ಉಗ್ರ ಕೃತ್ಯಕ್ಕೆ ಹಿಂದುತ್ವ ಹಣೆಪಟ್ಟಿಗೆ ಸಂಚು – ಮುಂಬೈ ಕಸಬ್‌ನಂತೆ ದಾಳಿಗೆ ಬಾಂಬರ್‌ ಶಾರೀಕ್ ಸ್ಕೆಚ್‌

Public TV
3 Min Read

ಬೆಂಗಳೂರು/ಮಂಗಳೂರು: ಉಗ್ರ ಕೃತ್ಯಕ್ಕೆ ಹಿಂದೂ ಮುಖವಾಡ ಅಂಟಿಸಿ ʼಹಿಂದೂ ಟೆರರಿಸಂʼ ಮಾಡಲು ಉಗ್ರರು ಸ್ಕೆಚ್‌ ಹಾಕಿರುವ ಸ್ಫೋಟಕ ವಿಚಾರ ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ(Mangaluru Blast Case) ಪ್ರಕರಣದಿಂದ ಬೆಳಕಿಗೆ ಬಂದಿದೆ.

ಹೌದು. ಈ ಹಿಂದೆ ಮುಂಬೈ ದಾಳಿ(Mumbai Attack) ಪ್ರಕರಣದ ನಡೆದಾಗಲೂ ಕಸಬ್‌(Kasab) ಹಿಂದೂ ವ್ಯಕ್ತಿಯಂತೆ ಪೋಸ್‌ ನೀಡಿದ್ದ. ಈಗ ಮಂಗಳೂರು ಸ್ಫೋಟ ಪ್ರಕರಣದಲ್ಲೂ ಶಾರೀಕ್‌ ಹಿಂದೂ ವ್ಯಕ್ತಿ ವೇಷ ಧರಿಸಿ ಕೃತ್ಯ ನಡೆಸಲು ಸಂಚು ರೂಪಿಸಿರುವುದು ಗೊತ್ತಾಗಿದೆ.

ಕುಕ್ಕರ್ ಬಾಂಬ್ ಸ್ಫೋಟಿಸಿ ಹಿಂದೂ ಭಯೋತ್ಪಾದನೆ(Hindu Terrorism) ಅಂತಾ ಸುಳ್ಳು ಸುದ್ದಿ ಹಬ್ಬಿಸುವಂತೆ ಮಾಡಲು ಶಾರೀಕ್‌(Shariq) ಸ್ಕೆಚ್‌ ಹಾಕಿದ್ದ. ಈ ಮೂಲಕ ಕರಾವಳಿಯಲ್ಲಿ ರಕ್ತದೋಕುಳಿ ನಡೆಸಿ “ಕೇಸರಿ ಭಯೋತ್ಪಾದನೆ” ಅಂತಾ ಸುಳ್ಳು ಸುದ್ದಿ ಹಬ್ಬಿಸುವಂತೆ ಮಾಡಲು ಶಾರೀಕ್‌ ಪ್ಲ್ಯಾನ್‌ ಮಾಡಿದ್ದ. ಆದರೆ ಕುಕ್ಕರ್‌ ಬಾಂಬ್‌ ರಿಕ್ಷಾದಲ್ಲೇ ಸ್ಫೋಟಗೊಳ್ಳುವ ಮೂಲಕ ಉಗ್ರನ ಈ ಮಾಸ್ಟರ್‌ ಪ್ಲ್ಯಾನ್‌ ವಿಫಲವಾಗಿದೆ.

ಪ್ಲ್ಯಾನ್‌ ಏನು?
ಕುಕ್ಕರ್ ಬಾಂಬ್ ಸ್ಫೋಟಿಸುವ ಮುನ್ನ ಶಾರೀಕ್‌ ತನ್ನ ಐಡೆಂಟಿಟಿಯನ್ನು ಸಂಪೂರ್ಣ ಹಿಂದೂವಾಗಿ ಬದಲಾಯಿಸಿದ್ದ. ಹುಬ್ಬಳ್ಳಿ ಮೂಲದ ಪ್ರೇಮರಾಜ್ ಅವರ ಆಧಾರ್ ಕಾರ್ಡ್ ಬಳಕೆ ಮಾಡಿ ಪ್ರೇಮರಾಜ್ ಆಗಿ ಸಂಪೂರ್ಣವಾಗಿ ಬದಲಾಗಿದ್ದ.

ಹೆಸರು ಬದಲಾವಣೆ ಮಾಡಿದ್ದು ಮಾತ್ರವಲ್ಲದೇ ತಾನೊಬ್ಬ ಪರಮ ದೈವಭಕ್ತ ಎಂದು ಬಿಂಬಿಸಲು ಕೊಯಮತ್ತೂರಿನಲ್ಲಿ ಇಶಾ ಫೌಂಡೇಶನ್‌ ಸ್ಥಾಪನೆ ಮಾಡಿದ್ದ ಆದಿಯೋಗಿ ಶಿವನ ಪ್ರತಿಮೆಯನ್ನು ವಾಟ್ಸಪ್‌ ಡಿಪಿಯಲ್ಲಿ ಹಾಕಿದ್ದ. ಅಷ್ಟೇ ಅಲ್ಲದೇ ನಕಲಿ ದಾಖಲೆ ಸೃಷ್ಟಿಸಿ ಹಿಂದೂ ಹೆಸರಿನಲ್ಲಿ ಸಿಮ್ ಕಾರ್ಡ್‌ ಖರೀದಿ ಮಾಡಿದ್ದ. ಜೊತೆಗೆ ಹಿಂದೂ ಹೆಸರಿನ ಆಧಾರ್ ಕಾರ್ಡ್‌ ಅನ್ನು ಜೊತೆಯಲ್ಲೇ ಇಟ್ಟುಕೊಳ್ಳುತ್ತಿದ್ದ. ಇದನ್ನೂ ಓದಿ: ಸಾವು-ಬದುಕಿನ ನಡುವೆ ಶಂಕಿತ ಉಗ್ರ ಶಾರೀಕ್ ನರಳಾಟ- ಪೊಲೀಸರಲ್ಲಿ ಆತಂಕ

 

ಮಂಗಳೂರಿನಲ್ಲಿ ಕೃತ್ಯ ನಡೆಯುವ ಮೊದಲು ಶಾರೀಕ್‌ ಕೇಸರಿ ಬಣ್ಣದ ಶರ್ಟ್‌/ ಶಾಲು ಧರಿಸಿದ್ದ. ಬಾಂಬ್‌ ಸ್ಫೋಟ ನಡೆದ ಬಳಿಕ ರಸ್ತೆಯಲ್ಲಿದ್ದಾಗ ಶಾರೀಕ್‌ ಸೊಂಟದಲ್ಲಿ ಕೇಸರಿ ಬಣ್ಣದ ಧಿರಿಸು ಇತ್ತು.

ಕೆ.ಆರ್.‌‌ ಮೊಹಲ್ಲಾದಲ್ಲಿರುವ ಎಸ್‌ಎಂಎಂ ಮೊಬೈಲ್ ರಿಪೇರಿ ತರಬೇತಿ ಕೇಂದ್ರದಲ್ಲಿ ಶಾರೀಕ್‌ ಮೊಬೈಲ್ ರಿಪೇರಿ ತರಬೇತಿ ಪಡೆಯುತ್ತಿದ್ದ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಸಂಸ್ಥೆಯ ಮುಖ್ಯಸ್ಥ ಪ್ರಸಾದ್, ಶಾರೀಕ್‌ ತನ್ನ ವಾಟ್ಸಪ್‌ ಡಿಪಿಯಲ್ಲಿ ಈಶ್ವರನ ಫೋಟೋ ಹಾಕಿದ್ದ. ಧಾರವಾಡ ಶೈಲಿಯ ಕನ್ನಡವನ್ನೇ ಮಾತಾಡುತ್ತಿದ್ದ. ವೇಷ ಭೂಷಣವಾಗಲಿ, ಬಟ್ಟೆಯಾಗಲಿ ಯಾವುದರಲ್ಲೂ ಅವನು ಮುಸ್ಲಿಂ ವ್ಯಕ್ತಿ ಎಂಬ ಅನುಮಾನವೇ ಬಂದಿರಲಿಲ್ಲ. ಶುಕ್ರವಾರ ನಮಾಜ್‌ ಮಾಡಲು ಸಹ ತೆರಳುತ್ತಿರಲಿಲ್ಲ ಎಂದು ಹೇಳಿದ್ದರು. ಈ ಮೂಲಕ ತಾನು ಹಿಂದೂ ವ್ಯಕ್ತಿ ಎಂದು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದ.

ಅಜೆಂಡಾ ಏನು?
ಒಟ್ಟಿನಲ್ಲಿ ರಕ್ತಪಾತದ ನೆತ್ತರ ಹನಿಯನ್ನು ಹಿಂದೂತ್ವಕ್ಕೆ ಅಂಟಿಸಲು ಕಸಬ್ ಮಾದರಿಯಲ್ಲಿ ಶಾರೀಕ್‌ ಸಂಚು ರೂಪಿಸಿದ್ದ ಎನ್ನುವುದು ಮೇಲ್ನೋಟಕ್ಕೆ ದೃಢಪಡುತ್ತದೆ. ಹಿಂದೂಗಳಿಂದ ಕೃತ್ಯ ಎಸಗಲಾಗಿದೆ ಎಂದು ಬಿಂಬಿಸಿ ಸಮಾಜಕ್ಕೆ ʼಹಿಂದೂ ಭಯೋತ್ಪಾದನೆʼ ಎಂಬ ಸಂದೇಶ ರವಾನೆ ಮಾಡಲು ಉಗ್ರರು ಮುಂದಾಗಿದ್ದಾರೆ ಎನ್ನುವುದು ಮುಂಬೈ ದಾಳಿ ನಡೆದ ಬಳಿಕ ದೃಢಪಟ್ಟಿತ್ತು. ಈಗ ಈ ಪ್ರಕರಣದ ಬಳಿಕ ಮತ್ತೊಮ್ಮೆ ಉಗ್ರರ ಅಜೆಂಡಾ ದೃಢಪಟ್ಟಿದೆ.

ಕಸಬ್‌ ಏನು ಮಾಡಿದ್ದ?
ಮುಂಬೈ ಮೇಲೆ 2008ರ ನವೆಂಬರ್‌ 26 ರಂದು ದಾಳಿ ನಡೆಸಿ ಸೆರೆ ಸಿಕ್ಕ ಉಗ್ರ ಕಸಬ್‌ ಸಹ ಹಿಂದುತ್ವದ ಮುಖವಾಡ ಹಾಕಿದ್ದ. ತನ್ನ ಕೈಗೆ ಮುಂಬೈ ಸಿದ್ಧಿವಿನಾಯಕನ ಕೇಸರಿ ದಾರವನ್ನು ಕಟ್ಟಿಕೊಂಡಿದ್ದ. ದಾಳಿಗೂ ಮುನ್ನ ಗಡ್ಡ-ಮೀಸೆ ತೆಗೆದು ಹಿಂದೂಗಳ ಸ್ಟೈಲ್‍ನಂತೆ ಹೇರ್ ಕಟ್ ಮಾಡಿದ್ದ.

ಕಸಬ್‍ ಬೆಂಗಳೂರಿನ ನಿವಾಸಿ ಸಮೀರ್ ದಿನೇಶ್ ಚೌಧರಿ ಎಂದು ಬಿಂಬಿಸುವುದು ಲಷ್ಕರ್ ಎ ತೊಯ್ಬಾ ಸಂಘಟನೆಯ ಸಂಚಾಗಿತ್ತು. ಇದಕ್ಕೆ ತಕ್ಕನಾಗಿ ಫೇಕ್ ಐಡಿ ಕಾರ್ಡ್ ಗಳು ಸಜ್ಜಾಗಿತ್ತು. ತಪ್ಪೊಪ್ಪಿಗೆ ವೇಳೆಯೂ ಕಸಬ್ ಹಿಂದೂ ಎಂದೇ ಗುರುತಿಸಿಕೊಂಡಿದ್ದ. ಆದರೆ ಪೊಲೀಸರ ತನಿಖೆಯಿಂದ ಇದು ಬಯಲಾಗಿತ್ತು. ಮುಂಬೈಯ ನಿವೃತ್ತ ಪೊಲೀಸ್ ಕಮೀಷನರ್ ರಾಕೇಶ್ ಮರಿಯಾ ತಮ್ಮ ‘Let Me Say It Now’ ಎಂಬ ಪುಸ್ತಕದಲ್ಲಿ ಹಿಂದೂ ಟೆರರಿಸಂ ಆಗಿ ಬಿಂಬಿಸುವ ಈ ಪ್ಲ್ಯಾನ್ ಬಗ್ಗೆ ವಿವರವಾದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *