– ನನ್ನ & ಸಂತುನ ಮುಗಿಸೋಕೆ ಬಂದಿದ್ದ ಅಂತ ಗಂಡನ ಮೇಲೆ ಆರೋಪಿಸಿದ್ದ ಲೀಲಾ ಕೇಸ್‌ಗೆ ಟ್ವಿಸ್ಟ್
ಬೆಂಗಳೂರು ಗ್ರಾಮಾಂತರ: ಮೂರು ಮಕ್ಕಳ ತಾಯಿ ಲೀಲಾ ಮತ್ತು ಸಂತು ಲವ್ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ನಮ್ಮಿಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಎಂದು ಲೀಲಾ ಮಾಡಿದ್ದ ಆರೋಪವನ್ನು ಪತಿ ಮಂಜ ಅಲ್ಲಗಳೆದಿದ್ದಾರೆ. ಪತ್ನಿ ಮತ್ತು ಲವ್ವರ್ ಇಬ್ಬರೂ ಸೇರಿಕೊಂಡು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಮಂಜುನಾಥ್ (ಮಂಜ) ಆರೋಪಿಸಿದ್ದಾರೆ.
ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಪುರದ ಸಂತು ಮನೆಯಲ್ಲಿರುವ ಪತ್ನಿ ಲೀಲಾ ಮತ್ತು ಆಕೆಯ ಪ್ರಿಯಕರ ಸಂತು ಮೇಲೆ ಮಂಜ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಕುರಿತು ಆರೋಪ ಮಾಡಿದ್ದ ಮಂಜನ ಪತ್ನಿ ಲೀಲಾ, ‘ನಿನ್ನೆ ರಾತ್ರಿ 8:15 ರ ಸುಮಾರಿಗೆ ಮನೆಯ ಬಳಿ ಮಂಜು ಬರುತ್ತಿರೋದನ್ನ ನೋಡಿ ಸಂತು ಫ್ರೆಂಡ್ ಫೋನ್ ಮಾಡಿ ಹೇಳಿದ್ರು. ಆಗ ಸಂತು ನನಗೆ ಫೋನ್ ಮಾಡಿ ಬಾಗಿಲು ತೆಗೆಯಬೇಡ ಅಂದಿದ್ರು. ನಾನು ಬಾಗಿಲು ತೆಗೆಯದೆ ಇದ್ದೆ. ಈ ವೇಳೆ ಸಂತು ಬರುತ್ತಿದ್ದಂತೆ ಬಾಗಿಲು ತೆರೆದ ನನ್ನ ಮೇಲೆ ಖಾರದಪುಡಿ ಎರಚಿ ಬಿಯರ್ ಬಾಟಲಿಯಿಂದ ಮಂಜ ದಾಳಿ ನಡೆಸಿದ. ಅಲ್ಲಿಯೇ ಇದ್ದ ಸಂತು ಅಡ್ಡ ಬರುತ್ತಿದ್ದಂತೆ ತಲೆಗೆ ಏಟು ಬಿತ್ತು. ಹೊಡೆದ ಬಿಯರ್ ಬಾಟಲಿಯಿಂದ ಹೊಟ್ಟೆಗೆ ಚುಚ್ಚಲು ಬಂದಾಗ ಸಂತು ಕೈ ಮತ್ತು ಹೊಟ್ಟೆ ಭಾಗದಲ್ಲಿ ಗಾಯ ಆಯ್ತು. ಜನ ಎಲ್ಲ ಹೊರಗೆ ಬರುತ್ತಿದ್ದಂತೆ ಮಂಜ ಅಲ್ಲಿಂದ ಓಡಿ ಹೋಗಿದ್ದಾನೆ’ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮೂರು ಮಕ್ಕಳ ತಾಯಿ ಲೀಲಾಳ ಲವ್ವರ್‌ಗೆ ಬಿಯರ್ ಬಾಟಲ್‌ನಿಂದ ಹೊಡೆದ ಪತಿ ಮಂಜುನಾಥ್
ಕೊಲೆ ಮಾಡೋದಕ್ಕೆ ಹೊಂಚು ಹಾಕಿ ಬಂದಿದ್ದು, ಹನ್ನೊಂದು ವರ್ಷದಿಂದ ಅವನ ಜೊತೆ ಇದೇ ಟಾರ್ಚರ್ ಅನುಭವಿಸಿದ್ದೇನೆ. ನನಗೆ ಮತ್ತು ಸಂತುಗೆ ಜೀವ ಭಯ ಇದೆ. ಕೊಲೆ ಮಾಡೋದಾಗಿ ಹೇಳಿದ್ದಾನೆ. ಪೊಲೀಸರು ಅವನನ್ನ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲೀಲಾ ಒತ್ತಾಯಿಸಿದ್ದಾರೆ. ಈ ಆರೋಪವನ್ನು ಮಂಜ ಅಲ್ಲಗಳೆದಿದ್ದಾರೆ. ಸಂತು ಮತ್ತು ಲೀಲಾ ಆರೋಪಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಸ್ಪಷ್ಟನೆ ನೀಡಿದ್ದಾರೆ.
ರಾತ್ರಿ ಮಕ್ಕಳನ್ನ ನೋಡೋಕೆ ಸಂತು ಮನೆ ಹತ್ತಿರ ಹೋಗಿದ್ದೆ. ಮನೆಯ ಬಾಗಿಲನ್ನ ತೆಗೆಯಲಿಲ್ಲ. ಮೂರು ದಿನದಿಂದ ಮಕ್ಕಳನ್ನ ನೋಡಿರಲಿಲ್ಲ. ಈ ವೇಳೆ ಐದಾರು ಜನರಿಂದ ನನ್ನ ಮೇಲೆ ಅಟ್ಯಾಕ್ ಆಯ್ತು. ನನಗೂ ಕೈ, ಹಣೆಗೆ ಬಾಟಲಿಯಿಂದ ಹೊಡೆದಿದ್ದಾರೆ. ಆಸ್ಪತ್ರೆ ಬಳಿ ಇದ್ದೇನೆ. ನನ್ನ ಹೆಂಡತಿ ತಳ್ಳಿದಾಗ ತಲೆಗೆ ಗಾಯ ಆಗಿದೆ. ಅಲ್ಲಿಂದ ನಾನು ಬಚಾವ್ ಆಗಿ ಬಂದಿರೋದೆ ಹೆಚ್ಚು. ನಿನ್ನೆ ರಾತ್ರಿಯೇ ನನ್ನ ಸಾಯಿಸೋಕೆ ನೋಡಿದ್ರು. ನನ್ನ ಸಂಸಾರವನ್ನೇ ಸಂತು ಹಾಳು ಮಾಡಿಬಿಟ್ಟ. ನನ್ನ ಹೆಂಡತಿಗಾಗಿ ನಾನು ಹೋಗಿಲ್ಲ. ನನ್ನ ಮಕ್ಕಳಿಗಾಗಿ ಹೋಗಿದ್ದು, ಅವರು ಹೇಳ್ತಾ ಇರೋದೆಲ್ಲ ಸುಳ್ಳು. ನನ್ನ ಸಾಯಿಸೋಕೆ ಹೆಂಡ್ತಿ ಮತ್ತು ಸಂತು ಪ್ಲಾನ್ ಮಾಡ್ತಿದ್ದಾರೆ ಎಂದು ಮಂಜ ಪ್ರತಿ ಆರೋಪ ಮಾಡಿದ್ದಾರೆ.