ಮಣಿಪಾಲ ವಿವಿಯ ಮೂವರು ವಿದ್ಯಾರ್ಥಿಗಳಿಗೆ ಶಂಕಿತ ಕೊರೊನಾ

Public TV
1 Min Read

ಉಡುಪಿ: ಜಿಲ್ಲೆಯಲ್ಲಿ ಈವರೆಗೆ ಎಂಟು ಶಂಕಿತ ಕೊರೊನಾ ಪ್ರಕರಣ ದಾಖಲಾಗಿದೆ. ಈ ಪೈಕಿ ಐದು ಕೇಸ್ ಕೊರೊನಾ ನೆಗೆಟಿವ್ ಅಂತ ವರದಿ ಬಂದಿದೆ. ಇದೀಗ ಮಣಿಪಾಲ ವಿಶ್ವ ವಿದ್ಯಾನಿಲಯದ ಮೂವರು ವಿದ್ಯಾರ್ಥಿಗಳಲ್ಲಿ ಕೊರೊನಾದ ಲಕ್ಷಣಗಳು ಕಂಡು ಬಂದಿದೆ.

ಶಂಕಿತ ಅನಾರೋಗ್ಯ ಪೀಡಿತರನ್ನು ಮಣಿಪಾಲ ಕೆಎಂಸಿಯ ಸ್ಪೆಷಲ್ ವಾರ್ಡಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬ ವಿದ್ಯಾರ್ಥಿ ಅಮೆರಿಕ ಪ್ರವಾಸವನ್ನು ಮುಗಿಸಿ ಮಣಿಪಾಲಕ್ಕೆ ವಾಪಸಾಗಿದ್ದು, ಮತ್ತೊಬ್ಬ ವಿದ್ಯಾರ್ಥಿನಿ ಕುವೈತ್ ದೇಶದಿಂದ ಮಣಿಪಾಲಕ್ಕೆ ವಾಪಸ್ ಬಂದವಳು. ಇಂದಿನ ಮೂರನೇ ಪ್ರಕರಣದಲ್ಲಿ ಮಲೆಷ್ಯಾದಿಂದ ಬಂದ ಮೆಡಿಕಲ್ ವಿದ್ಯಾರ್ಥಿನಿಯಲ್ಲಿ ಸೋಂಕಿನ ಲಕ್ಷಣ ಕಾಣಿಸಿದೆ.

ಎಲ್ಲರೂ ಜ್ವರ, ಶೀತ, ಸೀನುವಿನಿಂದ ಬಳಲುತ್ತಿದ್ದಾರೆ. ಇಬ್ಬರಲ್ಲಿ ಕೊಂಚ ಎದೆ ನೋವು ಕಾಣಿಸಿಕೊಂಡಿದೆ. ಎಲ್ಲರಿಗೂ ಮಣಿಪಾಲದಲ್ಲಿ ಚಿಕಿತ್ಸೆ ನೀಡಲಾಗಿದೆ. ವಾರ್ಡ್ ಗೆ ಯಾರೂ ಪ್ರವೇಶ ಮಾಡದಂತೆ ನಿಗಾ ವಹಿಸಲಾಗಿದೆ. ಮಣಿಪಾಲದಲ್ಲಿ 60 ದೇಶದ ವಿದ್ಯಾರ್ಥಿಗಳು ಇದ್ದಾರೆ. ವಿದೇಶಿ ವಿದ್ಯಾರ್ಥಿಗಳು ತಮ್ಮ ದೇಶಕ್ಕೆ ಹೋಗಿ ಬರುತ್ತಾ ಇರುತ್ತಾರೆ. ಶೈಕ್ಷಣಿಕ ಭಾಗವಾಗಿ ಇಂಟರ್ನ್ ಶಿಪ್‍ಗೆ ವಿದೇಶ ಪ್ರವಾಸ ಮಾಡುತ್ತಾರೆ. ವಿದೇಶದಿಂದ ಮತ್ತು ಹೊರ ರಾಜ್ಯದಿಂದ ಬಂದವರ ಮೇಲೆ ಜಿಲ್ಲಾಡಳಿತ ಮತ್ತು ಮಣಿಪಾಲ ವಿವಿ ನಿಗಾ ಇರಿಸಿದೆ. ಶಂಕಿತರು ಸಂಪರ್ಕಿಸಿದವರನ್ನೂ ತಪಾಸಣೆ ಮಾಡಲಾಗಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಿದಾಗ ದೇಹದ ತಾಪಮಾನದ ಮೇಲೆ ಸಂಶಯ ಬಂದಿತ್ತು. ಮಣಿಪಾಲ ಬಂದ ಮೇಲೆ ಕೊರೊನಾದ ಲಕ್ಷಣಗಳು ಕಂಡು ಬಂದಿರುವುದರಿಂದ ಅವರನ್ನು ಶಂಕಿತರು ಎಂದು ನಿರ್ಧರಿಸಲಾಗಿದೆ. ಮೂವರು ವಿದ್ಯಾರ್ಥಿಗಳ ದೇಹದ ಸ್ಯಾಂಪಲನ್ನು ಬೆಂಗಳೂರಿಗೆ ರವಾನೆ ಮಾಡಲಾಗಿದ್ದು, ಎರಡು ದಿನದಲ್ಲಿ ವರದಿ ಬರಲಿದೆ.

ವಿವಿಯಲ್ಲಿ ಸುಮಾರು 60 ದೇಶದ ವಿದ್ಯಾರ್ಥಿಗಳು ಇರುವುದರಿಂದ ಸಹಜವಾಗಿಯೇ ಮಣಿಪಾಲ ವಿಶ್ವವಿದ್ಯಾನಿಲಯ ಆತಂಕಗೊಂಡಿದೆ. ಉತ್ತರ ಭಾರತದ ಎಲ್ಲಾ ರಾಜ್ಯದ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕೇರಳದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *