ಮೈತೇಯಿ ಸಮುದಾಯದ ನಾಯಕ ಬಂಧನ – ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಯುವಕರ ಬೆದರಿಕೆ

Public TV
1 Min Read

ಇಂಫಾಲ್: ಮಣಿಪುರದ (Manipur) ರಾಜಧಾನಿ ಇಂಫಾಲ್‌ನಲ್ಲಿ ಮೈತೇಯಿ-ಕುಕಿ ಜನಾಂಗೀಯ ಘರ್ಷಣೆ ಮತ್ತೆ ಹೆಚ್ಚಾಗಿದೆ. ಮೈತೇಯಿ ಸಮುದಾಯದ ಸ್ವಯಂಸೇವಕ ಗುಂಪಾದ ಅರಾಂಬೈ ಟೆಂಗೋಲ್ (ಎಟಿ)ನ ಪ್ರಮುಖ ನಾಯಕನ ಬಂಧನವನ್ನು ವಿರೋಧಿಸಿ ಯುವಕರ ಗುಂಪೊಂದು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದೆ.

ಭದ್ರತಾ ಪಡೆಗಳು ಎಟಿ ನಾಯಕ ಕಾನನ್ ಸಿಂಗ್‌ನನ್ನು ಬಂಧಿಸಿದ ನಂತರ ಇಂಫಾಲ್‌ನಲ್ಲಿ ಶನಿವಾರ ರಾತ್ರಿ ಪ್ರತಿಭಟನೆಗಳು ಭುಗಿಲೆದ್ದವು. ಪ್ರತಿಭಟನಾಕಾರರು ಟೈರ್‌ಗಳನ್ನು ಸುಟ್ಟು ರಸ್ತೆಗಳನ್ನು ತಡೆದರು. ಕೆಲವು ಇಂಫಾಲ್ ನಿವಾಸಿಗಳು ಗುಂಡಿನ ಶಬ್ದ ಕೇಳಿರುವುದಾಗಿ ವರದಿ ಮಾಡಿದ್ದಾರೆ. ಇದನ್ನೂ ಓದಿ:

ಕಪ್ಪು ಟಿ-ಶರ್ಟ್‌ಗಳಲ್ಲಿ ಯುವಕರ ಗುಂಪೊಂದು ಪೆಟ್ರೋಲ್ ತುಂಬಿದ ಬಾಟಲಿಗಳನ್ನು ಹಿಡಿದು ಪ್ರತಿಭಟಿಸಿದೆ. ‘ನಾವು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದೇವೆ. ಪ್ರವಾಹದ ಸಮಯದಲ್ಲಿ ನೀವು ಮಾಡಬೇಕಾದ್ದನ್ನು ನಾವು ಮಾಡಿದ್ದೇವೆ. ಈಗ ನೀವು ನಮ್ಮನ್ನು ಬಂಧಿಸುತ್ತಿದ್ದೀರಿ. ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

2024ರ ಫೆಬ್ರವರಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೊಯಿರಾಂಗ್ಥೆಮ್ ಅಮಿತ್ ಅವರ ಮನೆಯ ಮೇಲಿನ ದಾಳಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಯ ಅಪಹರಣದಲ್ಲಿ ಕಾನನ್ ಸಿಂಗ್ ಪ್ರಮುಖ ಶಂಕಿತನಾಗಿದ್ದಾನೆ.

ಬಿಷ್ಣುಪುರ, ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ತೌಬಲ್ ಮತ್ತು ಕಕ್ಚಿಂಗ್ ಎಂಬ ಐದು ಜಿಲ್ಲೆಗಳಲ್ಲಿ ಐದು ದಿನಗಳವರೆಗೆ ಕರ್ಫ್ಯೂ ವಿಧಿಸಲಾಗಿದ್ದು, ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ.

Share This Article