ಕಡಲ ನಗರಿಯಲ್ಲಿ ಹಬ್ಬದ ಕಳೆ, ನಾಳೆಯಿಂದ ಮಂಗಳೂರು ದಸರಾ!

Public TV
1 Min Read

ಮಂಗಳೂರು: ಮೈಸೂರು ದಸರಾ ಮಾದರಿಯಲ್ಲೇ ಮಂಗಳೂರು ದಸರಾ ಖ್ಯಾತಿಯೂ ಏರುತ್ತಿದೆ. ಕಡಲ ತಡಿಯ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಈ ದಸರಾ ಉತ್ಸವ ಮಂಗಳೂರಿನ ಪಾಲಿಗೆ ಹಬ್ಬದ ಕಳೆ ತರುತ್ತೆ. ಈ ಬಾರಿ ಉತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿ ಚಾಲನೆ ನೀಡುತ್ತಿದ್ದಾರೆ.

ಹೌದು. ಹಿಂದೆಲ್ಲಾ ದಸರಾ ಅಂದರೆ ಬರೀ ಮೈಸೂರು ಅನ್ನುವುದಷ್ಟೇ ರಾಜ್ಯದ ಜನರಿಗಿತ್ತು. ಆದರೆ, ಈಗ ಕರಾವಳಿಯ ಮಂಗಳೂರಿನ ದಸರಾ ದೇಶದಲ್ಲಿ ಗುರುತಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಮೈಸೂರು ದಸರಾ ರೀತಿಯಲ್ಲೇ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಉತ್ಸವ ಕಳೆಗಟ್ಟಿದ್ದು, ಹತ್ತು ದಿನಗಳ ವೈಭವದ ಉತ್ಸವಕ್ಕೆ ನಾಳೆ ಅದ್ಧೂರಿ ಚಾಲನೆ ಸಿಗಲಿದೆ.

ದಸರಾ ಹಿನ್ನೆಲೆಯಲ್ಲಿ ಈಗಾಗಲೇ ಮಂಗಳೂರು ನಗರವಿಡೀ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದು, ಉತ್ಸವದ ಕಳೆ ಬಂದಿದೆ. ಸಂಜೆಯಾಗುತ್ತಿದ್ದಂತೆ ಬಣ್ಣದ ಲೋಕ ಆವರಿಸುತ್ತಿದೆ. ನಾಳೆ ಬೆಳಗ್ಗೆ ನವದುರ್ಗೆಯರ ಸಹಿತ ಶಾರದಾ ಮೂರ್ತಿಯ ಪ್ರತಿಷ್ಠೆ ನಡೆಯಲಿದ್ದು ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಮಹಾಬಲೇಶ್ವರ ಎಸ್. ಉದ್ಘಾಟಿಸಲಿದ್ದಾರೆ.

ಮಂಗಳೂರು ದಸರಾ ಉತ್ಸವಕ್ಕೆ ಅಕ್ಟೋಬರ್ 14 ರಂದು ರಾಜ್ಯದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಉದ್ಘಾಟನೆ ಚಾಲನೆ ನೀಡಲಿದ್ದಾರೆ. ಕ್ಷೇತ್ರದ ರೂವಾರಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಹಬ್ಬದೋಪಾದಿಯಲ್ಲಿ ಉತ್ಸವ ನಡೆಯಲಿದ್ದು, ವಿಜಯದಶಮಿಯಂದು ಸುದೀರ್ಘ ದಸರಾ ಮೆರವಣಿಗೆ ನಡೆಯಲಿದೆ. 75 ಕ್ಕೂ ಹೆಚ್ಚು ಸ್ತಬ್ಧಚಿತ್ರಗಳೊಂದಿಗೆ 9 ಕಿಮೀ ಉದ್ದಕ್ಕೆ 16 ಗಂಟೆಗಳ ಕಾಲ ಮೆರವಣಿಗೆ ನಡೆಯುವುದು ವಿಶೇಷ ಎಂದು ಕುದ್ರೋಳಿ ಕ್ಷೇತ್ರದ ಟ್ರಸ್ಟಿ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.

ಒಟ್ಟಿನಲ್ಲಿ ಮೈಸೂರು ದಸರಾ ರೀತಿಯಲ್ಲೇ ವಿದೇಶಿಗರನ್ನು ಆಕರ್ಷಿಸುವ ಮಾದರಿಯಲ್ಲಿ ಮಂಗಳೂರು ದಸರಾ ಉತ್ಸವ ನಡೆಯುವುದು ಕರಾವಳಿಗರಿಗೆ ಹೆಮ್ಮೆಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *