಂಟಸ್ತಿಕೆ ಬಿಡುತ್ತಿರಲಿಲ್ಲ. ಮಾಜಿ ಪ್ರಧಾನಿ ದೇವೇಗೌಡ್ರು (HD Devegowda) ಸಿಎಂ ಆಗಿದ್ದಾಗ ಕತ್ತಿಯವರಿಗೆ ಸಚಿವ ಸ್ಥಾನ ಕೊಟ್ಟಿದ್ರು. ದೇವೇಗೌಡ್ರು ಮೊದಲ ಸಂಪುಟ ವಿಸ್ತರಣೆ ವೇಳೆ ಕತ್ತಿ ಅವರಿಗೆ ಸಚಿವ ಸ್ಥಾನ ಕೊಟ್ಟಿರಲಿಲ್ಲ. ಈ ಬಗ್ಗೆ ಕತ್ತಿ ಅವರಿಗೆ ಬೇಸರ ಇದ್ದರೂ ಸ್ಪೋರ್ಟಿವ್ ಆಗಿ ಸ್ವೀಕರಿಸಿದರು ಎಂದರು.

ಉಮೇಶ್ ಕತ್ತಿ ಕ್ರಿಯಾಶೀಲ ವರ್ಣರಂಜಿತ ರಾಜಕಾರಣಿ. ತೀಕ್ಷ್ಣವಾದ ಸಾಮಾನ್ಯ ಜ್ಞಾನ ಬುದ್ಧಿವಂತಿಕೆ ಹೊಂದಿದವರಾಗಿದ್ದರು. ಶಾಸಕರಾದ ಮೇಲೆ ಸಣ್ಣ ವಯಸ್ಸಿನಲ್ಲಿ ರಾಮಕೃಷ್ಣ ಹೆಗಡೆ ಹಾಗೂ ಎಸ್ ಆರ್ ಬೊಮ್ಮಾಯಿಗೆ ಹತ್ತಿರವಾಗಿದ್ದರು. ಮುಕ್ತವಾದ ಮನಸ್ಸು ಮಾತು ಹೊಂದಿದ್ದರು. ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾಗಿದ್ದರು. ಎಲ್ಲ ಪಾರ್ಟಿ ಬಿ ಫಾರಂ ನನ್ನ ಜೇಬಿನಲ್ಲಿ ಇದೆ ಎಂದು ತಮಾಷೆಗೆ ಹೇಳುತ್ತಿದ್ದರು. ಜನರ ಮಧ್ಯೆ ಇದ್ದು ಬೆಳೆದ ರಾಜಕಾರಣಿ. ಸ್ನೇಹಮಯ ಸ್ವಭಾವ ಹೊಂದಿದ್ದರು. ಕತ್ತಿ ಬಂಧಿಖಾನೆ, ತೋಟಗಾರಿಕೆ ಸಚಿವರಾಗಿದ್ದರು. ಒಮ್ಮೆ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರ ಕೊಡಲು ಹೋಗಿದ್ದರು. ಆದರೆ ಎಸ್ ಆರ್ ಬೊಮ್ಮಾಯಿ ಅವರು ಸಮಾಧಾನ ಮಾಡಿದ್ದರು. ನಂತರ ಅವರಿಗೆ ಪಿಡಬ್ಯುಡಿ (PWD) ಖಾತೆ ಸಿಕ್ಕಿತು ಎಂದರು.

ಇದೇ ವೇಳೆ ಕತ್ತಿಯವರ ಪ್ರತ್ಯೇಕ ರಾಜ್ಯ ಹೇಳಿಕೆಗಳಿಗೆ ಸ್ಪಷ್ಟನೆ ಕೊಟ್ಟ ಸಿಎಂ, ಕತ್ತಿ ಬೆಳಗಾವಿ (Belagavi Politics) ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಎರಡು ದಶಕಗಳಿಂದ ಬೆಳಗಾವಿ ರಾಜಕಾರಣಲ್ಲಿ ಪ್ರಮುಖ ಪಾತ್ರ. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬಗ್ಗೆ ಕತ್ತಿ ಆಗಾಗ್ಗೆ ಮಾತಾಡ್ತಿದ್ರು. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕೆಂಬ ಕಳಕಳಿಯಿಂದ ಆ ಮಾತು ಹೇಳ್ತಿದ್ರು. ಕರ್ನಾಟಕ ವಿಭಜನೆ ಉದ್ದೇಶ ಅವರಿಗೆ ಇರಲಿಲ್ಲ. ಅವರಿಗೆ ಅಭಿವೃದ್ಧಿ ಆಗಬೇಕೆಂಬ ದೂರದೃಷ್ಟಿ ಇತ್ತು ಎಂದು ಹೇಳಿದರು. ಇದನ್ನೂ ಓದಿ: 6 ಪಕ್ಷ, 8 ಬಾರಿ ಶಾಸಕ – ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಸಿಎಂ ಕನಸು ಕಂಡಿದ್ದ ಕತ್ತಿ

ಕತ್ತಿ ನಿಧನದಿಂದ ಸರ್ಕಾರಕ್ಕೆ, ಪಕ್ಷಕ್ಕೆ ಹಾನಿಯಾಗಿದೆ. ವೈಯಕ್ತಿಕವಾಗಿ ನನಗೆ ಹಾನಿ ತಂದಿದೆ. ಮೊನ್ನೆಯ ಸಂಪುಟ ಸಭೆಯಲ್ಲಿ ಹಿಡಕಲ್ ಡ್ಯಾಮ್ ಅನ್ನು ಟೂರಿಸ್ಟ್ ಕೇಂದ್ರ, ಉದ್ಯಾನವನ ಮಾಡಬೇಕೆಂದು ಆಶಯ ವ್ಯಕ್ತಪಡಿಸಿದ್ರು. ಅದಕ್ಕೆ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *