ಮಂಗ್ಳೂರು ಏರ್‌ಪೋರ್ಟಿಗೆ ದುಬೈನಿಂದ ಬಂದ ವ್ಯಕ್ತಿಗೆ ಕೊರೊನಾ

Public TV
1 Min Read

ಮಂಗಳೂರು: ಮಹಾಮಾರಿ ಕೊರೊನಾ ವೈರಸ್ ಇದೀಗ ಕರಾವಳಿಗೂ ಕಾಲಿಟ್ಟಿದೆ. ದುಬೈನಿಂದ ಮಂಗಳೂರಿಗೆ ಬಂದಿಳಿದ ಕಾಸರಗೋಡು ಮೂಲದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ವ್ಯಕ್ತಿಗೆ ಕೊರೊನಾ ಪಾಸಿಟಿವ್ ವರದಿ ಬಂದಿರುವುದರಿಂದ ಆತನ ಜೊತೆ ಬಂದಿದ್ದ ಸಹಪ್ರಯಾಣಿಕರು ಆತಂಕಗೊಂಡಿದ್ದಾರೆ.

ಕಾಸರಗೋಡಿನ ಬದಿಯಡ್ಕದ ನೀರ್ಚಾಲು ನಿವಾಸಿ ಮಾರ್ಚ್ 14ರಂದು ಬೆಳಗ್ಗೆ 5:20ಕ್ಕೆ ಏರ್ ಇಂಡಿಯಾ ಐಎಕ್ಸ್ 814 ವಿಮಾನದಲ್ಲಿ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಸಂದರ್ಭದಲ್ಲಿ ಕೊರೊನಾ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವ್ಯಕ್ತಿಯ ವರದಿ ಪಾಸಿಟಿವ್ ಎಂಬುದಾಗಿ ಬಂದಿದೆ. ಹೀಗಾಗಿ ಅವರನ್ನು ಐಸೋಲೇಷನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

130 ಪ್ರಯಾಣಿಕರಲ್ಲಿ ಆತಂಕ:
ಕಾಸರಗೋಡು ಮೂಲದ ಕೊರೊನಾ ಶಂಕಿತನ ಪಾಸಿಟಿವ್ ವರದಿ ಹಿನ್ನೆಲೆಯಲ್ಲಿ ಅವರ ಜೊತೆ ಪ್ರಯಾಣಿಸಿದ್ದ ಸಹ ಪ್ರಯಾಣಿಕರು ಆತಂಕಗೊಂಡಿದ್ದಾರೆ. ವಿಮಾನದಲ್ಲಿ ಒಟ್ಟು 130 ಪ್ರಯಾಣಿಕರಿದ್ದರು. ಅದರಲ್ಲಿ 90 ಜನ ಮಂಗಳೂರು ಮೂಲದ ಪ್ರಯಾಣಿಕರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ವಿಮಾನದಲ್ಲಿ ಬಂದವರಿಗೂ ಕೊರೊನಾ ಹರಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಕಾಸರಗೋಡು ಜಿಲ್ಲಾಡಳಿತ ಅಲರ್ಟ್ ಆಗಿದೆ.

ಈ ಬಗ್ಗೆ ಮಂಗಳೂರಿನಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ವಿಮಾನದಲ್ಲಿದ್ದ ಎಲ್ಲರ ಮಾಹಿತಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಪಡೆದುಕೊಳ್ಳುತ್ತಿದ್ದೇವೆ. ಜಿಲ್ಲಾಡಳಿತ ಎಲ್ಲರನ್ನೂ ಸಂಪರ್ಕಿಸಿ ಆರೋಗ್ಯ ತಪಾಸಣೆ ನಡೆಸುತ್ತದೆ ಎಂದು ತಿಳಿಸಿದ್ದಾರೆ.

ಮಂಗ್ಳೂರಿನಿಂದ ವಿದೇಶಿ ವಿಮಾನಗಳ ಹಾರಾಟ ರದ್ದು:
ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಬಂದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಬಂದಿರುವುದರಿಂದ ಮಂಗಳೂರಿನಿಂದ ಕುವೈತ್, ಕತಾರ್, ಸೌದಿ ಅರೇಬಿಯಾಕ್ಕೆ ತೆರಳುವ ವಿಮಾನಗಳನ್ನು ಭಾರತ ಸರ್ಕಾರದ ಸೂಚನೆಯಂತೆ ರದ್ದುಗೊಳಿಸಲಾಗಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 34,596 ಜನರ ಸ್ಕ್ರೀನಿಂಗ್ ಮಾಡಲಾಗಿದ್ದು ವಿದೇಶದಿಂದ ಆಗಮಿಸುವವರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *