ಶ್ರೀರಂಗಪಟ್ಟಣ ಜೆಡಿಎಸ್ ಶಾಸಕರನ್ನು ರಸ್ತೆ ಮಧ್ಯದಲ್ಲಿಯೇ ನಿಲ್ಲಿಸಿ ಕಾರ್ಯಕರ್ತರಿಂದ ತರಾಟೆ: ವಿಡಿಯೋ ವೈರಲ್

Public TV
1 Min Read

ಮಂಡ್ಯ: ಶ್ರೀರಂಗಪಟ್ಟಣ ಮತಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನು ಕಿರಗಂದೂರಿಗೆ ಬರದಂತೆ ಪಕ್ಷದ ಕಾರ್ಯಕರ್ತರೇ ರಸ್ತೆ ಮಧ್ಯದಲ್ಲಿಯೇ ತಡೆದು, ತರಾಟೆಗೆ ತಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್  ಆಗಿದೆ.

ಇತ್ತೀಚೆಗೆ ಕಿರಗಂದೂರು ಗ್ರಾಮಕ್ಕೆ ಶಾಸಕರು ಅಧಿಕಾರಿಗಳೊಂದಿಗೆ ಭೇಟಿ ನೀಡಲು ಆಗಮಿಸುತ್ತಿದ್ದರು. ತಕ್ಷಣವೇ ಮಾಹಿತಿ ಪಡೆದ ಗ್ರಾಮದ ಜೆಡಿಎಸ್ ಕಾರ್ಯಕರ್ತರು ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಶಾಸಕರನ್ನು ತಡೆದು, ನೀವು ಬರುವುದನ್ನು ಮೊದಲೇ ಹೇಳಬೇಕಿತ್ತು. ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳುತ್ತಿದ್ದೇವು. ನೀವು ಹಣ ನೀಡುವ ಅಗತ್ಯವಿರಲಿಲ್ಲ, ನಮ್ಮ ಸ್ವಂತ ಹಣದಲ್ಲಿ 5 ಲಕ್ಷ ರೂ. ಖರ್ಚು ಮಾಡಿ ಸ್ವಾಗತ ಮಾಡಿಕೊಳ್ಳುತ್ತಿದ್ದೇವು. ಕಾರ್ಯಕರ್ತರಿಗೆ ತಿಳಿಸದೇ ದಿಢೀರ್ ಗ್ರಾಮಕ್ಕೆ ಭೇಟಿ ನೀಡಲು ಮುಂದಾದ ನಿಮ್ಮ ನಡೆ ಸೂಕ್ತವಲ್ಲ ಎಂದು ದೂರಿದರು.

ಪಕ್ಷದ ಕಾರ್ಯಕರ್ತರು ರಸ್ತೆ ಮಧ್ಯದಲ್ಲಿಯೇ ಹೀಗೆ ನಡೆದುಕೊಂಡಿದ್ದರಿಂದ ರೋಸಿ ಹೋದ ಶಾಸಕರು, ಇವತ್ತು ನಿಮ್ಮ ಯೋಗ್ಯತೆಯನ್ನು ತೋರಿಸಿದ್ದೀರಿ. ಇನ್ನು ಮುಂದೆ ನಾನು ಯಾವತ್ತೂ ನಿಮಗೆ ಹತ್ತಿರ ಆಗಿರಲು ಸಾಧ್ಯತೆ ಇಲ್ಲ. ಅಧಿಕಾರಿಗಳನ್ನು ಕರೆದುಕೊಂಡು ಗ್ರಾಮಕ್ಕೆ ಬರುವಾಗ ಹೀಗೆ ನಡೆದುಕೊಂಡಿದ್ದು ಸೂಕ್ತವಲ್ಲ ಎಂದು ಕಾರು ಹತ್ತಿ ಕುಳಿತ ಶಾಸಕರು, ನಾನು ರಾಜಕೀಯ ನೋಡಿರುವೆ, ನಿಮಗೆ ಹೆದರಿ ಹೋಗುತ್ತಿಲ್ಲ. ನೀವು ನನ್ನ ಅಡ್ಡಗಟ್ಟಿ ಮರ್ಯಾದೆ ಕಳೆಯುವ ಕೆಲಸ ಮಾಡಿದ್ದೀರಿ ಎಂದು  ಹೇಳಿ ಜಾಗ ಖಾಲಿ ಮಾಡಿದರು.

ಕಾರು ಏರಿ ಶಾಸಕರು ಜಾಗ ಖಾಲಿ ಮಾಡುತ್ತಿದ್ದಂತೆ, ನಮ್ಮ ಗ್ರಾಮದ ಅಭಿವೃದ್ಧಿಯನ್ನು ಹೇಗೆ ಮಾಡಿಕೊಳ್ಳಬೇಕು ಅಂತಾ ಗೊತ್ತು. ಹೋಗಿ, ಹೋಗಿ ಎಂದು ಕಾರ್ಯಕರ್ತರು ವ್ಯಂಗ್ಯವಾಡಿದರು. ಶಾಸಕರು ಹಾಗೂ ಕಾರ್ಯಕರ್ತರ ವಾಗ್ದಾಳಿಯನ್ನು ಸ್ಥಳಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವೈರಲ್ ಆಗಿದೆ.

https://youtu.be/oNt9qzy9Bso

Share This Article
Leave a Comment

Leave a Reply

Your email address will not be published. Required fields are marked *