ಕಾಲ್ತುಳಿತಕ್ಕೆ ಮನೋಜ್ ಬಲಿ – ಮೊಮ್ಮಗನ ಅಗಲಿಕೆ ನೋವಲ್ಲೇ ಅಜ್ಜಿ ಕೊನೆಯುಸಿರು

Public TV
2 Min Read

ತುಮಕೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ (Chinnaswamy Stampede) ಉಂಟಾಗಿ ತುಮಕೂರಿನ (Tumakuru) ಮನೋಜ್ ಸಾವನ್ನಪ್ಪಿದ್ದು, ಇದೀಗ ಮೊಮ್ಮಗನ ಸಾವಿನ ಶೋಕದಲ್ಲೇ ಅಜ್ಜಿ ಕೊನೆಯುಸಿರೆಳೆದಿರುವ ಘಟನೆ ಕುಣಿಗಲ್‌ನ (Kunigal) ನಾಗಸಂದ್ರದಲ್ಲಿ ನಡೆದಿದೆ.

ಮನೋಜ್ ಅಜ್ಜಿ ದೇವೀರಮ್ಮ (70) ಮೃತಪಟ್ಟ ವೃದ್ಧೆ. ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದ 11 ಮಂದಿ ಆರ್‌ಸಿಬಿ ಅಭಿಮಾನಿಗಳ ಪೈಕಿ ತುಮಕೂರಿನ ಮನೋಜ್ ಕೂಡ ಒಬ್ಬ. ಬೆಂಗಳೂರಿನ ಹೆಬ್ಬಾಳ ಬಳಿಯ ಕೆಂಪಾಪುರದ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದ ಮನೋಜ್ ಯಲಹಂಕದಲ್ಲಿ ತಂದೆ, ತಾಯಿ ಹಾಗೂ ತಂಗಿ ಜೊತೆ ವಾಸವಿದ್ದ. ಆರ್‌ಸಿಬಿ ವಿಜಯೋತ್ಸವ ದಿನ ಸ್ನೇಹಿತರೊಂದಿಗೆ ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿದ್ದ ಮನೋಜ್ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದ. ಇದೀಗ ಮೊಮ್ಮಗನ ಅಗಲಿಕೆ ನೋವಲ್ಲೇ ಅಜ್ಜಿ ಕೂಡ ನಿಧನರಾಗಿದ್ದಾರೆ. ಇದನ್ನೂ ಓದಿ: ತುಮಕೂರನ್ನೂ ಗ್ರೇಟರ್ ಬೆಂಗಳೂರಿಗೆ ಸೇರಿಸಿ – ಪರಮೇಶ್ವರ್

ಇನ್ನು ಮೃತ ಮನೋಜ್ ಕುಟುಂಬಕ್ಕೆ ಡಿಸಿ ಶುಭಕಲ್ಯಾಣ್ ಭಾನುವಾರ 25 ಲಕ್ಷ ಪರಿಹಾರದ ಚೆಕ್ ನೀಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮನೋಜ್ ತಂದೆ ದೇವರಾಜ್, ಚೆಕ್ ಕೊಟ್ಟಿದ್ದಾರೆ. ಚೆಕ್ ಕೊಟ್ಟರೆ ಮಗಾ ಬರ್ತಾನಾ? ಇದ್ದೋನು ಒಬ್ಬನೇ ಮಗ. 25 ಲಕ್ಷ ಚೆಕ್ ಕೊಟ್ಟಿದ್ದಾರೆ. ಈ ಹಣ ನನ್ನ ಉಪಯೋಗಕ್ಕೆ ನಾನೇನು ಮಾಡಿಕೊಳ್ಳಲ್ಲ. ನನ್ನ ಮಗಳು, ಅವರ ಅಮ್ಮನ ಅಕೌಂಟ್‌ಗೆ ಹಾಕುತ್ತೇನೆ. ಅವರ ಜೀವನಾಂಶಕ್ಕೆ ಹಣ ಇಡುತ್ತೇನೆ ಎಂದರು. ಇದನ್ನೂ ಓದಿ: ಮುಂಬೈ| ರೈಲಿನಿಂದ ಹಳಿಗೆ ಬಿದ್ದು ಐವರು ಸಾವು ಶಂಕೆ

ಮುಂದುವರಿದು ಮಾತನಾಡಿ, ಬಂದ ಚೆಕ್ ಹಣದ ಒಂದು ರೂಪಾಯಿ ಸಹ ಖರ್ಚು ಮಾಡಿಕೊಳ್ಳಲ್ಲ. ದುಡ್ಡು ಕೊಟ್ಟರೆ ಯಾರೂ ಬರಲ್ಲ. ಮೊದಲೇ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಾಗಿತ್ತು. ನಮ್ಮಂಥವರು ಎಷ್ಟೋ ಜನ ಇದ್ದಾರೆ. ಒಬ್ಬೊಬ್ಬರ ಮಕ್ಕಳು ಹೋದರೆ ಅವರ ಪರಿಸ್ಥಿತಿ ಏನು? ಇದ್ದವನು ಒಬ್ಬನೇ ಮಗ. ಇನ್ನೊಂದೆರೆಡು ವರ್ಷಕ್ಕೆ ಓದು ಮುಗಿಯುತಿತ್ತು. ಕೆಲಸಕ್ಕೂ ಸಹ ಸೇರುತ್ತಿದ್ದ. ನಮಗೆ ಬೆನ್ನೆಲುಬಾಗಿ ನಿಂತುಕೊಳ್ಳುತ್ತಿದ್ದ. ವಿದೇಶಕ್ಕೆ ಹೋಗುವ ಆಸೆ ಹೊಂದಿದ್ದ. ಅವಕಾಶ ಸಿಕ್ಕರೆ ಹೋಗು ಎಂದು ನಾನು ಹೇಳಿದ್ದೆ. ಅವನು ದುಡಿದು ಹಣ ಕೊಡದಿದ್ದರೇ ಬೇಡ, ಜೊತೆಯಲ್ಲಿ ಇದ್ದಿದ್ದರೇ ಸಾಕಾಗುತಿತ್ತು. ಸರ್ಕಾರ ಕೊಟ್ಟ ಹಣ ನಮ್ಮ ನೋವನ್ನು ಮರೆಸಲ್ಲ ಎಂದು ಬೇಸರಿಸಿದರು. ಇದನ್ನೂ ಓದಿ: ಮೋದಿ 3.0 ಸರ್ಕಾರಕ್ಕೆ ಒಂದು ವರ್ಷ

Share This Article