ಸವರ್ಣದೀರ್ಘ ಸಂಧಿ: ಮತ್ತೆ ಶುರುವಾಗುತ್ತಾ ಮನೋಮೂರ್ತಿ ಸುವರ್ಣಯುಗ?

Public TV
1 Min Read

ಬೆಂಗಳೂರು: ಮುಂಗಾರು ಮಳೆ ಚಿತ್ರದ ಹಾಡುಗಳ ಮೂಲಕ ಸಂಗೀತ ನಿರ್ದೇಶಕ ಮನೋಮೂರ್ತಿ ಮಾಡಿದ್ದ ಮೋಡಿ ಇಂದಿಗೂ ಎಲ್ಲರ ಮನಸುಗಳಿಗೆ ಹನಿಯುತ್ತಲೇ ಇದೆ. ಆ ನಂತರದಲ್ಲಿಯೂ ಅವರು ಸಂಗೀತ ನಿರ್ದೇಶಕರಾಗಿ ಸಕ್ರಿಯರಾಗಿಯೇ ಇದ್ದಾರೆ. ಆದರೆ ಮುಂಗಾರು ಮಳೆಯನ್ನು ಸರಿಗಟ್ಟಲು ಖುದ್ದು ಅವರಿಂದಲೇ ಸಾಧ್ಯವಾಗಿಲ್ಲ. ಇದು ಆರೋಪವಲ್ಲ. ಅವರ ಸಂಗೀತದ ಕಸುವಿನ ಪ್ರತೀಕ. ಆದರೆ ಸವರ್ಣದೀರ್ಘ ಸಂಧಿ ಚಿತ್ರದ ಇಂಪಾದ ಹಾಡು ಕೇಳಿದವರೆಲ್ಲ ಮತ್ತೆ ಮನೋಮೂರ್ತಿಯವರ ಸುವರ್ಣ ಯುಗ ಆರಂಭವಾಗಿದೆ ಎಂಬ ನಿಖರ ಅಭಿಪ್ರಾಯವನ್ನೇ ವ್ಯಕ್ತಪಡಿಸುತ್ತಿದ್ದಾರೆ.

ಸವರ್ಣ ದೀರ್ಘ ಸಂಧಿ ಚಿತ್ರದ ಆಡಿಯೋವನ್ನು ಯೋಗರಾಜ ಭಟ್ ಬಿಡುಗಡೆಗೊಳಿಸಿದ್ದಾರೆ. ಅದರಲ್ಲಿರೋ ಒಂದೊಂದು ಹಾಡುಗಳೂ ಕೂಡಾ ಮುಂಗಾರುಮಳೆಯ ಇತಿಹಾಸ ಮತ್ತೆ ಮರುಕಳಿಸೋ ಮುನ್ಸೂಚನೆಯನ್ನೇ ನೀಡುತ್ತಿವೆ. ಕೊಳಲಾದೆನಾ ಹಾಡಂತೂ ಹಳೆಯದ್ದು ಮತ್ತು ಹೊಸತರ ಕೊಂಡಿಯಂತೆ ಮನೋಮೂರ್ತಿ ಸಂಗೀತ ನಿರ್ದೇಶನದಲ್ಲಿ ಮಾಧುರ್ಯ ತುಂಬಿಕೊಂಡು ಮೂಡಿ ಬಂದಿದೆ. ಶ್ರೇಯಾ ಘೋಶಾಲ್ ಜೇನ್ದನಿಯಲ್ಲಿ ಬಂದಿರೋ ಈ ಹಾಡು ಕೇಳಿದ ಪ್ರತಿಯೊಬ್ಬರೂ ಭಾವ ಪರವಶರಾಗಿದ್ದಾರೆ.

ಕೊಳಲಾದೆನಾ ಹಾಡನ್ನು ವೀರೇಂದ್ರ ಶೆಟ್ಟಿ ಬರೆದಿದ್ದಾರೆ. ನಿರ್ದೇಶಕನಾಗಿ, ನಟನಾಗಿ, ನಿರ್ಮಾಪಕನಾಗಿಯೂ ಒಂದಷ್ಟು ಜವಾಬ್ದಾರಿ ವಹಿಸಿಕೊಂಡಿರುವ ಅವರು ಹಾಡುಗಳಿಗೆ ಸಾಹಿತ್ಯವನ್ನೂ ಬರೆದಿದ್ದಾರೆ. ವಿಶೇಷವೆಂದರೆ ಈ ಮೂಲಕ ಅವರು ಗೀತರಚನೆಕಾರರಾಗಿಯೂ ಭರವಸೆ ಮೂಡಿಸಿದ್ದಾರೆ. ಸವರ್ಣದೀರ್ಘ ಸಂಧಿ ಚಿತ್ರ ಈ ಪಾಟಿ ಕ್ರೇಜ್ ಸೃಷ್ಟಿಸಿರೋದಕ್ಕೆ ದಂಡಿ ದಂಡಿ ಕಾರಣಗಳಿವೆ. ಆದರೆ ಅದರಲ್ಲಿ ಹಾಡುಗಳದ್ದೇ ಸಿಂಹಪಾಲು. ಈ ಹಿಂದೆ ಮುಂಗಾರು ಮಳೆ ಚಿತ್ರ ಕೂಡಾ ಆರಂಭದಲ್ಲಿ ಪ್ರೇಕ್ಷಕರನ್ನು ಸೋಕಿದ್ದೇ ಹಾಡುಗಳ ಮೂಲಕ. ಈ ನಿಟ್ಟಿನಲ್ಲಿ ಹೇಳೋದಾದರೆ ಸವರ್ಣದೀರ್ಘ ಸಂಧಿಯ ಮೂಲಕ ಮತ್ತೆ ಮುಂಗಾರು ಶುರುವಾಗಿ ಮನೋಮೂರ್ತಿ ಪಾಲಿನ ಸುರ್ಣಯುಗವೂ ಆರಂಭವಾಗುವ ಲಕ್ಷಣಗಳಿವೆ.

Share This Article
Leave a Comment

Leave a Reply

Your email address will not be published. Required fields are marked *