ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಮಂಜುನಾಥ್ ಅಂತ್ಯಕ್ರಿಯೆ

Public TV
2 Min Read

ಶಿವಮೊಗ್ಗ: ಪಹಲ್ಗಾಮ್‌ನಲ್ಲಿ (Pahalgam) ಉಗ್ರರ ಗುಂಡೇಟಿಗೆ ಬಲಿಯಾದ ಶಿವಮೊಗ್ಗ ಮೂಲದ ಮಂಜುನಾಥ್ ರಾವ್ (Manjunath Rao) ಅವರ ಅಂತ್ಯಕ್ರಿಯೆ ತುಂಗಾ ತೀರದಲ್ಲಿರುವ ರೋಟರಿ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ಪುತ್ರ ಅಭಿಜನ್ ಬ್ರಾಹ್ಮಣ (Brahmin) ಸಂಪ್ರದಾಯದಂತೆ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಅಂತ್ಯ ಸಂಸ್ಕಾರದ ಅಂತಿಮ ವಿಧಿವಿಧಾನವು ಗುಂಡಾ ಭಟ್ಟರ ನೇತೃತ್ವದಲ್ಲಿ ನಡೆಯಿತು. ಇದನ್ನೂ ಓದಿ: ಪಹಲ್ಗಾಮ್ ದಾಳಿ | ಕೂಡಲೇ ಪಾಕ್‌ ತೊರೆಯಿರಿ ಭಾರತೀಯರಿಗೆ ಕೇಂದ್ರ ಸೂಚನೆ

ಮಂಜುನಾಥ್ ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಗ್ಗೆ 10:30ರ ಸುಮಾರಿಗೆ ಬೆಂಗಳೂರಿನಿಂದ ಶಿವಮೊಗ್ಗದಲ್ಲಿರುವ (Shivamogga) ನಿವಾಸಕ್ಕೆ ತರಲಾಯಿತು. ಬಳಿಕ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 12:30ರ ಸುಮಾರಿಗೆ ನಿವಾಸದಲ್ಲಿ ಅಂತಿಮ ವಿಧಿಗಳನ್ನು ಪೂರೈಸಿ ಮಂಜುನಾಥ್‌ರವರ ಅಂತಿಮಯಾತ್ರೆ ಹೊರಟಿತು. ಇದನ್ನೂ ಓದಿ: ನನ್ನನ್ನೂ ಶೂಟ್ ಮಾಡು ಅಂದೆ, ಅವ್ನು ಹೋಗಿ ಮೋದಿಗೆ ಹೇಳು ಅಂದ: ಮಂಜುನಾಥ್ ಪುತ್ರ

ಅಂತಿಮ ಮೆರವಣಿಗೆಯು ಐಬಿ ಸರ್ಕಲ್ ಮೂಲಕ ಕುವೆಂಪು ರಸ್ತೆಗೆ ಬಂದು, ಜೈಲ್ ಸರ್ಕಲ್‌ನಿಂದ ದುರ್ಗಿಗುಡಿ ಮುಖ್ಯರಸ್ತೆ ಮೂಲಕ ಸೀನಪ್ಪ ಶೆಟ್ಟಿ ಸರ್ಕಲ್‌ಗೆ ತಲುಪಿತು. ಅಲ್ಲಿಂದ ಅಮೀರ್ ಅಹಮದ್ ಸರ್ಕಲ್ ಮೂಲಕ ಬಿಹೆಚ್ ರೋಡ್ ನಲ್ಲಿ ಸಾಗಿ, ರೋಟರಿ ಚಿತಾಗಾರವನ್ನು ತಲುಪಿತು. ಇದನ್ನೂ ಓದಿ: ಪಹಲ್ಗಾಮ್‌ ದಾಳಿ – ಪಾಕ್‌ ಉಗ್ರರ ಮಾಹಿತಿ ಕೊಟ್ಟವರಿಗೆ 20 ಲಕ್ಷ ಬಹುಮಾನ ಘೋಷಣೆ

ಅಂತಿಮಯಾತ್ರೆ ವೇಳೆ ಮಾರ್ಗದುದ್ದಕ್ಕೂ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟನ್ನು ಮುಚ್ಚಿ ಅಂತಿಮ ನಮನ ಸಲ್ಲಿಸಿದರು. ರೋಟರಿ ಚಿತಾಗಾರಕ್ಕೆ ಮೃತದೇಹ ತಲುಪುತ್ತಲೇ ಶಾಸಕ ಚನ್ನಬಸಪ್ಪ ಹಾಗೂ ವಿವಿಧ ರಾಜಕೀಯ ಮುಖಂಡರು ಮೃತದೇಹಕ್ಕೆ ಹೆಗಲು ನೀಡಿದರು. ಇದನ್ನೂ ಓದಿ: ದಾಳಿ ಎಸಗಿದ ಉಗ್ರರಿಗೆ, ಸಂಚು ರೂಪಿಸಿದವರಿಗೆ ಕಲ್ಪನೆಗೂ ಮೀರಿದ ರೀತಿ ಶಿಕ್ಷೆ ಕೊಡುತ್ತೇವೆ: ಘರ್ಜಿಸಿದ ಮೋದಿ

ಬಳಿಕ ಪಾರ್ಥಿವ ಶರೀರಕ್ಕೆ ಶಿವಮೊಗ್ಗ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಸರ್ಕಾರಿ ಗೌರವ ನೀಡಿದರು. ಗುಂಡಾಭಟ್ಟರ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಗಳು ನಡೆದಿದ್ದು, ಪುತ್ರ ಅಭಿಜನ್ ಕಣ್ಣೀರಿಡುತ್ತಲೇ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಇದನ್ನೂ ಓದಿ: ಭಾರತದಿಂದ ದಾಳಿ ಭೀತಿ – ಕ್ಷಿಪಣಿ ಪರೀಕ್ಷೆಗೆ ಮುಂದಾದ ಪಾಕ್‌

ಈ ವೇಳೆ ಪತ್ನಿ ಪಲ್ಲವಿ ಸೇರಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಚಿವ ಮಧು ಬಂಗಾರಪ್ಪ ಅವರು ಸ್ಥಳದಲ್ಲಿದ್ದು ಮೃತ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

Share This Article