ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅತ್ಯಂತ ಬಡ ಅಭ್ಯರ್ಥಿ

Public TV
1 Min Read

ಲಕ್ನೋ: ಲೋಕಸಭಾ ಚುನಾವಣೆಗೆ ಪಕ್ಷಗಳಿಂದ ಮತ್ತು ಪಕ್ಷೇತರ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸುತ್ತಿದ್ದಾರೆ. ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸುವ ವೇಳೆ ತಮ್ಮ ಆಸ್ತಿಯನ್ನು ಘೋಷಣೆ ಮಾಡಿಕೊಳ್ಳುತ್ತಾರೆ. ಕೋಟಿ ಒಡೆಯರಾಗಿರುವ ಹಲವು ಅಭ್ಯರ್ಥಿಗಳು ಚುನಾವಣೆ ಅಖಾಡದಲ್ಲಿದ್ದಾರೆ. ಮುಜಾಫರನಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಮಾಂಗೆರಾಮ್ ಕಶ್ಯಪ್ ಅತ್ಯಂತ ಬಡ ಅಭ್ಯರ್ಥಿ ಎಂದು ವರದಿಯಾಗಿದೆ.

ಎಲ್‍ಎಲ್‍ಬಿ ಪದವಿಧರ ಆಗಿರುವ ಮಂಗೆರಾಮ್ ಕಶ್ಯಪ್ ಬ್ಯಾಂಕ್ ಖಾತೆ ಜೀರೋ ಬ್ಯಾಲೆನ್ಸ್ ಹೊಂದಿದೆ. ಒಂದು ಬೈಕ್ ಹೊಂದಿರುವ ಮಂಗೆರಾಮ್ ಕೆಲವೊಮ್ಮೆ ತಮ್ಮ ವಾಹನಕ್ಕೆ ಪೆಟ್ರೋಲ್ ಹಾಕಿಸಲು ಪರದಾಡುವ ಪರಿಸ್ಥಿತಿಯಲ್ಲಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ತಮ್ಮದೇ ಬೈಕ್ ಮೇಲೆಯೇ ಗ್ರಾಮಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ.

ಈಗಾಗಲೇ ಮೂರು ಚುನಾವಣೆಗಳಲ್ಲಿ ಸೋಲು ಕಂಡಿರುವ ಮಂಗೆರಾಮ್ ಛಲ ಬಿಡದೇ ಈ ಬಾರಿಯೂ ಸ್ಪರ್ಧೆ ಮಾಡಿದ್ದಾರೆ. ಪತ್ನಿ ಮತ್ತು ಮಕ್ಕಳ ವಿರೋಧದ ನಡುವೆಯೂ ಮಂಗೆರಾಮ್ ತಮ್ಮ ಪಕ್ಷದ ಬಾವುಟ ಮತ್ತು ಬ್ಯಾನರ್ ಹಿಡಿದುಕೊಂಡು ಏಕಾಂಗಿಯಾಗಿ ಪ್ರಚಾರ ನಡೆಸುತ್ತಿದ್ದಾರೆ.

ಅಲೆಗಳಿಗೆ ಹೆದರಿ ನೌಕೆ ಎಂದು ತನ್ನ ಪ್ರಯಾಣ ಆರಂಭಿಸಲು ಹಿಂದೇಟು ಹಾಕಲ್ಲ. ಪ್ರಯತ್ನ ಮಾಡುವವರಿಗೆ ಸೋಲು ಇಲ್ಲ ಎಂದು ನಾನು ನಂಬಿದ್ದೇನೆ ಎಂದು ಮಂಗೆರಾಮ್ ಕಶ್ಯಪ್ ಹೇಳುತ್ತಾರೆ.

ಮೂಲತಃ ಉತ್ತರಖಂಡದವರಾಗಿರುವ ಮಂಗೆರಾಮ್, ಬಡತನದ ಮನೆಯಲ್ಲಿ ಹುಟ್ಟಿದ ವ್ಯಕ್ತಿ. ಮನೆಯ ಆರ್ಥಿಕ ಸ್ಥಿತಿ ಸರಿ ಇರದಿದ್ದ ಕಾರಣ ಪೋಷಕರು ಮಂಗೆರಾಮ್ ಅವರಿಗೆ ಓದಿಸಲು ಹಿಂದೇಟು ಹಾಕಿದ್ದರು. ಓದಬೇಕೆಂಬ ಹಂಬಲದಿಂದ ಮನೆಯಿಂದ ಹೊರ ಬಂದ ಮಂಗೆರಾಮ್ ಮುಜಾಫರನಗರದಲ್ಲಿ ಬಿಎಸ್‍ಸಿ, ಬಿಎಡ್ ಜೊತೆಗೆ ಎಲ್‍ಎಲ್‍ಬಿ ಪದವಿ ಓದಿದ್ದಾರೆ. ವಕೀಲ ವೃತ್ತಿ ಆರಂಭಿಸುವುದರ ಜೊತೆಗೆ 2000ರಲ್ಲಿ ಮಜದೂರ್ ಯೂನಿಯನ್ ಎಂಬ ಪಕ್ಷ ಸ್ಥಾಪಿಸಿ ಚುನಾವಣೆಗೆ ಸ್ಪರ್ಧಿಸುತ್ತಾ ಬಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *