ಕೆಂಡವಾಗಿದ್ದ ಮಂಗ್ಳೂರು ಸ್ವಲ್ಪಮಟ್ಟಿಗೆ ಶಾಂತ – ಗುಂಡಿಗೆ ಬಲಿಯಾದವರ ಅಂತ್ಯಕ್ರಿಯೆ

Public TV
2 Min Read

– ಮುನ್ನೆಚ್ಚರಿಕೆಯಾಗಿ ಇನ್ನೆರಡು ದಿನ ಕರ್ಫ್ಯೂ ಮುಂದುವರಿಕೆ

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗುರುವಾರ ಹೊತ್ತಿ ಉರಿದಿದ್ದ ಮಂಗಳೂರಿನಲ್ಲಿ ಪರಿಸ್ಥಿತಿ ಸದ್ಯ ಶುಕ್ರವಾರದ ಮಟ್ಟಿಗೆ ಶಾಂತವಾಗಿದೆ. ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರ ಅಂತ್ಯಕ್ರಿಯೆ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ನಡೆದಿದೆ.

ನೌಶೀನ್ ಮತ್ತು ಅಬ್ದುಲ್ ಜಲೀಲ್ ಮರಣೋತ್ತರ ಪರೀಕ್ಷೆ ವೆನ್‍ಲಾಕ್ ಆಸ್ಪತ್ರೆಯಲ್ಲಿ ನಡೆಯಿತು. ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಇಂದು ಸಂಜೆ ಮೆಕಾನಿಕ್ ನೌಶೀನ್ ಅಂತ್ಯಕ್ರಿಯೆ ಕುದ್ರೋಳಿಯಲ್ಲಿಯೂ, ಮೀನು ಮಾರಾಟಗಾರ ಅಬ್ದುಲ್ ಜಲೀಲ್ ಅಂತ್ಯಕ್ರಿಯೆ ಕಂದುಕ್‍ನಲ್ಲಿ ನೆರವೇರಿತು. ಕರ್ಫ್ಯೂ  ನಡುವೆಯೂ ಇಂದು ಬೆಳಗಿನ ಜಾವ ಉಪ್ಪಿನಂಗಡಿ, ಪುಂಜಾಲಕಟ್ಟೆ, ಕುಪ್ಪಟ್ಟಿಯಲ್ಲಿ ಬಸ್‍ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಬಸ್ ಗಾಜುಗಳು ಪುಡಿ ಪುಡಿಯಾಗಿದೆ.

ಕುದ್ರೋಳಿ ಸಮೀಪ ಕೆಲ ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಅದೃಷ್ಟವಶಾತ್ ಯಾವುದೇ ಅನಾಹುತ ಆಗಿಲ್ಲ. ಮಂಗಳೂರು ನಗರದಲ್ಲಿ ವಾಹನ ಸಂಚಾರ ಸಂಪೂರ್ಣ ಕಡಿಮೆ ಆಗಿದ್ದು, ಎಲ್ಲೆಲ್ಲೂ ಪೊಲೀಸ್ ಸರ್ಪಗಾವಲಿದೆ. ಮನೆಯಿಂದ ಹೊರಬರಬೇಡಿ ಅಂತಾ ಜನರಿಗೆ ಪೊಲೀಸರು ಮೈಕ್‍ನಲ್ಲಿ ಕೂಗಿ ಕೂಗಿ ಹೇಳುತ್ತಿದ್ದರು. ಆದರೂ ಕುಂಟು ನೆಪ ಹೇಳಿಕೊಂಡು ಹೊರಬರುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದರು. ಗುಪ್ತಚರ ಇಲಾಖೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಮಂಗಳೂರಿನಲ್ಲಿ ಬೀಡುಬಿಟ್ಟಿದ್ದು, ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಮಂಗಳೂರಿನಲ್ಲಿ ಪರಿಸ್ಥಿತಿ ಹತೋಟಿಗೆ ಬರುತ್ತಿದ್ದಂತೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇಡೀ ದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮನೆಯಲ್ಲೇ ಉಳಿದಿದ್ದ ಸಿಎಂ, ಪೊಲೀಸ್ ಅಧಿಕಾರಿಗಳು ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆಗೆ ಸಭೆ ನಡೆಸಿದರು. ಸಿಎಂ ಯಡಿಯೂರಪ್ಪ ಅವರು ಮಂಗಳೂರಿಗೆ ಶನಿವಾರ ಭೇಟಿ ನೀಡುತ್ತಿದ್ದು, ಸಕ್ರ್ಯೂಟ್ ಹೌಸ್‍ನಲ್ಲಿ ಅಧಿಕಾರಿಗಳ ಸಭೆ ನಡೆಸಿ, ಗೋಲಿಬಾರ್‌ಗೆ ಕಾರಣವಾದ ಅಂಶಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

ಮಂಗಳೂರಿನಲ್ಲಿ ಇಂದು ಕೂಡ ಕರ್ಫ್ಯೂ ಮುಂದುವರಿಸಿದ್ದು, ಇಂಟರ್‍ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ನಾಳೆಯೂ ಕೂಡ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ. ಮಾನ್ಯತಾ ಪತ್ರ ಹೊಂದಿಲ್ಲದ ಕಾರಣಕ್ಕಾಗಿ ವಶಕ್ಕೆ ಪಡೆದಿದ್ದ ಪತ್ರಕರ್ತರನ್ನು ಪೊಲೀಸರು ರಿಲೀಸ್ ಮಾಡಿದ್ದಾರೆ. ಈ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಕರ್ನಾಟಕ ಸರ್ಕಾರಕ್ಕೂ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *