ಜಾಲಿಡೇಸ್ ಹುಡುಗನ ಚಿತ್ರಕ್ಕೆ ಮನೋಹರ್ ಸಂಗೀತ : ಇದು 150ನೇ ಸಿನಿಮಾ

Public TV
2 Min Read

‘ಜಾಲಿಡೇಸ್’ ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ (Niranjan Shetty) ನಾಯಕನಾಗಿ ನಟಿಸಿರುವ ’31 DAYS’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಶನಿವಾರ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಅದ್ದೂರಿಯಾಗಿ ನೆರವೇರಿತು. ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ, ಸಂಗೀತ ನಿರ್ದೇಶಕ ಗುರುಕಿರಣ್, ನಟಿ – ನಿರ್ಮಾಪಕಿ ಗೀತಪ್ರಿಯ ಮುಂತಾದ ಗಣ್ಯರು ವಿ.ಮನೋಹರ್ ಬರೆದು, ಹಾಡಿ, ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳನ್ನು ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.

ʼ31 ಡೇಸ್ʼ (31 Days) ವಿ.ಮನೋಹರ್ (V Manohar) ಅವರ ಸಂಗೀತ ಸಂಯೋಜನೆಯ 150ನೇ ಚಿತ್ರವಾಗಿದ್ದು, ಇದೇ ಸಂದರ್ಭದಲ್ಲಿ ಅವರನ್ನು ಚಿತ್ರತಂಡ ಆತ್ಮೀಯವಾಗಿ ಸನ್ಮಾನಿಸಿತ್ತು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ವಿ.ಮನೋಹರ್, ನಾನು ಸಂಗೀತ ನಿರ್ದೇಶಕನಾಗಿದ್ದೆ ಅನಿರೀಕ್ಷಿತ. ನಿರ್ದೇಶಕನಾಗಲು ಬಂದ ನಾನು, ಸಂಗೀತ ನಿರ್ದೇಶಕನಾದೆ. ಇದಕ್ಕೆ ಉಪೇಂದ್ರ ಅವರು ಕಾರಣ. ʼತರ್ಲೆ ನನ್ಮಗʼ ನನ್ನ ಸಂಗೀತ ಸಂಯೋಜನೆಯ ಮೊದಲ ಚಿತ್ರ. ʼ31 ಡೇಸ್ʼ 150ನೇ ಚಿತ್ರ. ಇಷ್ಟು ವರ್ಷದ ಸಂಗೀತದ ಜರ್ನಿಗೆ ಸಾಥ್ ನೀಡಿದ ಪ್ರತಿಯೊಬ್ಬರಿಗೂ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ. ಇನ್ನೂ ಈ ಚಿತ್ರದಲ್ಲಿ 11 ಹಾಡುಗಳಿದೆ. ನಾಡಿನ ಜನಪ್ರಿಯ ಗಾಯಕ – ಗಾಯಕಿಯರು ಹಾಡಿದ್ದಾರೆ. ನಾಯಕ ನಿರಂಜನ್ ಶೆಟ್ಟಿ ಬಹಳ ವರ್ಷಗಳ ಪರಿಚಯ. ಅವರ ಶ್ರೀಮತಿ ನಾಗವೇಣಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

ʼಜಾಲಿಡೇಸ್ʼ ಚಿತ್ರದ ಮೂಲಕ ನಾನು ನಾಯಕನಾದೆ. ʼ31 ಡೇಸ್ʼ ನಾನು ನಾಯಕನಾಗಿ ನಟಿಸಿರುವ 8ನೇ ಚಿತ್ರ. 35 ಚಿತ್ರಗಳಲ್ಲಿ ಪ್ರಮುಖಪಾತ್ರದಲ್ಲೂ ಕಾಣಿಸಿಕೊಂಡಿದ್ದೇನೆ. ಈ ಚಿತ್ರವನ್ನು ನನ್ನ ಪತ್ನಿ ನಾಗವೇಣಿ ಎನ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಗುರುಗಳಾದ ವಿ.ಮನೋಹರ್ ಸಂಗೀತ ನೀಡಿದ್ದಾರೆ. ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಸಂಗೀತ ನಿರ್ದೇಶಕ ಗುರುಕಿರಣ್, ನನ್ನನ್ನು ಬಾಲ್ಯದಿಂದ ನೋಡಿರುವ ಜಯಪ್ರಕಾಶ್ ಹೆಗ್ಡೆ ಅವರು ನಮ್ಮ ಚಿತ್ರದ ಹಾಡುಗಳನ್ನು ಅನಾವರಣ ಮಾಡಿದ್ದು ಖುಷಿಯಾಗಿದೆ. ಚಿತ್ರಕಲಾ ಪರಿಷತ್ತಿಗೂ ನನಗೂ ವಿಶೇಷವಾದ ನಂಟಿದೆ. ನಾನು ಇಲ್ಲಿ ಕಲಾ ವಿದ್ಯಾರ್ಥಿಯಾಗಿದ್ದೆ. ನಾನು ಚಿತ್ರಕಲೆ ಕಲಿತ ಜಾಗವಿದು. ಹಾಗಾಗಿ ಇಲ್ಲೇ ಹಾಡುಗಳನ್ನು ಬಿಡುಗಡೆ ಮಾಡಿದ್ದೇನೆ. ಕೆಲವೇ ದಿನಗಳಲ್ಲಿ ನಮ್ಮ ಚಿತ್ರ ತೆರೆಗೆ ಬರಲಿದೆ ಎಂದು ನಾಯಕ ನಿರಂಜನ್ ಶೆಟ್ಟಿ ತಿಳಿಸಿದರು.

ಮೊದಲ ನಿರ್ಮಾಣದ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಬೇಕು ಎಂದು ನಿರ್ಮಾಪಕಿ ನಾಗವೇಣಿ ಎನ್ ಶೆಟ್ಟಿ ಮನವಿ ಮಾಡಿದರು.

ಸಾಕಷ್ಟು ಚಿತ್ರಗಳಿಗೆ ಸಹ ನಿರ್ದೇಶಕನಾಗಿದ್ದ ನನ್ನನ್ನು ನಿರಂಜನ್ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಮಾಡಿದ್ದಾರೆ. ಇದೊಂದು ಹೈ ವೋಲ್ಟೇಜ್ ಲವ್ ಸ್ಟೋರಿಯಾಗಿದೆ ಎಂದರು ನಿರ್ದೇಶಕ ರಾಜ ರವಿಕುಮಾರ್.  ಚಿತ್ರದ ನಾಯಕಿ ಪ್ರಜ್ವಲಿ ಸುವರ್ಣ ಸಹ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

Share This Article