ಮಂಡ್ಯದಲ್ಲೊಂದು ದುರಂತ ಪ್ರೇಮ ಕಥೆ | ಲವರ್‌ಗಾಗಿ ನದಿಗೆ ಹಾರಿದ ಗೃಹಿಣಿ – ಪ್ರಿಯಕರ ನೇಣಿಗೆ ಶರಣು

By
1 Min Read

– ಪ್ರಿಯತಮೆಯ ಸ್ನೇಹಿತೆಯ ಜೊತೆ ಮದುವೆ

ಮಂಡ್ಯ: ಪ್ರೇಮ ಪುರಾಣಕ್ಕೆ ಇಬ್ಬರು ವಿವಾಹಿತ ಪ್ರೇಮಿಗಳು (Lovers) ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಮಂಡ್ಯ (Mandya) ಜಿಲ್ಲೆಯಲ್ಲಿ ನಡೆದೆದೆ.

ಮದುವೆಯಾಗಿದ್ದರೂ ಗೆಳೆಯನಿಗಾಗಿ ನದಿಗೆ ಹಾರಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡರೆ, ಪ್ರಿಯತಮೆ ಸಾವಿನ ವಿಚಾರ ತಿಳಿದು ಅತ್ತ ಪ್ರಿಯಕರ ನೇಣಿಗೆ ಶರಣಾಗಿದ್ದಾನೆ. ಮದ್ದೂರು ತಾಲೂಕಿನ ಯರಗನಹಳ್ಳಿ ಗ್ರಾಮದ ಸೃಷ್ಟಿ(20) ಮೃತ ಗೃಹಿಣಿಯಾಗಿದ್ದು, ಬನ್ನಹಳ್ಳಿ ಗ್ರಾಮದ ಪ್ರಸನ್ನ (25) ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾನೆ.

ಕಳೆದ ಕೆಲವು ವರ್ಷಗಳಿಂದ ಪ್ರಸನ್ನ ಹಾಗೂ ಸೃಷ್ಟಿ ಪ್ರೀತಿಸುತ್ತಿದ್ದರು. ಈ ಮಧ್ಯೆ ಪ್ರಸನ್ನ ಸೃಷ್ಟಿಯ ಸ್ನೇಹಿತೆ ಸ್ಪಂದನಾಳನ್ನು ಪ್ರೀತಿ ಮಾಡುತ್ತಿದ್ದ ಅಂತಿಮವಾಗಿ ಪ್ರಸನ್ನ ಮತ್ತು ಸ್ಪಂದನಾ ಮದುವೆಯಾದರೆ ಒಂದೂವರೆ ವರ್ಷದ ಹಿಂದೆ ದಿನೇಶ್ ಜೊತೆ ಸೃಷ್ಟಿಯ ಮದುವೆ ನಡೆದಿತ್ತು.

ಬೇರೆ ಬೇರೆ ಮದುವೆಯಾಗಿದ್ದರೂ ಪ್ರಸನ್ನ ಸೃಷ್ಟಿ ನಡುವೆ ಪ್ರೀತಿ ಮಾತುಕತೆ ನಡೆಯುತ್ತಿತ್ತು. ಈ ವಿಚಾರಕ್ಕೆ ಸೃಷ್ಟಿ ಹಾಗೂ ಪತಿ ದಿನೇಶ್ ನಡುವೆ ಆಗಾಗ ಜಗಳ ನಡೆಯುತ್ತಿರುತ್ತದೆ. ಡಿ.11 ರಂದು ಪತಿ ಮನೆಯಿಂದ ಸೃಷ್ಟಿ ನಾಪತ್ತೆಯಾಗಿದ್ದಳು. ಪತ್ನಿ ನಾಪತ್ತೆ ಬೆನ್ನಲ್ಲೇ ದಿನೇಶ್‌ ಅವರು ಕೆಸ್ತೂರು ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸುತ್ತಾರೆ.

ಡಿ.16 ರಂದು ಶಿಂಷಾ ನದಿಯಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗುತ್ತದೆ. ಈ ಶವ ಯಾರದ್ದೂ ಎಂದು ಪರಿಶೀಲಿಸಿದಾಗ ನಾಪತ್ತೆಯಾದ ಸೃಷ್ಟಿಯದ್ದೇ ಎನ್ನುವುದು ದೃಢಪಡುತ್ತದೆ. ಸೃಷ್ಟಿ ಆತ್ಮಹತ್ಯೆ ವಿಚಾರ ತಿಳಿದು ಪ್ರಸನ್ನ ವಿಚಲಿತಗೊಂಡಿದ್ದ.

ಸೃಷ್ಟಿ ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ ಎಂದು ತನಿಖೆ ನಡೆಸಲು ಪೊಲೀಸರು ಮುಂದಾಗುತ್ತಿದ್ದಂತೆ ಪ್ರಸನ್ನ ಈಗ ತನ್ನ ಮನೆಯಲ್ಲಿ ‌ನೇಣಿಗೆ ಶರಣಾಗಿದ್ದಾನೆ. ಈ ಮೂಲಕ ಮೂವರ ಪ್ರೇಮ ಕಥೆ ಇಬ್ಬರ ಸಾವಿನ ಮೂಲಕ ಮುಕ್ತಾಯವಾಗಿದೆ. ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುತೂಹಲದ ವಿಚಾರ ಏನೆಂದರೆ ಸೃಷ್ಟಿ ಹಾಗೂ ಸ್ಪಂದನಾ ಇಬ್ಬರು ಒಂದೇ ತರಗತಿಯಲ್ಲಿ ಓದುತ್ತಿದ್ದರು. ಪ್ರಸನ್ನ ಸೃಷ್ಟಿಯನ್ನು ಪ್ರೀತಿಸುತ್ತಿದ್ದ ವಿಚಾರ ಸ್ಪಂದನಾಗೆ ಗೊತ್ತಿರಲಿಲ್ಲ. ಮದುವೆಗೂ ಮೊದಲು ಪ್ರಸನ್ನ ಸೃಷ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೂ ಯತ್ನಿಸಿದ್ದ ವಿಚಾರ ಈಗ ತಿಳಿದುಬಂದಿದೆ.

 

Share This Article