ಬೆಳಗಾವಿಯ ಅನಧಿಕೃತ ಕಸಾಯಿಖಾನೆಗೆ ಸಚಿವೆ ಮನೇಕಾ ಗಾಂಧಿ ಭೇಟಿ

Public TV
2 Min Read

ಬೆಳಗಾವಿ: ನಗರದಲ್ಲಿನ ಅನಧಿಕೃತ ಕಸಾಯಿಖಾನೆಗಳಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವೆ ಮನೇಕಾ ಗಾಂಧಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಹಲವಾರು ವರ್ಷಗಳಿಂದ ಅನಧಿಕೃತ ಕಸಾಯಿಖಾನೆಗಳು ನಡೆಯುತ್ತಿವೆ. ಈ ಕುರಿತು ಸ್ಥಳೀಯರು ಅಕ್ಟೋಬರ್ ನಲ್ಲಿ ದೂರು ದಾಖಲಿಸಿದ್ದರು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ತಮಗೆ ದೊರಕಿರುವ ಮೂಲಗಳ ಮಾಹಿತಿ ಪ್ರಕಾರ ಗೋವುಗಳ ಕಳ್ಳ ಸಾಗಾಣೆ ಮಾಡಲಾಗುತ್ತಿದೆ. ಆಕ್ರಮ ಬಾಂಗ್ಲಾ ವಲಸಿಗರು ಅಲ್ಲದೇ ಪರಿಸರ ನಾಶ ಮಾಡುವಂತಹ ಎಲ್ಲಾ ಆಕ್ರಮಗಳು ಇಲ್ಲಿ ನಡೆಯುತ್ತಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದನ್ನು ತಡೆಯಲು ಯತ್ನಿಸದ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಸಲು ಸೂಚನೆ ನೀಡುವುದಾಗಿ ತಿಳಿಸಿದರು. ಅಲ್ಲದೇ ಸ್ಥಳದಲ್ಲೇ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು.

ಇದೇ ವೇಳೆ ಆಕ್ರಮ ಕಸಾಯಿ ಖಾನೆ ನಡೆಯುತ್ತಿರುವುದರ ಹಿಂದೆ ಪೊಲೀಸರು ಹಾಗೂ ಸ್ಥಳೀಯ ಶಾಸಕರ ಕೈವಾಡವಿದೆ. ಅಲ್ಲದೇ ಬೆಳಗಾವಿ ಅಟೋ ನಗರದಲ್ಲಿ ಸರಿ ಸುಮಾರು 11 ಕ್ಕೂ ಹೆಚ್ಚು ಅನಧಿಕೃತ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತಿದ್ದರೂ ಸ್ಥಳೀಯ ಪೊಲೀಸರು ಸುಮ್ಮನಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ಕೇಂದ್ರ ಸಚಿವರಿಗೆ ರಾಜ್ಯ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದರಾದ ಸುರೇಶ ಅಂಗಡಿ ಹಾಗೂ ಪ್ರಹ್ಲಾದ್ ಜೋಷಿ ಸಾಥ್ ನೀಡಿದರು. ಅಲ್ಲದೇ ಅನಧಿಕೃತ ಕಸಾಯಿಖಾನೆಯ ಪ್ರವೇಶ ದ್ವಾರದ ಬಳಿ ಕೆಲ ನಿಮಿಷ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ನಂತರ ನಗರ ಪೊಲೀಸ್ ಆಯುಕ್ತ ಡಿಸಿ ರಾಜಪ್ಪ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಘಟನೆ ಕುರಿತು ಮಾಹಿತಿ ನೀಡಿದರು.

ಬೆಳಗಾವಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅನಧಿಕೃತ ಕಸಾಯಿ ಕಾರ್ಖಾನೆಗಳು ನಡೆಯುತ್ತಿದ್ದು, ಆಕ್ರಮವಾಗಿ ಗೋವುಗಳ ಮಾರಣ ಹೊಮ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಕುರಿತು ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆಕ್ರಮದ ಕುರಿತು ಮಾಹಿತಿ ಪಡೆದ ಪೊಲೀಸರು ಘಟಕಗಳನ್ನು ಸೀಜ್ ಮಾಡಿದ್ದರು. ಆದರೆ ಕಸಾಯಿಖಾನೆ ಮಾಲೀಕರು ಮತ್ತೊಂದು ದ್ವಾರದಿಂದ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಪ್ರಸ್ತುತ ಕಸಾಯಿಖಾನೆ ಮಾಲೀಕರು ತಲೆ ಮರೆಸಿಕೊಂಡಿದ್ದು ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *