ಬಾಂಬರ್ ಆದಿತ್ಯರಾವ್ ಮಾಸ್ಟರ್ ಪ್ಲಾನ್ ಕೇಳಿ ದಂಗಾದ ಬೆಂಗಳೂರು ಪೊಲೀಸರು

Public TV
2 Min Read

ಬೆಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ ಶರಣಾಗಿರುವ ಆರೋಪಿ ಆದಿತ್ಯ ರಾವ್ ಮಾಸ್ಟರ್ ಪ್ಲಾನ್ ಕೇಳಿ ಪೊಲೀಸರೇ ಕಕ್ಕಾಬಿಕ್ಕಿಯಾಗಿದ್ದಾರೆ.

ಹೌದು. ಮಂಗಳವಾರ ಬೆಳಗ್ಗೆ ಆದಿತ್ಯ ರಾವ್ ಬೆಂಗಳೂರಿನಲ್ಲಿರುವ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದ. ಶರಣಾದ ನಂತರ ಬೆಂಗಳೂರಿನಲ್ಲೇ ಶರಣಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ ಆದಿತ್ಯ ರಾವ್ ನೀಡಿದ ಉತ್ತರವನ್ನು ಕೇಳಿ ಪೊಲೀಸರು ದಂಗಾಗಿದ್ದಾರೆ.

ಯಾವುದೇ ಕೃತ್ಯ ಮಾಡಿದ ನಂತರ ಆರೋಪಿಗಳು ಪರಾರಿಯಾಗುವುದು ಸಾಮಾನ್ಯ ಸಂಗತಿ. ಆದರಲ್ಲೂ ಅಪರೂಪದ ಪ್ರಕರಣದಲ್ಲಿ ಆರೋಪಿಗಳು ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ನ್ಯಾಯಾಲಯಕ್ಕೆ ಹಾಜರಾಗಿ ಶರಣಾಗುತ್ತಾರೆ ಹೊರತು ಡಿಜಿ ಐಜಿಪಿ ಕಚೇರಿಗೆ ಹಾಜರಾಗಿ ಶರಣಾಗುವುದಿಲ್ಲ. ಆದರೆ ಉಡುಪಿ ಮೂಲದ ಆದಿತ್ಯ ರಾವ್ ನೇರವಾಗಿ ಬೆಳಗ್ಗೆ ಬೆಂಗಳೂರಿನ ಡಿಜಿ ಕಚೇರಿಗೆ ಆಗಮಿಸಿ ಶರಣಾಗಿದ್ದನ್ನು ನೋಡಿ ಪೊಲೀಸರಲ್ಲಿ ಕುತೂಹಲ ಮೂಡಿಸಿತ್ತು. ಹೀಗಾಗಿ ಆತನ ಪ್ರಾಥಮಿಕ ವಿಚಾರಣೆಯಲ್ಲಿ ಈ ಬಗ್ಗೆ ಪೊಲೀಸರು ಪ್ರಶ್ನೆ ಕೇಳಿದ್ದಾರೆ. ಇದನ್ನೂ ಓದಿ: ಕುಟುಂಬದಿಂದಲೇ ಹೊರ ಹಾಕಿದ್ದೇವೆ, 2 ವರ್ಷದಿಂದ ಸಂಪರ್ಕ ಇಲ್ಲ – ಅಕ್ಷತ್ ರಾವ್

ಈ ಪ್ರಶ್ನೆಗೆ ಆದಿತ್ಯ ರಾವ್, ಸಿಸಿಟಿವಿ ವಿಡಿಯೋ, ಫೋಟೋ ಬಿಡುಗಡೆ ಮಾಡಿದ ನಂತರ ಹೇಗೂ ಪೊಲೀಸರು ನನ್ನನ್ನು ಬಂಧಿಸುತ್ತಾರೆ ಎನ್ನುವುದು ಖಚಿತವಾಯಿತು. ಪೊಲೀಸರು ಬಂಧಿಸುವ ಮೊದಲು ನಾನೇ ಶರಣಾದರೆ ಉತ್ತಮ ಎಂಬ ತೀರ್ಮಾನಕ್ಕೆ ಬಂದೆ. ಬಂಧಿಸುವ ಮೊದಲು ನಾನು ದೊಡ್ಡ ಸುದ್ದಿಯಾಗಬೇಕು. ಮಂಗಳೂರಿನಲ್ಲಿ ಶರಣಾದರೆ ಅದಕ್ಕೆ ದೊಡ್ಡ ಮಟ್ಟದ ಪ್ರಚಾರ ಸಿಗುವುದಿಲ್ಲ. ದೊಡ್ಡ ಮಟ್ಟದ ಪ್ರಚಾರ ಪಡೆಯುವ ಆಸೆಯಿಂದಲೇ ನಾನು ಡಿಜಿ ಕಚೇರಿಯಲ್ಲಿ ಶರಣಾಗಿದ್ದೇನೆ ಎಂದು ಹೇಳಿದ್ದಾನೆ. ಆದಿತ್ಯ ರಾವ್ ತನ್ನ ಪ್ರಚಾರದ ತಂತ್ರವನ್ನು ಬಿಚ್ಚಿಡುತ್ತಿದ್ದಂತೆ ವಿಚಾರಣೆ ನಡೆಸುತ್ತಿದ್ದ ಪೊಲೀಸರು ಸಹ ಒಂದು ಕ್ಷಣ ಕಕ್ಕಾಬಿಕ್ಕಿ ಆಗಿದ್ದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಅಪರಾಧ ಪ್ರಕರಣದ ಆರೋಪಿಗಳು ವೇಷ ಮರೆಸಿಕೊಂಡು ತಲೆ ಮರೆಸಿಕೊಳ್ಳುವುದೇ ಹೆಚ್ಚು. ಹಾಗಿರುವಾಗ ಆರೋಪಿಗಳು ಡಿಜಿ ಕಚೇರಿಗೆ ಆಗಮಿಸಿ ಶರಣಾಗಿದ್ದು ನೋಡಿಲ್ಲ ಎಂದು ಹಲವು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಒಬ್ಬನೇ ಬಾಂಬ್ ಫಿಕ್ಸ್ ಮಾಡಲು ಸಾಧ್ಯವಿಲ್ಲ, ಬೇರೆಯವ್ರ ಸಹಾಯದಿಂದ ಮಾಡಿದ್ದಾನೆ: ಖಾದರ್

ಸೋಮವಾರ ರಾತ್ರಿಯೇ ಉಡುಪಿ ಬಿಟ್ಟಿದ್ದ ಆದಿತ್ಯ ರಾವ್, ಶಿವಮೊಗ್ಗಕ್ಕೆ ಹೋಗಿ ಅಲ್ಲಿಂದ ಲಾರಿಯಲ್ಲಿ ಬೆಂಗಳೂರು ತಲುಪಿದ್ದಾನೆ. ಮಂಗಳವಾರ ಬೆಳಗ್ಗೆ ಡಿಜಿಪಿ ನೀಲಮಣಿ ರಾಜು ಎದುರು ಶರಣಾಗಿದ್ದಾನೆ. ಕೂಡಲೇ ಪೊಲೀಸರು, ಆತನನ್ನ ಹಲಸೂರು ಗೇಟ್ ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದರು. ಮಧ್ಯಾಹ್ನ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ನಂತರ 1ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಿ ಟ್ರಾನ್ಸಿಟ್ ವಾರೆಂಟ್ ಮೂಲಕ ಆರೋಪಿಯನ್ನು ಮಂಗಳೂರು ಪೊಲೀಸರು ವಶಕ್ಕೆ ಕೂಡ ಪಡೆದರು. ಸಂಜೆ 7.30ರ ವಿಮಾನದಲ್ಲಿ ಮಂಗಳೂರಿಗೆ ಕರೆದೊಯ್ಯಲಾಯ್ತು. ಇದೀಗ ಸಿಸಿಬಿ ಕಚೇರಿಯಲ್ಲಿ ಆದಿತ್ಯನನ್ನು ಇರಿಸಲಾಗಿದ್ದು, ಇಂದು ಮಂಗಳೂರು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *