ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ- ಸುಮಲತಾ

Public TV
2 Min Read

ಮಂಡ್ಯ: ಇಲ್ಲಿನ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಚಿಕ್ಕರಸಿನಕೆರೆ ಗ್ರಾಮದ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಬಳಿಕ ಬಸವನ ಆಶೀರ್ವಾದ ಪಡೆದು, ಕಾಣಿಕೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರನ್ನು ನೀವು ನೋಡಿಕೊಂಡಿದ್ದೀರಿ, ಸಾಕಿದ್ದೀರಿ, ಬೆಳೆಸಿದ್ದೀರಿ. ಆ ಒಂದು ಪ್ರೀತಿಯ ಋಣ ನಮ್ಮಲ್ಲಂತೂ ಇದ್ದೇ ಇದೆ. ಆ ಋಣ ತೀರಿಸಲು ಅವಕಾಶ ಸಿಕ್ಕರೆ ಖಂಡಿತಾ ನಾನು ಅದನ್ನು ನೆರವೇರಿಸುತ್ತೇನೆ ಎಂದು ಅವರು ಹೇಳಿದ್ರು.

ಅಭಿಮಾನಿಗಳ ಪ್ರೀತಿ ವಿಶ್ವಾಸದ ಮಾತುಗಳೇ ನನ್ನನ್ನು ಇಷ್ಟು ದೂರ ಕರೆದುಕೊಂಡು ಬಂದಿದೆ. ಆ ದೇವರ ಆಶೀರ್ವಾದ ಇದ್ದರೆ ಖಂಡಿತಾ ನಿಮ್ಮೆಲ್ಲರ ಆಸೆಯಂತೆ ಒಳ್ಳೆಯದಾಗಬೇಕು ಎಂದು ನನಗೂ ಆಸೆ ಇದೆ. ಅದರಂತೆ ಮುಂದೆ ಏನು ಮಾಡಬೇಕು ಅನ್ನೋ ತೀರ್ಮಾನವನ್ನು ನಿಮ್ಮೆಲ್ಲರನ್ನು ಕೇಳಿ, ನಿಮ್ಮ ಆಶೀರ್ವಾದ ತೆಗೆದುಕೊಂಡು ಮುಂದಿನ ಹೆಜ್ಜೆ ಏನಿದ್ದರೂ ನಿಮ್ಮ ಜೊತೆಯಲ್ಲೇ ಇಡುತ್ತೇನೆ ಅಂದ್ರು.

ಸಿದ್ದರಾಮಯ್ಯ ಭೇಟಿ:
ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನಿನ್ನೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅವರ ಗಮನಕ್ಕೆ ತಂದಿದ್ದೇನೆ. ಮಂಡ್ಯದ ಜನತೆ ಹಾಗೂ ಅಂಬರೀಶ್ ಅವರ ಅಭಿಮಾನಿಗಳ ಆಸೆ, ಅಪೇಕ್ಷೆಯನ್ನು ಸಿದ್ದರಾಮಯ್ಯ ಅವರ ಮುಂದಿಟ್ಟಿದ್ದೇನೆ. ಪಕ್ಷದ ಕಾರ್ಯಕರ್ತರು ಕೂಡ ಸ್ಪರ್ಧೆ ಮಾಡಬೇಕೆಂದು ಇಷ್ಟಪಡುತ್ತಿದ್ದಾರೆ. ಜನರು ಕೂಡ ಅಂಬರೀಶ್ ಅವರ ಮೇಲಿರುವ ಪ್ರೀತಿಯಿಂದ ಪ್ರೀತಿ, ವಿಶ್ವಾಸವನ್ನು ಇಷ್ಟು ವರ್ಷ ಪಡೆದುಕೊಂಡು ಬಂದಿದ್ದೇವೆ. ಅದನ್ನು ಇದೇ ರಿತಿ ಮುಂದುವರಿಸಿಕೊಂಡು ಹೋಗುವ ಆಸೆ ಜನರಲ್ಲಿದೆ. ಹೀಗಾಗಿ ಅವರ ಆಸೆಯನ್ನು ನಾನು ಇಷ್ಟು ದೂರ ಬಂದು ಹೇಳುತ್ತಿದ್ದೇನೆ ಎಂದು ಹೇಳಿದ್ದೇನೆ. ಈ ವೇಳೆ ಅವರು ಕೂಡ ಈ ವಿಚಾರ ನನಗೆ ಗೊತ್ತಾಯಿತು. ಹೀಗಾಗಿ ಈ ಕುರಿತು ನಾವು ಚರ್ಚೆ ಮಾಡಿ ನಿಮಗೆ ತಿಳಿಸುತ್ತೇನೆ ಎಂದು ಸಿದ್ದರಾಮಯ್ಯ ಅವರ ಜೊತೆ ನಡೆಸಿದ ಮಾತುಕತೆಯ ಬಗ್ಗೆ ತಿಳಿಸಿದ್ರು.

ಸ್ವತಂತ್ರವಾಗಿ ಸ್ಪರ್ಧೆ ಮಾಡುವ ನಿರ್ಧಾರದ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಸದ್ಯ ಅಂಬರೀಶ್ ಅವರು 20, 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲೇ ಇದ್ದರು. ಲಾಯಲ್ ಪಾರ್ಟಿ ವರ್ಕರ್ ಆಗಿದ್ದರು. ಅವರು ಯಾವುದೇ ಆಫರ್ ಗಳತ್ತ ಹೋಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅವರ ಸೇವೆ ಇದೆ. ಅದೇ ರೀತಿ ನಾವು ಕೂಡ ಕಾಂಗ್ರೆಸ್ ಪಕ್ಷದಿಂದಲೇ ಗುರುತಿಸಿಕೊಳ್ಳಬೇಕು ಅನ್ನೋ ಭಾವನೆ ಇರುವುದಾಗಿ ಅವರು ಅಭಿಪ್ರಾಯಿಸಿದ್ರು.

ಬಿಜೆಪಿಯ ಆಫರ್ ಅಥವಾ ಬೇರೆ ಆಫರ್ ಇನ್ನೂ ತೀರ್ಮಾನಿಸಿಲ್ಲ. ರಾಜಕೀಯವಾಗಿ ಬರಬೇಕು ಎಂದು ತೀರ್ಮಾನಿಸಿರಲಿಲ್ಲ. ಜನರ ಇಷ್ಟ ಆ ನಿಟ್ಟಿನಲ್ಲಿ ಯೋಚನೆ ಮಾಡುವಂತೆ ಮಾಡಿದೆ. ಜೆಡಿಎಸ್ ನಿಂದ ಇದೂವರೆಗೂ ಯಾರು ನನ್ನ ಸಂಪರ್ಕಿಸಿಲ್ಲ. ಒಟ್ಟಿನಲ್ಲಿ ಸಿದ್ದರಾಮಯ್ಯ ಅವರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದು, ಅವರ ನಿರ್ಧಾರ ಮೇಲೆ ಎಲ್ಲವೂ ಬಿಟ್ಟಿದ್ದೇನೆ ಎಂದು ಅವರು ತಿಳಿಸಿದ್ರು.

ಒಟ್ಟಿನಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸುಮಲತಾ ಅವರು ಇಂದು ಸಲ್ಲಿಸಿದ ಪೂಜೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ದೇವಸ್ಥಾನ ಭೇಟಿ ವೇಳೆ ಸುಮಲತಾ ಅವರಿಗೆ ರಾಕ್‍ಲೈನ್ ವೆಂಕಟೇಶ್, ಸಂಬಂಧಿಕರು, ಚಿಕ್ಕರಸಿನಕೆರೆ ಗ್ರಾಮಸ್ಥರು, ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *