ಬ್ಲೂ ಫಿಲ್ಮ್ ನೋಡಿರುವ ವ್ಯಕ್ತಿಗೆ ಮಂತ್ರಿ ಪದವಿ – ಕರಾವಳಿ ಬಿಜೆಪಿ ಕಾರ್ಯಕರ್ತರ ಆಕ್ರೋಶ

Public TV
3 Min Read

– ಫ್ಲೈ ಓವರ್ ಮಾಡಲಾಗದವರು ಪಕ್ಷ ಕಟ್ಟುತ್ತಾರೆಯೇ?

ಮಂಗಳೂರು: ಕರಾವಳಿ ಜಿಲ್ಲೆಗಳಿಗೆ ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಸುಳ್ಯ ಶಾಸಕ ಎಸ್.ಅಂಗಾರ ಸತತ ಆರು ಬಾರಿ ಶಾಸಕರಾಗಿ ತತ್ವ ಸಿದ್ಧಾಂತ ಪಾಲಿಸಿಕೊಂಡು ಬಂದಿದ್ದಕ್ಕೆ ತಕ್ಕ ಶಾಸ್ತಿಯಾಗಿದೆ. ಕರಾವಳಿಯಲ್ಲಿ ಒಬ್ಬ ಶಾಸಕನಿದ್ದರೂ, ಕಾಂಗ್ರೆಸ್ ಸಚಿವ ಸ್ಥಾನ ಕೊಟ್ಟಿತ್ತು. ಬಿಜೆಪಿಯ 15 ಶಾಸಕರಿದ್ದರೂ, ಒಂದೂ ಸ್ಥಾನ ಕೊಟ್ಟಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕನೇ ಅಲ್ಲದ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವ ವಿಚಾರದಲ್ಲೂ ಟೀಕಿಸಿದ್ದು ಮತದಾರರೇ ತಿರಸ್ಕರಿಸಿರುವ, ಬ್ಲೂ ಫಿಲ್ಮ್ ನೋಡಿರುವ ವ್ಯಕ್ತಿಗೆ ಪದವಿ ನೀಡಿರುವುದು ಅಂಥ ದಂಧೆಯವರಿಗೆ ಉತ್ತೇಜನ ಕೊಟ್ಟಂತಲ್ಲವೇ? ಇಂಥ ಖರೀದ್ ಫರೋಕ್ ಸರ್ಕಾರ ಪತನವಾಗಲೆಂದು ಕಾರ್ಯಕರ್ತರು ಶಾಪ ಹಾಕಿದ್ದಾರೆ.

ಸಂಸದ ನಳಿನ್ ಕುಮಾರ್ ಅವರನ್ನು ರಾಜ್ಯಾಧ್ಯಕ್ಷ ಮಾಡಿರುವ ಬಗ್ಗೆಯೂ ಕೆಲವು ಕಾರ್ಯಕರ್ತರು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಬದಲಿಸಬೇಕೆಂದು ಕೂಗೆಬ್ಬಿಸಿದ್ದ ಗುಂಪು, ಮಂಗಳೂರಿನಲ್ಲಿ ಫ್ಲೈ ಓವರ್ ಮಾಡಲಾಗದವರು ಪಕ್ಷ ಕಟ್ಟುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರವೀಣ್ ತೊಗಡಿಯಾ ಮಂಗಳೂರಿನಿಂದಲೇ ಹೊಸ ಪಕ್ಷ ಕಟ್ಟಲಿದ್ದಾರೆ ಎಂದು ಮೂದಲಿಸಿದ್ದಾರೆ.

ಪಕ್ಷದ ಶಿಸ್ತಿನ ಸಿಪಾಯಿ ಎಂದೇ ಬಿಂಬಿಸಿಕೊಂಡಿದ್ದ ಸುಳ್ಯ ಶಾಸಕ ಎಸ್ ಅಂಗಾರ ಅವರು ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಮಂಗಳವಾರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ವಿಡಿಯೋದಲ್ಲಿ ಮಾತನಾಡಿದ ಅವರು, ನಾನು ನಮ್ಮ ಕ್ಷೇತ್ರದಿಂದ ಸಚಿವನಾಗಬೇಕು ಎಂಬುವುದು ನಮ್ಮ ಜಿಲ್ಲೆ ಮತ್ತು ಕ್ಷೇತ್ರದ ಜನರ ಅಪೇಕ್ಷೆಯಾಗಿದೆ. ಆದರೆ ಕಳೆದ ಅನೇಕ ವರ್ಷಗಳಿಂದ ಸಂಘಟನೆಯಲ್ಲಿ ತತ್ವ ಮತ್ತು ಸಿದ್ಧಾಂತವನ್ನು ನಂಬಿ ನಾನು ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಇಂದು ತತ್ವ ನಿಷ್ಠೆಗಳಿಗೆ ಮಹತ್ವ ಇಲ್ಲವೆಂದರೆ ನಾವು ಏನು ಮಾಡುವುದಕ್ಕೆ ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾವು ತತ್ವ ನಿಷ್ಠೆಯನ್ನು ಬಿಡುವುದಕ್ಕೆ ಆಗಲ್ಲ. ಸಂಘಟನೆಯ ಪ್ರಮುಖ ಭಾಗ ಮತ್ತು ಸಂಘಟನೆ ಯಶಸ್ವಿಯಾಗಿ ನಡೆಯಬೇಕಾದರೆ ತತ್ವ ನಿಷ್ಠೆಯೇ ಅತ್ಯಂತ ಪ್ರಮುಖವಾಗಿದೆ. ಆದ ಕಾರಣ ಇಂದು ನಮಗೆ ಸಚಿವ ಸ್ಥಾನ ಸಿಗದೇ ಇರಬಹುದು. ಆದರೆ ಸಂಘಟನೆಯಲ್ಲಿ ಯಾವುದೇ ರೀತಿಯ ಮನಸ್ತಾಪ ಇಲ್ಲ. ಕೆಲವು ಘಟನೆಗಳು ಈ ರೀತಿ ಆಗುತ್ತವೆ. ಅದಕ್ಕೆ ನಾವು ಏನು ಮಾಡುವುದಕ್ಕೆ ಆಗಲ್ಲ. ಇಂದು ನಮ್ಮ ಕ್ಷೇತ್ರದ ಜನರು ನಮ್ಮ ಮೇಲಿನ ಅಭಿಮಾನ ಗೌರವದಿಂದ ಬಂದಿದ್ದರು. ಹೀಗಾಗಿ ಅವರಿಗೆಲ್ಲ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದರು.

 

ದಕ್ಷಿಣ ಕನ್ನಡದ ಲೋಕಸಭಾ ಕ್ಷೇತ್ರದಲ್ಲಿ ಬರುವ ಒಟ್ಟು 8 ಕ್ಷೇತ್ರಗಳಲ್ಲಿ 7 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದುಕೊಂಡಿದೆ. ಹರೀಶ್ ಪೂಂಜಾ(ಬೆಳ್ತಂಗಡಿ), ಉಮನಾಥ ಕೋಟ್ಯಾನ್(ಮೂಡಬಿದಿರೆ), ಡಾ. ಭರತ್ ಶೆಟ್ಟಿ( ಮಂಗಳೂರು ಉತ್ತರ), ವೇದವ್ಯಾಸ ಕಾಮತ್(ಮಂಗಳೂರು ದಕ್ಷಿಣ), ರಾಜೇಶ್ ನಾಯ್ಕ್(ಬಂಟ್ವಾಳ), ಸಂಜೀವ ಮಠದೂರ್(ಪುತ್ತೂರು) ಜಯಗಳಿಸಿದ್ದರು.

ರಾಜ್ಯದ ಹಿರಿಯ ಬಿಜೆಪಿ ಶಾಸಕರಾಗಿರುವ ಜೊತೆಗೆ ಜಿಲ್ಲೆಗೊಂದು ಉಸ್ತುವಾರಿ ಸಚಿವರಾಗಬೇಕಾದ ಹಿನ್ನೆಲೆಯಲ್ಲಿ ಈ ಬಾರಿ ಎಸ್‍ಸಿ ಮೀಸಲು ಕ್ಷೇತ್ರದಿಂದ ಜಯಗಳಿಸಿದ್ದ ಅಂಗಾರ ಅವರಿಗೆ ಮಂತ್ರಿ ಸ್ಥಾನ ಸಿಗುವುದು ಖಚಿತ ಎನ್ನುವ ಮಾತು ಕೇಳಿ ಬಂದಿತ್ತು. ಅಷ್ಟೇ ಅಲ್ಲದೇ ಬಿಜೆಪಿ ವಲಯದಲ್ಲೂ ಮಂತ್ರಿ ಸ್ಥಾನದ ಬಗ್ಗೆ ವಿಶ್ವಾಸದ ಮಾತು ಕೇಳಿ ಬಂದಿತ್ತು.

ಅಂಗಾರ ಅವರು 1994 ರಿಂದ ಆರಂಭಗೊಂಡು 2018ರವರೆಗೆ ನಡೆದ ಚುನಾವಣೆಯಲ್ಲಿ ಸತತ ಆರು ಬಾರಿ ಗೆದ್ದಿದ್ದಾರೆ. ದೋಸ್ತಿ ಸರ್ಕಾರದಲ್ಲಿ ಮಂಗಳೂರು(ಹಿಂದೆ ಉಳ್ಳಾಲ ಆಗಿತ್ತು) ಕ್ಷೇತ್ರದಿಂದ ಗೆದ್ದಿದ್ದ ಯುಟಿ ಖಾದರ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿತ್ತು. ಅದಕ್ಕೂ ಮೊದಲು ಸಿದ್ದರಾಮಯ್ಯ ಸರ್ಕಾರದಲ್ಲಿ ರಾಮನಾಥ ರೈ, ಖಾದರ್ ಸಚಿವರಾಗಿದ್ದರೆ ಪುತ್ತೂರಿನಿಂದ ಗೆದ್ದಿದ್ದ ಶಕುಂತಲಾ ಶೆಟ್ಟಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *