ಪೌರತ್ವ ಪರ ಜನ ಜಾಗೃತಿ ಸಭೆ – ಹರಿದು ಬಂದ ಕೇಸರಿ ಸಾಗರ

Public TV
2 Min Read

ಮಂಗಳೂರು: ಪೌರತ್ವ ವಿಚಾರ ಮಂಗಳೂರಿನಲ್ಲಿ ಮತ್ತೆ ಕಿಚ್ಚು ಹಚ್ಚಿದೆ. ಪೌರತ್ವ ಕಾಯ್ದೆ ಬೆಂಬಲಿಸಿ ಕಡಲನಗರಿಯಲ್ಲಿ ಲಕ್ಷಾಂತರ ಜನ ಒಂದಾಗಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪೌರತ್ವ ಕಾಯ್ದೆಯ ಬಗ್ಗೆ ಮಂಗಳೂರಿನಲ್ಲಿ ಘಂಟಾಘೋಷ ಮೊಳಗಿಸಿದ್ದು ಭಾರತದ ಯಾವುದೇ ಮುಸ್ಲಿಮರಿಗೂ ಇದರಿಂದ ತೊಂದರೆಯಾಗಲ್ಲ ಎಂದು ಸಾರಿದ್ದಾರೆ. ಮುಸ್ಲಿಮರನ್ನು ಎತ್ತಿಕಟ್ಟುವ ಪ್ರತಿಪಕ್ಷಗಳದ್ದು ದೊಡ್ಡ ಪಿತೂರಿ ಎಂದು ಕಿಡಿಕಾರಿದ್ದಾರೆ.

ಕರಾವಳಿ ಕೇಸರಿ ಪಾಳಯದ ಪ್ರಭಾವಿ ನೆಲ ಅನ್ನುವುದನ್ನು ಬಿಜೆಪಿ ನಾಯಕರು ಮತ್ತೆ ಸಾಬೀತು ಪಡಿಸಿದ್ದಾರೆ. ಪೌರತ್ವ ಕಾಯ್ದೆ ವಿರೋಧಿಸಿ ಲಕ್ಷಾಂತರ ಜನ ಸೇರಿದ್ದ ಮಂಗಳೂರಿನಲ್ಲಿಯೇ ಕಾಯ್ದೆ ಬೆಂಬಲಿಸಿ ಲಕ್ಷಾಂತರ ಜನರನ್ನು ಒಗ್ಗೂಡಿಸಿದ್ದಾರೆ. ಮಂಗಳೂರು ಹೊರವಲಯದ ಬಂಗ್ರಕುಳೂರಿನಲ್ಲಿ ನಡೆದ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಕೇಸರಿ ಪಾಳಯ ಅಬ್ಬರಿಸಿದ್ದು ವಿರೋಧ ಪಕ್ಷಗಳಿಗೆ ಎಚ್ಚರಿಕೆ ಗಂಟೆ ಮೊಳಗಿಸಿದೆ.

ಪೌರತ್ವ ಕಾಯಿದೆ, ಎನ್.ಆರ್.ಸಿ, ಎನ್.ಪಿ.ಆರ್ ಬಗ್ಗೆ ಹೆಚ್ಚು ಕಿಚ್ಚು ಕಾಣಿಸಿಕೊಂಡಿದ್ದು ಉತ್ತರ ಪ್ರದೇಶ ಬಿಟ್ಟರೆ, ಕರಾವಳಿಯ ಮಂಗಳೂರಿನಲ್ಲಿ. ಹೀಗಾಗಿ ಕಾಯ್ದೆ ಬಗ್ಗೆ ಸಮರ್ಥನಾ ಸಮಾವೇಶ ಬಿಜೆಪಿಗೆ ಅನಿವಾರ್ಯ ಆಗಿತ್ತು. ಆರಂಭದಲ್ಲಿ ಬಿಜೆಪಿ ಗೃಹ ಸಚಿವ ಅಮಿತ್ ಶಾರನ್ನು ಕರೆಸಲು ಯೋಜನೆ ಹಾಕಿತ್ತು. ಕೊನೆ ಕ್ಷಣದಲ್ಲಿ ಅಮಿತ್ ಶಾ ಬಿಟ್ಟು ಬಿಜೆಪಿ ಮಾಜಿ ಅಧ್ಯಕ್ಷ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ರನ್ನು ಕರೆಸಿ ಕಾಯ್ದೆ ಬಗ್ಗೆ ಜನರಿಗೆ ವಾಗ್ದಾನ ನೀಡುವಂತೆ ಮಾಡಿದೆ. ಒಂದು ಲಕ್ಷಕ್ಕೂ ಹೆಚ್ಚು ಸೇರಿದ್ದ ಜನರನ್ನು ನೋಡಿದ ರಾಜನಾಥ್ ಸಿಂಗ್, ಇಷ್ಟು ದೊಡ್ಡ ಸಮಾವೇಶ ಉದ್ದೇಶಿಸಿ ಇದೇ ಮೊದಲ ಬಾರಿಗೆ ಮಾತಾಡುತ್ತಿದ್ದೇನೆಂದು ಹರ್ಷ ವ್ಯಕ್ತಪಡಿಸಿದರು.

ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು 1949ರಲ್ಲಿ ಕಾಂಗ್ರೆಸ್ ನಾಯಕರೇ ಹೇಳಿದ್ದರು. 2004ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಲೋಕಸಭೆಯಲ್ಲಿ ಈ ಬಗ್ಗೆ ಮತ್ತೆ ಪ್ರಸ್ತಾಪ ಮಾಡಿದ್ದರು. ಆದರೆ, ಕಾಯ್ದೆಗೆ ತಿದ್ದುಪಡಿ ಆಗಲಿಲ್ಲ. ಈಗ ಮೋದಿ ಸರ್ಕಾರ ಆ ಕೆಲಸ ಮಾಡಿದಾಗ, ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಮುಸ್ಲಿಮರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಈ ಕಾಯ್ದೆಯಿಂದ ಯಾವುದೇ ಭಾರತೀಯ ಮುಸ್ಲಿಮರಿಗೆ ತೊಂದರೆಯಾಗಲ್ಲ. ಎನ್.ಪಿ.ಆರ್ ಜನಗಣತಿ ಅಷ್ಟೇ. ಅದರಿಂದ ಯಾವುದೇ ಸಮಸ್ಯೆ ಆಗಲ್ಲ ಎಂದು ಹೇಳಿದರು.

ಇದಲ್ಲದೆ, ತ್ರಿವಳಿ ತಲಾಖ್, ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ 370 ವಿಧಿ ರದ್ದತಿ ಬಗ್ಗೆಯೂ ಪ್ರಸ್ತಾಪಿಸಿದ ರಾಜನಾಥ್ ಸಿಂಗ್, ಮುಂದಿನ ಗುರಿ ಪಿಓಕೆಯಾಗಿದ್ದು ಅದನ್ನೂ ಪಡೆದೇ ತೀರುವುದಾಗಿ ಶಪಥ ಮಾಡಿದರು. ಅಲ್ಲದೆ ಕಾಶ್ಮೀರದಿಂದ ಹೊರಹಾಕಲ್ಪಟ್ಟಿದ್ದ ಕಾಶ್ಮೀರಿ ಪಂಡಿತರನ್ನೇ ಮತ್ತೆ ಅದೇ ಜಾಗದಲ್ಲಿ ಕೂರಿಸುತ್ತೇವೆ ಅಂತ ಹೇಳಿದರು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಯಿಂದ ಜನ ಆಗಮಿಸಿದ್ದರು. ಸುಮಾರು 800 ಕ್ಕೂ ಹೆಚ್ಚು ಬಸ್, ಕಾರು ಸೇರಿ ಸಾವಿರಾರು ವಾಹನಗಳಲ್ಲಿ ಜನ ಆಗಮಿಸಿದ್ದು ಸಿಎಎ ಪರವಾಗಿ ಘಂಟಾಘೋಷ ಮೊಳಗಿಸಿದ್ದಾರೆ. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿದರು. ಕರಾವಳಿಯ ನೆಲ ಸಿಎಎ ವಿಚಾರದಲ್ಲಿ ಪರ-ವಿರೋಧಿ ಕಿಚ್ಚಿನ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದು, ಉಭಯ ಬಣಗಳ ಮುಂದಿನ ನಡೆ ಕುತೂಹಲ ಸೃಷ್ಟಿಸಿದೆ.

Share This Article
Leave a Comment

Leave a Reply

Your email address will not be published. Required fields are marked *