ಶಿರಾಡಿಘಾಟ್ ರಸ್ತೆಯೊಂದಿಗೆ ಮಂಗ್ಳೂರು ರೈಲು ಮಾರ್ಗವೂ ಸಂಪೂರ್ಣ ಬಂದ್

Public TV
1 Min Read

-ಗುಡ್ಡ ಕುಸಿತದಿಂದ ಗ್ರಾಮ ತೊರೆದ ಗ್ರಾಮಸ್ಥರು

ಹಾಸನ: ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತದಿಂದ ಶಿರಾಡಿಘಾಟ್ ರಸ್ತೆ ಜೊತೆಗೆ ಮಂಗಳೂರು ರೈಲ್ವೆ ಮಾರ್ಗ ಕೂಡ ಸಂಪೂರ್ಣ ಬಂದ್ ಆಗಿದೆ.

ಎಡಕುಮೇರಿ ಹಾಗು ಕಡಗರವಳ್ಳಿ ನಡುವೆ ಹಲವೆಡೆ ಗುಡ್ಡ ಕುಸಿತವಾಗಿದೆ. ಭಾರೀ ಪ್ರಮಾಣದಲ್ಲಿ ಮಣ್ಣು ಹಾಗು ಬಂಡೆಗಳ ಕುಸಿತದಿಂದ ರೈಲ್ವೆ ಹಳಿಗಳಿಗೆ ಹಾನಿಯಾಗಿದ್ದು, ಹಲವೆಡೆ ರೈಲ್ವೆ ಮಾರ್ಗ ಸಂಪೂರ್ಣವಾಗಿ ಮುಚ್ಚಿಹೋಗಿದೆ. ಆದ್ದರಿಂದ ಮಂಗಳೂರು-ಬೆಂಗಳೂರು ನಡುವೆ ರೈಲ್ವೆ ಸಂಚಾರ ಆರಂಭವಾಗುವ ಸಾಧ್ಯತೆ ಕಡಿಮೆಯಾಗಿದೆ.

ಇತ್ತ ಭಾರೀ ಮಳೆಯಿಂದಾಗಿ ಪಶ್ಚಿಮಘಟ್ಟ ಶ್ರೇಣಿಯಲ್ಲಿ ಅಂದರೆ ಸಕಲೇಶಪುರ ಹಾಗು ಸುಬ್ರಮಣ್ಯ ನಡುವೆ ಸುಮಾರು 40 ಕ್ಕೂ ಅಧಿಕ ಕಡೆ ಭೂ ಕುಸಿತ ಉಂಟಾಗಿದೆ. ಈಗಾಗಲೇ ಭೂ ಕುಸಿತದಿಂದ ಶಿರಾಡಿಘಾಟ್ ರಸ್ತೆ ಮಾರ್ಗ ಬಂದ್ ಆಗಿದೆ. ಮಳೆಯ ನಡುವೆಯೂ ಹಳಿಮೇಲಿನ ಮಣ್ಣು ತೆರವು ಮಾಡಲು ರೈಲ್ವೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಜೊತೆಗೆ ಸಕಲೇಶಪುರ ತಾಲೂಕಿನ ರೈಲ್ವೆ ಹಾಗು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಮಂಗಳೂರು ಮತ್ತು ಬೆಂಗಳೂರು ನಡುವೆ ಚಾರ್ಮಾಡಿ ಘಾಟ್ ರಸ್ತೆ ಮಾತ್ರ ಸಂಪರ್ಕದ ಕೊಂಡಿಯಾಗಿದೆ. ನಿರಂತರ ಮಳೆಯಿಂದ ಮಲೆನಾಡು ಭಾಗದಲ್ಲಿ ಆತಂಕ ಶುರುವಾಗಿದ್ದು, ಮಳೆನಿಂತರೂ ಗುಡ್ಡ ಕುಸಿಯುತ್ತಿದೆ. ಇದರಿಂದ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಿಜ್ಜನಹಳ್ಳಿ, ಮಳಗಳ್ಳಿ ವ್ಯಾಪ್ತಿಯಲ್ಲಿ ಆತಂಕ ಹೆಚ್ಚಾಗಿದ್ದು, ಭೂಮಿ ನಡುಗಿದ ಅನುಭವವಾಗಿದೆ ಎಂದು ಭಯಭೀತರಾಗಿ ಜನರು ಗ್ರಾಮಗಳನ್ನ ತೊರೆಯುತ್ತಿದ್ದಾರೆ.

ಒಂದು ವೇಳೆ ಮತ್ತೆ ಮಳೆ ಹೆಚ್ಚಾದ್ರೆ ಅನಾಹುತ ನಡೆಯಬಹುದೆಂದು ಭಯಪಡುತ್ತಿದ್ದಾರೆ. ಇತ್ತ ಮಳೆಯಿಂದ ರಸ್ತೆ ಸಂಪರ್ಕಗಳು ಕಡಿತಗೊಂಡು ಜನರು ಪರದಾಡುತ್ತಿದ್ದಾರೆ. ಈ ಭಾಗದ ಬಿಸಿಲೆಘಾಟ್ ನಲ್ಲೂ ಕುಸಿತವಾಗಿ ಸಂಚಾರ ಬಂದ್ ಆಗಿದೆ. ನಮಗೆ ಅಧಿಕಾರಿಗಳು ನೆರವು ನೀಡಲು ಸ್ಪಂದಿಸುತ್ತಿಲ್ಲ ಎಂದು  ಜನರು ಆರೋಪಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *