ಯಕ್ಷಗಾನದ ಸಂಭಾಷಣೆಯಲ್ಲಿ ನರೇಂದ್ರ ಹೆಸರು ಉಲ್ಲೇಖ- ಕಲಾವಿದರಿಂದ ಮುಚ್ಚಳಿಕೆ ಬರೆಸಿಕೊಂಡ ಪೊಲೀಸರು

Public TV
1 Min Read

ಮಂಗಳೂರು: ಯಕ್ಷಗಾನದ ಸಂಭಾಷಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹೆಸರು ಉಲ್ಲೇಖಿಸಿ ಸಂಭಾಷಣೆ ನಡೆಸಿದ್ದು ವಿವಾದಕ್ಕೆ ಕಾರಣವಾಗಿದ್ದು, ಕಲಾವಿದರನ್ನು ಠಾಣೆಗೆ ಕರೆಸಿಕೊಂಡು ಮುಚ್ಚಳಿಕೆ ಬರೆಸಿಕೊಂಡ ಪೊಲೀಸರ ವಿರುದ್ಧ ಹಿಂದೂ ಪರ ಸಂಘಟನೆಗಳು ಕಿಡಿಕಾರಿವೆ.

ಛತ್ರಪತಿ ಶಿವಾಜಿ ಮಹಾರಾಜನ ಕಥೆಯುಳ್ಳ ಪ್ರಸಂಗದ ಯಕ್ಷಗಾನ ನಡೆಯುತ್ತಿದ್ದಾಗ ಶಿವಾಜಿಯ ಗುರು ಸಮರ್ಥ ರಾಮದಾಸನ ಪಾತ್ರ ಮಾಡಿದ್ದ ಕಲಾವಿದ ಗಣರಾಜ ಭಟ್ ಬಡೆಕ್ಕಿಲ,”ಭಾರತದ ಸ್ವಚ್ಛತೆಗಾಗಿ ನರೇಂದ್ರನಂತೆ ನೀನು ಕೇಸರಿಯ ತಂಡ ಕಟ್ಟಬೇಕು. ರಾತ್ರಿ ವೇಳೆ ಗೋವುಗಳನ್ನು ಕದ್ದೊಯ್ಯುವ ದುಷ್ಟರನ್ನು ಸದೆಬಡಿಯಲು ಜಾಗರಣ ನಿಲ್ಲುವಂತೆ ತರುಣ ಪಡೆಯನ್ನು ಜಾಗರಣ ವೇದಿಕೆಯ ರೂಪದಲ್ಲಿ ಕಟ್ಟಬೇಕಿದೆ” ಎನ್ನುವ ಉಪದೇಶವನ್ನು ಶಿವಾಜಿಗೆ ಹೇಳುತ್ತಾರೆ. ಇದನ್ನು ಓದಿ: ಇವನರ್ವ, ಇವನರ್ವ ಎಂದು ಡೈಲಾಗ್ ಹೇಳಿದ್ದಕ್ಕೆ ಯಕ್ಷಗಾನ ಹಾಸ್ಯ ಕಲಾವಿದ ಅಮಾನತು!

ಕಥೆಯ ರೂಪವನ್ನು ಈಗಿನ ರಾಜಕೀಯ ಸನ್ನಿವೇಶಕ್ಕೆ ತಕ್ಕಂತೆ ಬದಲಿಸಿಕೊಂಡು ಪ್ರಧಾನಿ ಮತ್ತು ಹಿಂದೂ ಸಂಘಟನೆಯ ಹೆಸರು ಹೇಳಿದ್ದು ಬಿಜೆಪಿ ವಿರೋಧಿಗಳ ಕಣ್ಣು ಕೆಂಪಾಗಿಸಿದ್ದು ಕಾಂಗ್ರೆಸ್ಸಿಗರಿಂದ ಆಕ್ಷೇಪ ಕೇಳಿಬಂದಿದೆ. ಇದರಿಂದಾಗಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಮಾಜಿ ಸಚಿವ ರಮಾನಾಥ ರೈ ದಕ್ಷಿಣ ಕನ್ನಡ ಎಸ್‍ಪಿಗೆ ಫೋನ್ ಮಾಡಿ ಕಲಾವಿದರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಆದರೆ ಲಿಖಿತವಾಗಿ ಯಾವುದೇ ದೂರು ಸಲ್ಲಿಸಿಲ್ಲ. ಇದನ್ನೇ ನೆಪ ಮಾಡಿಕೊಂಡ ಪುತ್ತೂರು ಠಾಣೆ ಪೊಲೀಸರು ಕಲಾವಿದ ಗಣರಾಜ ಭಟ್ಟರನ್ನು ಠಾಣೆಗೆ ಕರೆಸಿ, ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

ಈ ಯಕ್ಷಗಾನ ಕೆಲವು ದಿನಗಳ ಹಿಂದೆ ಪುತ್ತೂರು ತಾಲೂಕಿನ ದೇಂತಡ್ಕದಲ್ಲಿ ನಡೆದಿತ್ತು. ಇದೀಗ ರಮಾನಾಥ್ ರೈ ಅವರ ಫೋನ್ ಕರೆಗೆ ಪೊಲೀಸರು ಕಲಾವಿದನನ್ನು ಠಾಣೆಗೆ ಕರೆಸಿ, ವಿಚಾರಣೆ ನಡೆಸಿದ್ದು ಹಿಂದೂ ಸಂಘಟನೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *