ಮಂಗಳೂರು ವಿಮಾನ ನಿಲ್ದಾಣಕ್ಕೆ ಎನ್‍ಎಸ್‍ಜಿ ಸಿಬ್ಬಂದಿ ಆಗಮನ – ಸೆಕ್ಯೂರಿಟಿ ಫುಲ್ ಟೈಟ್

Public TV
1 Min Read

ಮಂಗಳೂರು: ನಗರದ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ನಂತರ ವಿಮಾನ ನಿಲ್ದಾಣದ ಸುತ್ತ ಭದ್ರತೆ ಹೆಚ್ಚಿಸಲಾಗಿದೆ. ಕೆಎಸ್‌ಆರ್‌ಪಿ ಪೊಲೀಸರ ನಿಯೋಜನೆ ಮಾಡಿ, ಪ್ರವೇಶ ದ್ವಾರದಲ್ಲಿ ಟೈಟ್ ಸೆಕ್ಯೂರಿಟಿ ನಿಯೋಜನೆ ಮಾಡಲಾಗಿದೆ.

ಮಂಗಳೂರು ವಿಮಾನ ನಿಲ್ದಾಣ ಭದ್ರತೆಗೆ ರಾಷ್ಟ್ರೀಯ ಭದ್ರತಾ ಪಡೆಯ(ಎನ್‍ಎಸ್‍ಜಿ) ಸಿಬ್ಬಂದಿ ಆಗಮನವಾಗಿದೆ. ತಮಿಳುನಾಡಿನಿಂದ ಎರಡು ವಾಹನಗಳಲ್ಲಿ ಬಂದ ಎನ್‍ಎಸ್‍ಜಿ ಸಿಬ್ಬಂದಿ ವಿಮಾನ ನಿಲ್ದಾಣವನ್ನು ಸುಪರ್ದಿಗೆ ತೆಗೆದುಕೊಂಡಿದ್ದಾರೆ.

ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ವಾಹನಗಳ ಇಂಚಿಂಚೂ ತಪಾಸಣೆ ನಡೆಸಲಾಗುತ್ತಿದ್ದು, ಕಿಲೋಮೀಟರ್ ಗಟ್ಟಲೆ ವಾಹನ ರಸ್ತೆಯಲ್ಲಿಯೇ ನಿಂತು ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ತಪಾಸಣೆ ವೇಳೆ ಪ್ರಯಾಣಿಕರ ಹೆಸರು, ವಾಹನ ಸಂಖ್ಯೆ ದಾಖಲೆಗಳನ್ನು ಪರಿಶೀಲನೆ ಮಾಡಿ ಪೊಲೀಸರು ವಾಹನವನ್ನು ವಿಮಾನ ನಿಲ್ದಾಣದ ಒಳಗೆ ಬಿಡುತ್ತಿದ್ದಾರೆ.

ನಡೆದಿದ್ದೇನು?
ಸೋಮವಾರ ಆಟೋದಲ್ಲಿ ಬಂದ ಅಪರಿಚಿತ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಬ್ಯಾಗ್ ಇರಿಸಿ ನಾಪತ್ತೆ ಆಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು. ಆ ಬ್ಯಾಗ್‍ನಲ್ಲಿ ಸಜೀವ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಮಂಗಳೂರು ಸೇರಿದಂತೆ ಬಹುತೇಕ ನಗರಗಳಲ್ಲಿ ಕಚ್ಚೆಚ್ಚರ ವಹಿಸಲಾಗಿತ್ತು. ಶಂಕಿತ ಉಡುಪಿ ಮೂಲಕವೇ ಬೇರೆ ಕಡೆ ತೆರಳಿರುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಈ ಸಂಬಂಧ ಉಡುಪಿ ಪ್ರಮುಖ ರಸ್ತೆ, ಕೃಷ್ಣ ಮಠ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದರು.

ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ 10 ಕೆಜಿ ತೂಕವುಳ್ಳ ಸಜೀವ ಬಾಂಬ್‍ನ್ನು ಕೆಂಜಾರು ಮೈದಾನದಲ್ಲಿ ನಿಷ್ಕ್ರಿಯಗೊಳಿಸಲು ತೆಗೆದುಕೊಂಡು ಹೋಗಲಾಗಿತ್ತು. ಬಾಂಬ್ ನಿಷ್ಕ್ರಿಯಗೊಳ್ಳದ ಹಿನ್ನೆಲೆಯಲ್ಲಿ ರಿಮೋಟ್ ಕಂಟ್ರೋಲರ್ ಮೂಲಕ ಅದನ್ನು ಸ್ಫೋಟಿಸಲಾಯಿತು.

ಇದೇ ವೇಳೆ ಇಂಡಿಗೋ ವಿಮಾನಯಾನ ಸಂಸ್ಥೆಗೆ ಬೆದರಿಕೆ ಕರೆಯೊಂದು ಬಂದಿತ್ತು. ಬೆದರಿಕೆ ಕರೆ ಬಂದ ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಮಂಗಳೂರಿನಿಂದ ಹೈದರಾಬಾದ್‍ಗೆ ಟೇಕಾಫ್ ಆಗುತ್ತಿದ್ದ ವಿಮಾನವನ್ನು ತಡೆದಿದ್ದರು. ಮುಂಜಾಗ್ರತ ಕ್ರಮವಾಗಿ ವಿಮಾನದಲ್ಲಿದ್ದ ಎಲ್ಲ 126 ಪ್ರಯಾಣಿಕರನ್ನು ಕೆಳಗಿಳಿಸಿ ಪರಿಶೀಲನೆ ನಡೆಸಿದ್ದರು. ವಿಮಾನ ನಿಲ್ದಾಣದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶಿಲಿಸಿದಾಗ ಶಂಕಿತ ನಿಲ್ದಾಣಕ್ಕೆ ಬಂದು ಟಿಕೆಟ್ ಕೌಂಟರ್ ಬಳಿ ಬಾಂಬ್ ಇರುವ ಬ್ಯಾಗ್ ಇಟ್ಟು ನಾಪತ್ತೆಯಾದ ದೃಶ್ಯಾವಳಿ ಲಭ್ಯವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *