ಡಕ್ಟ್ ಒಳಗಿಂದಲೂ ಕಳ್ಳರು ಫ್ಲ್ಯಾಟ್‍ಗೆ ನುಗ್ಗುತ್ತಾರೆ ಹುಷಾರ್

Public TV
3 Min Read

ಮಂಗಳೂರು: ಕಳ್ಳರು ತಮ್ಮ ಕೈಚಳಕ ತೋರಿಸಲು ನಾನಾ ರೀತಿಯ ಹೊಸ ಹೊಸ ಉಪಾಯಗಳನ್ನು ಹುಡುಕುತ್ತಿರುತ್ತಾರೆ. ಅದರಲ್ಲೂ ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ಮಂಗಳೂರಿನಲ್ಲಿ ಬುದ್ಧಿವಂತ ಕಳ್ಳರೂ ಇದ್ದಾರೆ ಎನ್ನುವುದು ಇದೀಗ ದೊಡ್ಡ ಪ್ರಮಾಣ ದರೋಡೆಯೊಂದಿಗೆ ಬೆಳಕಿಗೆ ಬಂದಿದೆ.

ಪ್ರತ್ಯೇಕ ಜಾಗದಲ್ಲಿ ಮನೆಗಳಿದ್ದರೆ ಕಳ್ಳಕಾಕರ ಭಯ ಎಂದು ನಗರ ಪ್ರದೇಶದ ಜನ ಅಪಾರ್ಟ್ ಮೆಂಟ್‍ಗಳ ಮೊರೆ ಹೋಗುತ್ತಾರೆ. ಆದರೆ ಜನ ಚಾಪೆ ಕೆಳಗೆ ನುಗ್ಗಿದ್ದರೆ ಕಳ್ಳರು ರಂಗೋಲಿ ಕೆಳಗೆ ನುಗ್ಗುತ್ತಾರೆ ಎನ್ನುವ ಮಾತಿನಂತೆ ಕಳ್ಳರು ಫ್ಲ್ಯಾಟ್‍ ಒಳಗೂ ಆರಾಮವಾಗಿ ನುಗ್ಗಿ ದರೋಡೆ ಮಾಡುತ್ತಾರೆ ಎನ್ನುವುದಕ್ಕೆ ಮಂಗಳೂರಿನಲ್ಲಿ ಬೆಳಕಿಗೆ ಬಂದ ದರೋಡೆ ಪ್ರಕರಣವೇ ಸಾಕ್ಷಿ. ಹೌದು ಅತ್ಯಂತ ಸೆಕ್ಯುರಿಟಿ ಇರುವ ಫ್ಲ್ಯಾಟ್‍ ಒಂದರ ಆರನೇ ಮಹಡಿಗೆ ಯಾರಿಗೂ ಗೊತ್ತಾಗದಂತೆ ನುಗ್ಗಿದ ದರೋಡೆ ಕೋರರ ತಂಡ ಬರೋಬ್ಬರಿ 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸಹಿತ ನಗದನ್ನು ದೋಚಿದ್ದಾರೆ.

ಮಂಗಳೂರು ನಗರದ ಬಲ್ಮಠ -ಬೆಂದೂರ್ ವೆಲ್ ರಸ್ತೆಯಲ್ಲಿರುವ ಅಭಿಮಾನ್ ಟೆಕ್ಸಸ್ ಅಪಾರ್ಟ್ ಮೆಂಟ್‍ನ ಆರನೇ ಮಹಡಿಯಲ್ಲಿರುವ ಫ್ಲ್ಯಾಟ್‍ ನಂಬರ್ 604ನಲ್ಲಿ ಅನಿತಾ ಎನ್ ಶೆಟ್ಟಿ ಎಂಬವರು ವಾಸವಾಗಿದ್ದರು. ಕಳೆದ ಸೆಪ್ಟೆಂಬರ್ 8ರಿಂದ 13ರವರೆಗೆ ಅವರು ಫ್ಲ್ಯಾಟ್‍ ನಲ್ಲಿ ಇರಲಿಲ್ಲ. ಈ ಸಂದರ್ಭದಲ್ಲಿ ಫ್ಲ್ಯಾಟ್‍ಗೆ ಭದ್ರವಾದ ಬೀಗ ಹಾಕಿದ್ದು ಮಾತ್ರವಲ್ಲ ಅಪಾರ್ಟ್ ​ಮೆಂಟ್‌ನಲ್ಲಿ ಅಲ್ಲಲ್ಲಿ ಸಿಸಿ ಕ್ಯಾಮೆರಾ, ಸೆಕ್ಯುರಿಟಿಗಳು ಇದ್ದರು. ಆದರೆ ಸೆಪ್ಟೆಂಬರ್ 14ರಂದು ಬಂದು ನೋಡಿದಾಗ ಮನೆ ಕಪಾಟುಗಳು ಚೆಲ್ಲಾಪಿಲ್ಲಿಯಾಗಿದ್ದು ಅದರಲ್ಲಿದ್ದ 35 ಲಕ್ಷ ರೂಪಾಯಿ ಬೆಳೆಬಾಳುವ ಡೈಮಂಡ್ ನೆಕ್ಲೇಸ್, ಡೈಮಂಡ್ ಉಂಗುರ, ಚಿನ್ನದ ನೆಕ್ಲೇಸ್, ಚಿನ್ನದ ಬ್ರಾಸ್‍ಲೈಟ್, ಚಿನ್ನದ ಬಳೆಗಳು, ಚಿನ್ನದ ವಾಚ್, ಚಿನ್ನದ ನಾಣ್ಯಗಳು ಹಾಗೂ 65 ಸಾವಿರ ರೂ. ನಗದು ಕಳವಾಗಿತ್ತು.

ಈ ಸಂಬಂಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಕಮೀಷನರ್ ಡಾ.ಪಿ.ಎಸ್ ಹರ್ಷ ಒಂದು ವಿಶೇಷ ತಂಡವನ್ನು ರಚಿಸಿ ತನಿಖೆ ಆರಂಭಿಸಿದ್ದರು. ತನಿಖೆಯ ಬಳಿಕ ಇಂದು ಪ್ರಕರಣವನ್ನು ಭೇದಿಸಿದ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ 7 ಜನ ಆರೋಪಿಗಳನ್ನು ಹಾಗೂ 34 ಲಕ್ಷ ರೂಪಾಯಿ ಮೌಲ್ಯದ ವಜ್ರ ಹಾಗೂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ದರೋಡೆಯ ಹೊಸ ಪ್ಲ್ಯಾನ್:
ದರೋಡೆಗೈದ ಫ್ಲ್ಯಾಟ್ ಆರನೇ ಮಹಡಿಯಲ್ಲಿದ್ದರೂ ಆರೋಪಿಗಳು ಬಹಳಷ್ಟು ಪ್ಲ್ಯಾನ್ ಮಾಡಿ ಒಳ ನುಗ್ಗಿದ್ದಾರೆ. ಆರೋಪಿಗಳ ಪೈಕಿ ಶಾಹೀರ್ ಮೊಹಮ್ಮದ್ ಎಂಬಾತ ಇದೇ ಫ್ಲ್ಯಾಟ್‍ನ 18ನೇ ಮಹಡಿಯಲ್ಲಿ ವಾಸವಾಗಿದ್ದ. ದರೋಡೆ ನಡೆದ ಫ್ಲ್ಯಾಟ್‍ನಲ್ಲಿ ಯಾರೂ ಇಲ್ಲದ ಬಗ್ಗೆ ಮಾಹಿತಿ ಇದ್ದ ಆರೋಪಿಗಳು ಶಾಹೀರ್ ಮೊಹಮ್ಮದ್‍ನ ಫ್ಲ್ಯಾಟ್‍ಗೆ ಬಂದು ಪ್ಲ್ಯಾನ್ ಮಾಡಿದ್ದಾರೆ. ಬಳಿಕ ಆತನ ಫ್ಲ್ಯಾಟ್‍ನ ಡಕ್ಟ್ ಒಳಗೆ ಇಬ್ಬರು ಆರೋಪಿಗಳು ನುಗ್ಗಿದ್ದಾರೆ. ಡಕ್ಟ್ ಮೂಲಕವೇ ನಿಧಾನವಾಗಿ ಆರನೇ ಮಹಡಿಯವರೆಗೂ ಬಂದು ಫ್ಲ್ಯಾಟ್‍ನ ಮಾಸ್ಟರ್ ಬೆಡ್ ರೂಂನ ಶೌಚಾಲಯಕ್ಕೆ ನುಗ್ಗಿದ್ದಾರೆ. ಅಲ್ಲಿಂದ ಬೆಡ್ ರೂಂನಲ್ಲಿದ್ದ ಲಾಕರ್ ಅನ್ನು ಆಯುಧಗಳಿಂದ ಮುರಿದು ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದಾರೆ.

ಆರೋಪಿಗಳ ಪೈಕಿ ಮಂಗಳೂರಿನ ಕದ್ರಿ ಶಿವಭಾಗ ನಿಬಾಸಿ ರಾಕೇಶ್ ಡಿಸೋಜಾ ಪ್ರಮುಖ ಆರೋಪಿ. ಫ್ಲ್ಯಾಟ್‍ನ ನಿವಾಸಿ ಶಾಹೀರ್ ಮೊಹಮ್ಮದ್ ಪ್ಲ್ಯಾನ್‍ನಂತೆಯೇ ದರೋಡೆ ನಡೆದಿದೆ. ಈ ಪ್ರಕರಣದಲ್ಲಿ ಗೋವಾ ಮೂಲದ ಅಶೋಕ್ ಬಂಡ್ರಗಾರ್, ಗಣೇಶ್ ಬಾಪು ಪರಾಬ್ ಭಾಗಿಯಾಗಿದ್ದರು. ದರೋಡೆ ನಡೆಸಿದ ಚಿನ್ನಾಭರಣವನ್ನು ಕರಗಿಸಿ ಮಾರಾಟ ಮಾಡಲು ಯತ್ನಿಸಿದ್ದ ಮಂಗಳೂರಿನ ಸೋಮೇಶ್ವರದ ಜನಾರ್ದನ ಆಚಾರ್ಯ, ಕೋಟೆಕಾರ್ ಬೀರಿ ನಿವಾಸಿ ಪುರುಷೋತ್ತಮ ಆಚಾರ್ಯ, ಮಂಗಳಾದೇವಿ ನಿವಾಸಿ ಚಂದನ್ ಆಚಾರ್ಯ ಇದೀಗ ಬಂಧನಕ್ಕೊಳಗಾಗಿ ಕಂಬಿ ಎಣಿಸುತ್ತಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ರಾಜೇಶ್ ಡಿಸೋಜಾ 2018ರ ಎಪ್ರಿಲ್ 24ರಂದು ಗುಜರಾತ್‍ನ ಅಂಕ್ಲೇಶ್ವರ್ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ್ದ. ಈ ವೇಳೆ ಮನೆಯಲ್ಲಿದ್ದ ಓರ್ವನನ್ನು ಕಟ್ಟಿಹಾಕಿ ಮೂರೂವರೆ ಕೋಟಿ ರೂಪಾಯಿ ನಗದನ್ನು ದೋಚಿಕೊಂಡು ಬಂದು ಗೋವಾದ ಲಾಡ್ಜೊಂದರಲ್ಲಿ ಉಳಿದುಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಗುಜರಾತ್ ಪೊಲೀಸರು ಹಣದೊಂದಿಗೆ ಆರೋಪಿಯನ್ನು ಬಂಧಿಸಿದ್ದರು. ಅಲ್ಲಿಂದ ಬಿಡುಗಡೆಗೊಂಡ ರಾಜೇಶ್ ಈ ದರೋಡೆಯನ್ನು ನಡೆಸಿದ್ದ.

2017ರಲ್ಲಿ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣದಲ್ಲೂ ಪ್ರಮುಖ ಆರೋಪಿಯಾಗಿದ್ದ ರಾಜೇಶ್, ಜೈಲು ವಾಸ ಮುಗಿಸಿ ತನ್ನ ಕೃತ್ಯವನ್ನು ಮುಂದುವರಿಸಿದ್ದ. ಆರೋಪಿಗಳು ಯಾವುದೇ ಪ್ಲ್ಯಾನ್‍ಗಳನ್ನು ಮಾಡಿ ದರೋಡೆಗೈದರೂ ಪೊಲೀಸರ ಕೈಗೆ ಸಿಕ್ಕೇ ಸಿಗುತ್ತಾರೆ ಎನ್ನುವುದು ಈ ಪ್ರಕರಣದಿಂದ ಸಾಬೀತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *