ಕಾಶಿ ಮಠದ ಸ್ವಾಮೀಜಿ ಅಪಹರಣದ ಸಂಚು ಬಯಲು

Public TV
1 Min Read

ಮಂಗಳೂರು: ಎನ್‍ಸಿಐಬಿ ಇಲಾಖೆಯ ಡೈರೆಕ್ಟರ್ ಅಂತ ಹೇಳಿಕೊಂಡು ಮಂಗಳೂರು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಸ್ಯಾಮ್ ಪೀಟರ್‌ನ ಮತ್ತಷ್ಟು ವಂಚನೆ ಬಯಲಿಗೆ ಬಂದಿವೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೊಲೀಸ್ ಆಯುಕ್ತ ಡಾ.ಹರ್ಷ ಅವರು, ಸ್ಯಾಮ್ ಪೀಟರ್ ಸೇರಿದಂತೆ ಬಂಧಿತ 8 ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅನೇಕ ವಿಚಾರಗಳು ಹೊರ ಬಿದ್ದಿವೆ. ಜಿಎಸ್‍ಬಿ ಕಾಶಿ ಮಠದ ಸಂಯಮೀಂದ್ರ ಸ್ವಾಮೀಜಿಯನ್ನು ಅಪಹರಿಸಲು ಸಂಚು ಹೂಡಿದ್ದಾಗಿ ಸ್ಯಾಮ್ ಪೀಟರ್ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

ಕಾಶಿ ಮಠದಿಂದ ಬಹಿಷ್ಕಾರಕ್ಕೆ ಒಳಗಾಗಿ ತಲೆಮರೆಸಿಕೊಂಡಿರುವ ರಾಘವೇಂದ್ರ ಸ್ವಾಮಿ, ಮಠದ ವಿವಾದ ಇತ್ಯರ್ಥ ಪಡಿಸಲು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಡುಪಿ ಮೂಲದ ರಾಮಚಂದ್ರ ನಾಯಕ್ ಕಾಶಿ ಮಠದ ವಿವಾದ ಬಗೆಹರಿಸಲು ಸ್ಯಾಮ್ ಪೀಟರ್ ಗೆ ದೊಡ್ಡ ಮೊತ್ತದ ಹಣ ನೀಡಿದ್ದ. ಇದೇ ಕಾರಣಕ್ಕೆ ಮಂಗಳೂರಿಗೆ ಬಂದು ತನಿಖಾದಳದ ಸೋಗಿನಲ್ಲಿ ಲಾಡ್ಜ್ ಸೇರಿದ್ದ ಸ್ಯಾಮ್ ಪೀಟರ್ ಮತ್ತು ಎಂಟು ಜನರ ತಂಡವನ್ನು ಪೊಲೀಸರು ಬಂಧಿಸಿದ್ದರು.

ಜಿಎಸ್‍ಬಿ ಸಮಾಜಕ್ಕೆ ಸೇರಿದ ಕಾಶಿ ಮಠದ ಶಾಖಾ ಮಠ ಮಂಗಳೂರಿನ ರಥಬೀದಿಯಲ್ಲಿದೆ. ಸದ್ಯ ರಾಘವೇಂದ್ರ ಕೇರಳದಲ್ಲಿ ತಲೆಮರೆಸಿಕೊಂಡಿದ್ದು 15 ವರ್ಷಗಳಿಂದ ಕೇರಳ ಹೈಕೋರ್ಟಿನಲ್ಲಿ ಪ್ರಕರಣ ನಡೆಯುತ್ತಿದೆ.

ಕೇರಳದ ಕೊಯಿಲಾಡಿ ನಿವಾಸಿಯಾಗಿರುವ ಪೀಟರ್, ವಿವಿಧ ಹೆಸರುಗಳಲ್ಲಿ ಅಪರಾಧ ಕೃತ್ಯ ಎಸಗಿದ್ದಾನೆ. ಆತನ ಮೂಲ ಹೆಸರು ಆಂಟನಿ ಎಂದು ಸಿಬಿಐ ಅಧಿಕಾರಿಗಳು ಇಂಟರ್ ಪೋಲ್ ಮೂಲಕ ಲುಕ್ ಔಟ್ ನೋಟಿಸ್ ನೀಡಿದ್ದರು. ಸ್ಯಾಮ್ ಪೀಟರ್ ದೇಶದ ವಿವಿಧೆಡೆ 14ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *