ಕಣ್ಮನ ಸೆಳೀತಿದೆ ಮಂಗಳೂರು ದಸರಾದ ಲೈಟಿಂಗ್ಸ್

Public TV
2 Min Read

ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ಎಲ್ಲಿ ನೋಡಿದರೂ ಈಗ ಬೆಳಕಿನ ಚಿತ್ತಾರ. ರಸ್ತೆ ಬದಿಯೆಲ್ಲಾ ವಿದ್ಯುತ್ ದೀಪಗಳು ರಂಗು ಮೂಡಿಸಿದೆ. ನಗರದ ಸುಮಾರು 7 ಕಿಲೋ ಮೀಟರ್ ಉದ್ದಕ್ಕೆ ಬರೋಬ್ಬರಿ 22 ಲಕ್ಷ ಬಲ್ಬ್ ಗಳು ಪ್ರಕಾಶಮಾನವಾಗಿ ಬೆಳಗುತ್ತಿದೆ.

ಹಿಂದೆಲ್ಲಾ ದಸರಾ ಎಂದರೆ ನೆನಪಾಗುತ್ತಿದ್ದದ್ದು ಮೈಸೂರು ದಸರಾ ಮಾತ್ರ. ಆದರೆ ಈಗ ಹಾಗಲ್ಲ, ಮಂಗಳೂರು ದಸರಾ ಕೂಡ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆಯುತ್ತಿದೆ. ದಸರಾ ಇಷ್ಟರ ಮಟ್ಟಿಗೆ ಖ್ಯಾತಿ ಗಳಿಸಲು ಪ್ರಮುಖ ಕಾರಣ ಇಲ್ಲಿನ ವಿದ್ಯುತ್ ದೀಪಗಳ ವರ್ಣಮಯ ಶೃಂಗಾರ. ಮಂಗಳೂರು ದಸರಾ ನಡೆಯುತ್ತಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ಸಂಜೆಯಾಗುತ್ತಿದ್ದಂತೆ ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತದೆ.

ಕ್ಷೇತ್ರ ಮಾತ್ರವಲ್ಲದೆ ದಸರಾದ ಪ್ರಯುಕ್ತ ದಸರಾ ಮೆರವಣಿಗೆ ಹಾದುಹೋಗುವ ನಗರದ ಸುಮಾರು 7 ಕಿಲೋ ಮೀಟರ್ ರಸ್ತೆಯುದ್ದಕ್ಕೂ ಕ್ಷೇತ್ರದ ವತಿಯಿಂದ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಈ ಬಾರಿಯ ದಸರಾಕ್ಕಾಗಿ 10 ಲಕ್ಷ ದೊಡ್ಡ ಪ್ರಮಾಣದ ಬಲ್ಬ್ ಗಳು ಸೇರಿದಂತೆ ಒಟ್ಟು 22 ಲಕ್ಷ ಬಲ್ಬ್ ಗಳಿಂದ ಶೃಂಗರಿಸಲಾಗಿದೆ. ಇಡೀ ನಗರ ಮತ್ತು ಕುದ್ರೋಳಿ ಕ್ಷೇತ್ರದ ಆವರಣ ಝಗಮಗಿಸುವ ಸೌಂದರ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದೆ.

ದಸರಾ ಹಿನ್ನೆಲೆಯಲ್ಲಿ ನವರಾತ್ರಿ ಆರಂಭಗೊಂಡ ದಿನದಿಂದ 9 ದಿನಗಳ ಕಾಲ ಸಂಜೆ 6 ಗಂಟೆಯಾಗುತ್ತಿದ್ದಂತೆ ನಗರದೆಲ್ಲೆಲ್ಲಾ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಸದಾ ಜನಜಂಗುಳಿ ವಾಹನಗಳಿಂದ ತುಂಬಿರುವ ನಗರದ ರಸ್ತೆಗಳೆಲ್ಲಾ ಈ ಸಂದರ್ಭದಲ್ಲಿ ಬೆಳಕಿನ ಚಿತ್ತಾರದಿಂದ ಮಧುವಣಗಿತ್ತಿಯಂತೆ ಅಲಂಕೃತವಾಗುತ್ತದೆ. ದೇಶದ ಬೇರೆಲ್ಲೂ ಇಷ್ಟು ಪ್ರಮಾಣದಲ್ಲಿ ಬೆಳಕಿನ ಸಂಯೋಜನೆ ಕಾಣಸಿಗದು. ಇಷ್ಟೊಂದು ಪ್ರಮಾಣದ ಬೆಳಕಿನ ಚಿತ್ತಾರಕ್ಕಾಗಿ ಕ್ಷೇತ್ರದಿಂದ ಬರೋಬ್ಬರಿ 75 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತದೆ. ಸರ್ಕಾರದ ಅಥವಾ ಇನ್ಯಾವುದೇ ಅನುದಾನ ಇಲ್ಲದೆ ಕ್ಷೇತ್ರದ ವತಿಯಿಂದಲೇ ಈ ಬೆಳಕಿನ ಸಂಯೋಜನೆ ಮತ್ತು ಉತ್ಸವ ಮಾಡುವುದು ಇಲ್ಲಿನ ವಿಶೇಷ. ಅಂದಹಾಗೆ, ಈ ದಸರಾ ಸಂದರ್ಭದಲ್ಲಿ ದೇಶ- ವಿದೇಶದ ಅಸಂಖ್ಯಾತ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ. ರಾಜ್ಯದ ವಿವಿಧ ಕಡೆಯಿಂದ ಆಸಕ್ತರೂ ಈ ಉತ್ಸವಕ್ಕೆ ಆಗಮಿಸಿ, ಸಂಭ್ರಮಿಸುತ್ತಾರೆ.

ಹತ್ತು ದಿನಗಳ ಮಂಗಳೂರು ದಸರಾ ಉತ್ಸವ ಈ ಬಾರಿ ಇಂದು(ಅಕ್ಟೋಬರ್ 8) ಕೊನೆಗೊಳ್ಳುತ್ತದೆ. ಹತ್ತು ದಿನಗಳ ಕಾಲ ಪೂಜಿಸಿದ ನವದುರ್ಗೆಯರು ಮತ್ತು ಗಣಪತಿ, ಶಾರದಾ ಮಾತೆಯ ವಿಗ್ರಹವನ್ನು ಶೋಭಾಯಾತ್ರೆಯಲ್ಲಿ ನಗರ ಪ್ರದಕ್ಷಿಣೆ ಬರಲಾಗುವುದು. ವಿದ್ಯುತ್ ದೀಪಗಳ ಆಕರ್ಷಣೆಯ ಜೊತೆಗೆ ನೂರಾರು ಸ್ತಬ್ಧಚಿತ್ರಗಳ ಜೊತೆ ಸಾಗುವ ಮೆರವಣಿಗೆ ಚಿತ್ತಾಕರ್ಷಕ. ಹೀಗಾಗಿ ಕೊನೆಯ ದಿನದ ವಿಜಯದಶಮಿಯ ಈ ವೈಭವದಲ್ಲಿ ಪಾಲ್ಗೊಳ್ಳುವುದಕ್ಕಾಗಿಯೇ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಕುದ್ರೋಳಿ ಕ್ಷೇತ್ರದ ರೂವಾರಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರ ಕನಸಿನಂತೆ ಮಂಗಳೂರು ದಸರಾ ನಡೆಯುತ್ತಿದ್ದು ಪ್ರತಿ ವರ್ಷವೂ ಅಭೂತಪೂರ್ವ ಎನ್ನುವಂತೆ ಜನಾಕರ್ಷಣೆ ಪಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *