ಬಾಂಬ್ ಪತ್ತೆ ಪ್ರಕರಣದ ಬಗ್ಗೆ ನಾಯಕರು ಜವಾಬ್ದಾರಿ ಅರಿತು ಮಾತನಾಡಬೇಕು: ಹರ್ಷ

Public TV
2 Min Read

– ಕುಮಾರಸ್ವಾಮಿ ಭೇಟಿಗೆ ಸ್ಪಷ್ಟನೆ

ಮಂಗಳೂರು: ಬಾಂಬ್ ಪತ್ತೆಯಾದ ಪ್ರಕರಣ ತುಂಬಾ ಗಂಭೀರ ವಿಷಯವಾಗಿದ್ದು, ಈ ಕುರಿತು ನಾಯಕರು ಜವಾಬ್ದಾರಿಯನ್ನರಿತು ಮಾತನಾಡಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷ ಮನವಿ ಮಾಡಿದ್ದಾರೆ.

ಈ ಕುರಿತು ಎರಡು ಟ್ವೀಟ್ ಮಾಡಿರುವ ಅವರು, ಬಾಂಬ್ ಪತ್ತೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ನಾಯಕರು ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ಇದು ತುಂಬಾ ಸೂಕ್ಷ್ಮ ವಿಚಾರವಾಗಿದೆ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಇನ್ನೊಂದು ಟ್ವೀಟಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಕುರಿತು ಸ್ಪಷ್ಟನೆ ನೀಡಿದ ಅವರು, ಶಿಷ್ಟಾಚಾರದ ಪ್ರಕಾರ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದೇನೆ. ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾತುಕತೆ ನಡೆದಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಮನವಿ ಮಾಡಿದ್ದೇನೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೇರೆ ಯಾವುದೇ ರೀತಿಯ ಮಾತುಕತೆ ನಡೆದಿಲ್ಲ ಎಂದು ಹರ್ಷ ಸ್ಪಷ್ಟಪಡಿಸಿದ್ದಾರೆ.

ಬಾಂಬ್ ಪತ್ತೆ ವಿಚಾರದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಎಚ್‍ಡಿಕೆ, ಹರ್ಷ ಅವರು ಇಂದು ಎಲ್ಲಿ ಬಾಂಬ್ ಪತ್ತೆ ಹಚ್ಚಿದ್ದಾರೆ, ಎಲ್ಲಾದರೂ ಬಾಂಬ್ ಸಿಕ್ಕಿದೆಯಂತಾ ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ಮಂಗ್ಳೂರು ಕಮಿಷನರ್ ಇವತ್ತು ಎಲ್ಲಾದ್ರೂ ಬಾಂಬ್ ಹಾಕ್ಸಿದ್ರಾ?- ಎಚ್‍ಡಿಕೆ ವಿವಾದಾತ್ಮಕ ಹೇಳಿಕೆ

ಬಾಂಬ್ ಪತ್ತೆ ಕುರಿತು ಸೋಮವಾರವೂ ಪ್ರತಿಕ್ರಿಯಿಸಿದ್ದ ಅವರು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವ ಕುರಿತು ಸಿಸಿಟಿವಿ ದೃಶ್ಯ ಆಧರಿಸಿ ಕೂಡಲೇ ಆರೋಪಿ ಪತ್ತೆ ಮಾಡಬೇಕು. ಇದಕ್ಕೇ ಹದಿನೈದು ದಿನ ಅಥವಾ ತಿಂಗಳ ಸಮಯ ಪಡೆದು, ಬಳಿಕ ಪೊಲೀಸರು ಮತ್ತೊಂದು ಕಥೆ ಸೃಷ್ಟಿಸಬಾರದು. ಅಲ್ಲಿ ಸುತ್ತ ಸಿಸಿಟಿವಿಗಳಿವೆ, ಬಾಂಬ್ ಯಾರು ಇಟ್ಟಿದ್ದೆಂದು ಪತ್ತೆ ಹಚ್ಚುವುದು ದೊಡ್ಡದಲ್ಲ. ತನಿಖೆ ನಡೆಸಲು ಪೊಲೀಸರು ಮತ್ತೊಂದು ತಿಂಗಳು ತೆಗೆದುಕೊಳ್ಳಬಾರದು. ನಂತರ ತಿಂಗಳು ಬಿಟ್ಟು ಮತ್ತೊಂದು ಕಥೆ ಸೃಷ್ಟಿಸಬಾರದು. ವಾಸ್ತವಾಂಶವನ್ನು ಜನರ ಮುಂದಿಡಬೇಕು ಎಂದು ಬಾಂಬ್ ಪತ್ತೆಯಾದ ಕುರಿತು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.

ಸರ್ಕಾರ ಕೆಲ ಪೊಲೀಸರಿಂದ ಜನತೆಯಲ್ಲಿ ಗೊಂದಲದ ವಾತಾವರಣ ನಿರ್ಮಿಸುತ್ತಿದೆ ಎಂಬುದು ನನ್ನ ಭಾವನೆ. ಟೌನ್‍ಹಾಲ್ ಬಳಿ ಸಿಎಎ ವಿರುದ್ಧ ನಡೆದ ಪ್ರತಿಭಟನೆ ವೇಳೆ ಕಲ್ಲು ತೂರಿದ ಘಟನೆಗೆ ಸಂಬಂಧಿಸಿದಂತೆ ಭಾಸ್ಕರ್ ರಾವ್ ಏಳು ಕಲ್ಲುಗಳು ಬಿದ್ದಿವೆ ಎನ್ನುತ್ತಾರೆ. ಆದರೆ ಒಂದು ತಿಂಗಳಿಂದ ಯಾಕೆ ಹೇಳಿಲ್ಲ, ಒಂದು ವರ್ಗದ ಜನರನ್ನು ಓಲೈಸಲು ಅಮಾಯಕರನ್ನು ಬಲಿ ಕೊಡಲಾಗುತ್ತಿದೆ. ಅಲ್ಲಿ ಮಾಧ್ಯಮದ ಕ್ಯಾಮರಾಗಳು ಇದ್ದವು. ಕಲ್ಲು ಹೊಡೆದ ಸೂಕ್ಷ್ಮ ವಸ್ತುವು ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ದೇಶದ ಜನರ ನಡುವೆ ಪರಸ್ಪರ ಅಪನಂಬಿಕೆಯನ್ನುಂಟು ಮಾಡುವ ಕೆಲಸವನ್ನು ಸರ್ಕಾರವೇ ಮಾಡುತ್ತಿದ್ದು, ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

Share This Article
Leave a Comment

Leave a Reply

Your email address will not be published. Required fields are marked *