ಕೋಮು ದ್ವೇಷ, ಪ್ರಚೋದನಾ ಮೆಸೇಜ್ ಹಾಕಿದ ಆರೋಪಿ ಅಂದರ್

Public TV
1 Min Read

– ಕೋಮು ದ್ವೇಷದ ಸಂದೇಶ ಹಾಕಬೇಡಿ ಕಮೀಷನರ್ ಎಚ್ಚರಿಕೆ

ಮಂಗಳೂರು: ಕೋಮು ದ್ವೇಷ ಪ್ರಚೋದಿಸುವ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ವ್ಯಕ್ತಿಯನ್ನು ಮಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಮೊಯಿದ್ದೀನ್ ಹಮೀಝ್ ಬಂಧಿತ ಆರೋಪಿ. ಆರೋಪಿ ಹಮೀಝ್ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಪ್ರಚೋದಿಸುವ ಪೋಸ್ಟ್ ಗಳನ್ನು ಹಾಕಿ, ದ್ವೇಷ ಹರಡಲು ಯತ್ನಿಸಿದ್ದ. ಅಲ್ಲದೆ ಪೊಲೀಸರ ವಿರುದ್ಧವೂ ಅವಹೇಳನಕಾರಿ, ಜೀವ ಬೆದರಿಕೆ ಬರಹಗಳನ್ನು ಪೋಸ್ಟ್ ಮಾಡಿದ್ದ. ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸೈಬರ್ ಕ್ರೈಂ ಠಾಣೆಯ ಪೊಲೀಸರು ಆರೋಪಿ ಮೊಯಿದ್ದೀನ್ ಹಮೀಝ್‍ನನ್ನು ಬಂಧಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿಸೆಂಬರ್ 19ರಂದು ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಬಳಿಕ ನಡೆದ ಗೊಲೀಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷವನ್ನು ಪ್ರಚೋದಿಸುವ ಸಂದೇಶಗಳು ರವಾನೆಯಾಗುತ್ತದೆ ಎನ್ನುವ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಎರಡು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂಟರ್ನೆಟ್ ಸೇವೆಯನ್ನು ಪೊಲೀಸರು ಸ್ಥಗಿತಗೊಳಿಸಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕವೂ ಕೆಲವು ಸಮಾಜ ಘಾತುಕರು ತಮ್ಮ ಚಾಳಿಯನ್ನು ಮುಂದುವರಿಸಿದ್ದರು, ಕೋಮು ದ್ವೇಷ ಪ್ರಚೋದಿಸುವ ಸಂದೇಶ ರವಾನಿಸುತ್ತಿದ್ದರು. ಹೀಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಕೋಮು ದ್ವೇಷ ಹರಡಬೇಡಿ:
ಕೋಮು ದ್ವೇಷ ಪ್ರಚೋದಿಸುವ ಯಾವುದೇ ರೀತಿಯ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬೇಡಿ ಎಂದು ಮಂಗಳೂರು ಜನತೆಗೆ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಮನವಿ ಮಾಡಿದ್ದಾರೆ. ಕೋಮು ದ್ವೇಷ ಅಥವಾ ಹಿಂಸೆಯನ್ನು ಪ್ರಚೋದಿಸುವ ಯಾವುದೇ ರೀತಿಯ ಪೋಸ್ಟ್ ಗಳನ್ನು ಫೇಸ್‍ಬುಕ್, ವಾಟ್ಸಪ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದರಿಂದ ಅಥವಾ ತಮಗೆ ಬಂದ ಇಂತಹ ಸಂದೇಶಗಳನ್ನು ಇನ್ನೊಬ್ಬರಿಗೆ ರವಾನಿಸುವುದರಿಂದ ದೂರ ಉಳಿಯುವಂತೆ ಮನವಿ ಮಾಡಿದ್ದಾರೆ. ಇಂತಹ ಸಂದೇಶಗಳನ್ನು ರವಾನಿಸುವುದು ಕಾನೂನು ಬಾಹಿರ ಹಾಗೂ ಅಂಥವರ ವಿರುದ್ಧ ಕಠೀಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *