ಕೊರೊನಾ ವೈರಸ್‍ಗೆ ಕರ್ನಾಟಕದಲ್ಲಿ ಆತಂಕ ಪಡುವ ಅಗತ್ಯವಿಲ್ಲ: ಶ್ರೀರಾಮುಲು

Public TV
1 Min Read

ಮಂಡ್ಯ: ಕರ್ನಾಟಕದಲ್ಲಿ ಯಾರು ಸಹ ಕೊರೊನಾ ವೈರಸ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ಕೊರೊನಾ ವೈರಸ್ ಬಗ್ಗೆ ಎಲ್ಲಾ ಕಡೆ ತಪಾಸಣೆ ಶುರು ಮಾಡಿದ್ದೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಈಗಾಗಲೇ ಕೊರೊನಾ ವೈರಸ್ ಹಿನ್ನೆಲೆಯಲ್ಲಿ 44 ಜನರ ರಕ್ತ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 29 ಮಂದಿಯ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ. ಉಳಿದವರ ವರದಿ ಇಂದು ಸಂಜೆ ಒಳಗೆ ಬರಲಿದೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಅವರ ವೈದ್ಯಕೀಯ ವರದಿ ಕೂಡ ನೆಗೆಟಿವ್ ಬರಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಅಲ್ಲದೇ ಬಂದರು, ವಿಮಾನ ನಿಲ್ದಾಣಗಳಲ್ಲಿ ಸಹ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚೀನಾದಿಂದ ಬಂದವರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ 10 ಹಾಸಿಗೆಗಳನ್ನು ಕೊರೊನಾ ವೈರಸ್ ರೋಗಿಗಗಳಿಗೆ ಮೀಸಲಿಡಲಾಗಿದೆ. ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ ಎಮದು ಸಚಿವರು ತಿಳಿಸಿದರು.

ಈವರೆಗೆ ಕೊರೊನಾ ವೈರಸ್‍ನಿಂದ ಚೀನಾದಲ್ಲಿ 425 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 20 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿದೆ. ಕೇರಳದಲ್ಲಿಯೂ 3 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರನ್ನು ವಿಶೇಷ ವಾರ್ಡ್‍ಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತ ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಪ್ರಕರಣ ಪತ್ತೆಯಾಗದಿದ್ದರೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈಗಾಗಲೇ ಕೊಡಗು ಜಿಲ್ಲಾಸ್ಪತ್ರೆಯಲ್ಲಿ 6 ಬೆಡ್‍ಗಳ ವಿಶೇಷ ವಾರ್ಡ್, ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲೂಕು ಆಸ್ಪತ್ರೆಯಲ್ಲೂ ತಲಾ ಎರಡು ಬೆಡ್‍ಗಳ ಒಂದೊಂದು ವಿಶೇಷ ವಾರ್ಡ್ ಸಿದ್ಧಗೊಳಿಸಲಾಗಿದೆ. ಕೇರಳ, ಅಸ್ಸಾಂ ಸೇರಿದಂತೆ ಹೊರರಾಜ್ಯಗಳಿಂದ ಕಾರ್ಮಿಕರು ಕೊಡಗಿಗೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಕೊಡಗಿನ ಕಾಫಿ ತೋಟದ ಮಾಲಿಕರಿಗೂ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಅಲ್ಲದೆ ಕೇರಳ ರಾಜ್ಯದಲ್ಲಿ ಈಗಾಗಲೇ ಕೊರೊನಾ ವೈರಸ್ ಸೋಂಕಿತ 3 ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಮುಂದಿನ 15 ದಿನಗಳ ಕಾಲ ಕೇರಳದಿಂದ ಯಾವುದೇ ಕಾರ್ಮಿಕರನ್ನು ಕರೆತರುವಂತಿಲ್ಲ ಮತ್ತು ಇಲ್ಲಿರುವ ಕಾರ್ಮಿಕರನ್ನು ಕಳುಹಿಸದಂತೆ ಆರೋಗ್ಯ ಇಲಾಖೆ ಸೂಚಿಸಿ, ನೋಟಿಸ್ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *