ಕೊನೆಗೂ ಪೂರ್ಣವಾಯ್ತು ಪಂಪ್‍ವೆಲ್ ಫ್ಲೈಓವರ್ – ಜ. 31 ರಂದು ಸಂಚಾರಕ್ಕೆ ಮುಕ್ತ

Public TV
1 Min Read

ಮಂಗಳೂರು: ದಶಕದ ಕಾಮಗಾರಿಯ ಇತಿಹಾಸ ಹೊಂದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪಂಪ್‍ವೆಲ್ ಫ್ಲೈಓವರ್ ಕಾಮಗಾರಿ ಪೂರ್ಣಗೊಂಡಿದ್ದು, ಜನವರಿ 31ರ ನಂತರ ಸಂಚಾರಕ್ಕೆ ಮುಕ್ತವಾಗಲಿದೆ.

ಜನವರಿ 31ರ ಬೆಳಗ್ಗೆ ಫ್ಲೈಓವರ್ ಉದ್ಘಾಟನೆಯಾಗಲಿದ್ದು ಅಂದಿನಿಂದ ಈ ರಸ್ತೆ ಸಾರ್ವಜನಿಕರ ವಾಹನಗಳಿಗೆ ಮುಕ್ತವಾಗಲಿದೆ.

2010ರಲ್ಲಿ ನವಯುವ ಕಂಪನಿ ಗುತ್ತಿಗೆ ಪಡೆದು ಆರಂಭಿಸಿದ್ದ 600 ಮೀಟರ್ ಉದ್ದದ ಫ್ಲೈಓವರ್ ಕಾಮಗಾರಿ 2013ಕ್ಕೆ ಮುಕ್ತಾಯಗೊಳ್ಳಬೇಕಿತ್ತು. 10 ವರ್ಷವಾದರೂ ಪೂರ್ಣಗೊಳ್ಳದೇ ಹತ್ತಾರು ಡೆಡ್ ಲೈನ್ ಗಳನ್ನು ಕಂಡಿರುವ ಕಾಮಗಾರಿ ಈಗ ಪೂರ್ಣಗೊಂಡಿದೆ. ಕಾಮಗಾರಿ ಪೂರ್ಣಗೊಳ್ಳದ ಕಾರಣ ಕರಾವಳಿ ಭಾಗದಲ್ಲಿ ಸಾಮಾಜಿಕ ತಾಣಗಳಲ್ಲಿ ಫ್ಲೈಓವರ್ ಕಾಮಗಾರಿ ಭಾರೀ ಟ್ರೋಲ್ ಆಗಿತ್ತು.

ಪೂರ್ಣಗೊಂಡಿರುವ ಪಂಪ್‍ವೆಲ್  ಮೇಲ್ಸೇತುವೆಯ ಕಾಮಗಾರಿಯನ್ನು ಬುಧವಾರದಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ರವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ವೀಕ್ಷಿಸಿದ್ದರು. ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ್ ಕಾಮತ್, ಮನಪಾ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಡಿ.31ರಂದು ಸಂಸದ ನಳಿನ್‍ಕುಮಾರ್ ಕಟೀಲು ಅವರ ಅಧ್ಯಕ್ಷತೆಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಂಪ್‍ವೆಲ್ ಫ್ಲೈಓವರ್ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕಾಮಗಾರಿಯ ಮೇಲ್ವಿಚಾರಣೆ ಜವಾಬ್ದಾರಿ ಜಿಲ್ಲಾಧಿಕಾರಿಯವರಿಗೆ ನೀಡಲಾಗಿತ್ತು.

ಎನ್‍ಎಚ್‍ಎಐ ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರು ಹಾಗೂ ಮಂಗಳೂರು ತಹಸೀಲ್ದಾರರು ಇರುವ ನಾಲ್ಕು ಮಂದಿಯ ಸಮಿತಿ ಕಾಮಗಾರಿಯ ದೈನಂದಿನ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಈ ಸಮಿತಿ ಸದಸ್ಯರ ಜತೆ ಜಿಲ್ಲಾಧಿಕಾರಿ ದಿನಂಪ್ರತಿ ಸಭೆ ನಡೆಸುತ್ತಿದ್ದರು. ಸಭೆ ಬಳಿಕ ಜಿಲ್ಲಾಧಿಕಾರಿ ಸಂಬಂಧಪಟ್ಟವರಿಗೆ ನಿರ್ದೇಶನ ನೀಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *