ತುಂಗಾ ನದಿಯಲ್ಲಿ ಸ್ಫೋಟ ಮಾಡಿ ಪರಾರಿಯಾದವನು ಮಂಗ್ಳೂರಲ್ಲಿ ಕುಕ್ಕರ್‌ ಬಾಂಬ್‌ ಸಿಡಿಸಿ ಸಿಕ್ಕಿಬಿದ್ದ

Public TV
3 Min Read

– ಮಂಗಳೂರು ಸ್ಫೋಟಕ್ಕೆ ಇದೆ ಶಿವಮೊಗ್ಗ ಲಿಂಕ್‌
– ಪರಾರಿಯಾಗಿದ್ದ ಎ1 ಆರೋಪಿ ಕೊನೆಗೂ ಸಿಕ್ಕಿಬಿದ್ದ

ಬೆಂಗಳೂರು: ಶಿವಮೊಗ್ಗ ತುಂಗಾ ನದಿ ದಡದಲ್ಲಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ನಟೋರಿಯಸ್‌ ಕ್ರಿಮಿನಲ್‌ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ(Mangaluru Cooker Blast) ಮಾಡಿ ಸಿಕ್ಕಿ ಬಿದ್ದಿದ್ದಾನೆ.

ಹೌದು. ಮಂಗಳೂರಿನಲ್ಲಿ ಬಾಂಬ್‌ ಸ್ಫೋಟ ಮಾಡಿದ್ದ ವ್ಯಕ್ತಿ ನಕಲಿ ಆಧಾರ್‌ ವಿಳಾಸ ನೀಡಿದ್ದ ಬೆನ್ನಲ್ಲೇ ಆತ ಯಾರು? ಆತನ ಮೂಲ ಯಾವುದು ಎನ್ನುವುದರ ಬೆನ್ನು ಬಿದ್ದಿದ್ದ ಪೊಲೀಸರು ಕೊನೆಗೂ ಆತ ಯಾರು ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ತುಂಗಾ ನದಿಯ(Tunga River) ತಟದಲ್ಲಿ ಬಾಂಬ್‌ ಸ್ಫೋಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಸೆಪ್ಟೆಂಬರ್‌ 19 ರಂದು ಸಿದ್ದೇಶ್ವರ ನಗರ ನಿವಾಸಿಯಾದ ಸೈಯದ್ ಯಾಸಿನ್‌(21) ಮತ್ತು ಮಂಗಳೂರಿನ ಮಾಜ್‌ ಮುನೀರ್‌ನನ್ನು(22) ಬಂಧಿಸಿದ್ದರು. ಆದರೆ ಈ ಪ್ರಕರಣದ ಪ್ರಮುಖ ಎ1 ಆರೋಪಿಯಾಗಿದ್ದ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಮೂಲದ ಶಾರೀಕ್‌ ನಾಪತ್ತೆಯಾಗಿದ್ದ. ನಾಪತ್ತೆಯಾಗಿದ್ದ ಈತನ ಬಂಧನಕ್ಕೆ ಪೊಲೀಸರು ಸಾಕಷ್ಟು ಬಲೆ ಬೀಸಿದ್ದರೂ ಸಿಕ್ಕಿ ಬಿದ್ದಿರಲಿಲ್ಲ. ಆದರೆ ಈಗ ಮಂಗಳೂರಿನಲ್ಲಿ ಕುಕ್ಕರ್‌ ಬ್ಲಾಸ್ಟ್‌ ಮಾಡಿ ಸಿಕ್ಕಿಬಿದ್ದಿದ್ದಾನೆ.

ಆಟೋದಲ್ಲಿ ಕುಕ್ಕರ್‌ ಸ್ಫೋಟಗೊಂಡು ಗಂಭೀರ ಗಾಯಗೊಂಡಿದ್ದ  ಶಾರೀಕ್‌ಗೆ ಈಗ ಮಂಗಳೂರಿನ ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಿವಮೊಗ್ಗದಲ್ಲಿ ಈ ಗ್ಯಾಂಗ್‌ ಏನು ಮಾಡಿತ್ತು?
ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದರೂ ನಿಜವಾಗಿಯೂ ಸ್ವತಂತ್ರ ಸಿಕ್ಕಿಲ್ಲ. ನಮಗೆ ಸಂಪೂರ್ಣ ಸ್ವಾತಂತ್ರ್ಯ ಸಿಗಬೇಕಾದರೆ ಭಾರತ ಇಸ್ಲಾಮಿಕ್ ರಾಷ್ಟ್ರ ಆಗಬೇಕು. ಈ ಕಾರಣಕ್ಕೆ ಜಿಹಾದ್‌ ದಾಳಿಗೆ ಬಾಂಬ್‌ ತಯಾರಿಸಲು ಇವರು ಸಿದ್ಧತೆ ನಡೆಸಿದ್ದ ಆತಂಕಕಾರಿ ವಿಚಾರ ಶಿವಮೊಗ್ಗ(Shivamogga) ಪೊಲೀಸ್‌ ತನಿಖೆಯಿಂದ ಬಯಲಾಗಿತ್ತು.

ಮೂವರು ಐಸಿಸ್‌(ISIS) ವಿಡಿಯೋಗಳಿಂದ ಪ್ರೇರಿತರಾಗಿ ಭಾರತದಲ್ಲೂ ದಾಳಿ ನಡೆಸಲು ಸಿದ್ದತೆ ನಡೆಸುತ್ತಿದ್ದರು. ಮೊಬೈಲ್‌, ವಾಟ್ಸಪ್‌ ಮೂಲಕ ಸಂವಹನ ನಡೆಸದೇ ಟೆಲಿಗ್ರಾಮ್‌, ಸಿಗ್ನಲ್‌ ಇತ್ಯಾದಿ ಮೆಸೆಂಜರ್‌ ಆಪ್‌ ಬಳಸುತ್ತಿದ್ದರು.

ಐಸಿಸ್‌ ಮಾಧ್ಯಮದ ಸದಸ್ಯರು:
ಯಾಸಿನ್‌ ಮತ್ತು ಮಾಜ್‌ ಮುನೀರ್‌ ಪಿಯುಸಿ ಸ್ನೇಹಿತರು. ಇವರ ಜೊತೆ ಶಾರೀಕ್ ಐಸಿಸ್‌ ಚಟುವಟಿಕೆಯ ಬಗ್ಗೆ ಮಾಹಿತಿ ಕಳುಹಿಸುತ್ತಿದ್ದ. ಆರೋಪಿಗಳ ಮೊಬೈಲ್‌ನಲ್ಲಿ ಬಾಂಬ್‌ ತಯಾರಿಸುವ ಪಿಡಿಎಫ್‌ ಫೈಲ್‌, ಐಸಿಸ್‌ ಉಗ್ರರು ತಲೆ ಕಡಿಯುವ ಮತ್ತು ಜೀವಂತವಾಗಿ ಸುಡುವ ವೀಡಿಯೋಗಳು ಲಭ್ಯವಾಗಿದೆ. ಇವರು ಐಸಿಸ್‌ ಜೊತೆ ನೇರವಾಗಿ ಸಂವಹನ ನಡೆಸಿರಲಿಲ್ಲ. ಆದರೆ ಐಸಿಸ್‌ ಟೆಲಿಗ್ರಾಮ್‌ ಚಾನೆಲ್‌ನ ಸದಸ್ಯರಾಗಿದ್ದರು.  ಇದನ್ನೂ ಓದಿ: ಕುಕ್ಕರ್‌ ಬಾಂಬ್‌ ಸ್ಫೋಟ – ಮೈಸೂರಿನಲ್ಲಿ ವಾಸ, ರೂಮಿನಲ್ಲಿ ಸ್ಫೋಟಕ ವಸ್ತುಗಳು ಪತ್ತೆ

ಬಾಂಬ್‌ ತಯಾರಿ:
ಯಾಸಿನ್‌ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರನಾಗಿದ್ದರೆ ಮಾಜ್‌ ಮುನೀರ್‌ ಮೆಕ್ಯಾನಿಕ್‌ ಓದಿದ್ದ. ಹೀಗಾಗಿ ಇವರು ಬಾಂಬ್‌ ತಯಾರಿಸುತ್ತಿದ್ದರು. ಯಾಸಿನ್‌ ರಿಲೆ ಸರ್ಕ್ಯೂಟ್‌, ಟೈಮರ್‌ ಆನ್‌ಲೈನ್‌ನಲ್ಲಿ ಖರೀದಿಸಿದ್ದ. ಅಲ್ಯೂಮಿನಿಯಂ ಪೌಡರ್‌ ಸರ್ಚ್‌ ಮಾಡಿದ್ದ ಆದರೆ ಸಿಕ್ಕಿರಲಿಲ್ಲ. ಬ್ಯಾಟರಿ, ಸ್ವಿಚ್‌ ಜೊತೆ ಸ್ಥಳೀಯವಾಗಿ ಸಿಗುವ ಸ್ಫೋಟಕವನ್ನು ಖರೀದಿ ಮಾಡಿ ಆಗಸ್ಟ್‌ 15ರ ಬಳಿಕ ಗುರುಪುರ–ಪುರಲೆ ಸಮೀಪದ ಅಡಿಕೆ ತೋಟಗಳಿಂದ ಆವೃತವಾದ ತುಂಗಾ ನದಿಯ ದಂಡೆಯಲ್ಲಿ ಪರೀಕ್ಷೆ ಮಾಡಿದ್ದರು. ದೊಡ್ಡ ಪ್ರಮಾಣದಲ್ಲಿ ಸ್ಫೋಟ ನಡೆದಿರಲಿಲ್ಲ. ಆದರೆ ಈ ಸ್ಫೋಟದ ವಿಡಿಯೋವನ್ನು ಮೊಬೈಲಿನಲ್ಲಿ ಸೆರೆ ಹಿಡಿಯಲಾಗಿತ್ತು. ಈ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಂಬ್‌ ಸ್ಫೋಟಿಸಲು ತಯಾರಿ ನಡೆಸುತ್ತಿದ್ದರು. ಭಾರತದ ರಾಷ್ಟ್ರ ಧ್ವಜವನ್ನು ಇವರು ಸುಟ್ಟಿದ್ದರು ಅದರ ವೀಡಿಯೋವನ್ನು ಇವರು ಚಿತ್ರೀಕರಿಸಿದ್ದರು.

ಖಾಫೀರ್‌ ಮೇಲೆ ದಾಳಿ:
ಇಸ್ಲಾಂ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಹೀಗಾಗಿ ನಮ್ಮನ್ನು ವಿರೋಧಿಸುವ ಖಾಫೀರ್‌ ಮೇಲೆ ಜಿಹಾದ್‌ ಮಾಡಬೇಕು ಎಂಬ ಮನಸ್ಥಿತಿಯನ್ನು ಇವರು ಹೊಂದಿದ್ದರು. ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿ ಮಾಡುವ ಕನಸು ಕಂಡಿದ್ದರು. ಬೆಂಗಳೂರು, ಬಾಂಬೆ, ಗೋವಾಗೆ ಮೂವರು ಹೋಗಿದ್ದರು. ಸೆರೆ ಸಿಕ್ಕ ಒಂದು ಪೆನ್‌ಡ್ರೈವ್‌ನಲ್ಲಿ ಮತಾಂಧತೆಯನ್ನು ಪ್ರಚೋದಿಸುವ ವೀಡಿಯೋ, ಪಠ್ಯಗಳು ಲಭ್ಯವಾಗಿತ್ತು.

ಅಂದು ಏನು ಸಿಕ್ಕಿತ್ತು?
ದಾಳಿ ವೇಳೆ ಒಟ್ಟು 14 ಮೊಬೈಲ್, 1 ಡಾಂಗಲ್, 2 ಲ್ಯಾಪ್‍ಟಾಪ್, 1 ಪೆನ್ ಡ್ರೈವ್, ಇತರೆ ಎಲೆಕ್ಟ್ರಾನಿಕ್ ಸಾಧನಗಳನ್ನು ಜಪ್ತಿ ಮಾಡಲಾಗಿದೆ. ಬಾಂಬ್ ಸ್ಫೋಟ ಮಾಡಿದ ಸ್ಥಳದಲ್ಲಿ ಛಿದ್ರಗೊಂಡ ಬಾಂಬ್ ಅವಶೇಷಗಳು, ಬಾಂಬ್ ತಯಾರಿಸಲು ಬೇಕಾದ ಸಾಮಾಗ್ರಿಗಳು, ರಿಲೆ ಸರ್ಕ್ಯೂಟ್‌, ಬಲ್ಬ್‌ಗಳು, ವಯರ್‌ಗಳು, ಬ್ಯಾಟರಿಗಳು, ಸ್ಫೋಟಕ ವಸ್ತುಗಳು, ಅರ್ಧ ಸುಟ್ಟಿರುವ ರಾಷ್ಟ್ರಧ್ವಜ, ಶಾರೀಕ್‌ ಕೃತ್ಯಕ್ಕೆ ಬಳಸಿದ್ದ ಒಂದು ಮಾರುತಿ ರಿಟ್ಜ್ ಕಾರನ್ನು ವಶಕ್ಕೆ ಪಡೆಯಲಾಗಿತ್ತು.

ಆರೋಪಿಗಳ ಬಂಧನ ಆಗಿದ್ದು ಹೇಗೆ?
ಆಗಸ್ಟ್ 15ರಂದು ಸಾವರ್ಕರ್ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಅಮೀರ್ ಅಹಮದ್ ವೃತ್ತದಲ್ಲಿ ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ ಬಟ್ಟೆ ಅಂಗಡಿ ನೌಕರ ಪ್ರೇಮ್‌ಸಿಂಗ್‌ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಬೀಯುಲ್ಲಾನ ಬಂಧನವಾಗುತ್ತದೆ. ಆತನ ವಿಚಾರಣೆ ಮತ್ತು ಮೊಬೈಲ್‌ ದಾಖಲೆ ಪರಿಶೀಲನೆಯ ವೇಳೆ ಆತ ಹಲವರ ಜೊತೆ ಸಂವಹನ ನಡೆಸಿದ ವಿಚಾರ ತಿಳಿದು ಬರುತ್ತದೆ. ಈ ಆಧಾರದಲ್ಲಿ ತನಿಖೆ ನಡೆಸಿದಾಗ ಆರೋಪಿಗಳ ಕೃತ್ಯ ಬಯಲಾಗಿ ಬಂಧನವಾಗಿತ್ತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *