ಮಂಡ್ಯ ಜನರು ಛತ್ರಿ ಹೇಳಿಕೆ; ಡಿಕೆಶಿ ಜನರ ಕ್ಷಮೆ ಕೇಳಬೇಕು – ಅನ್ನದಾನಿ

Public TV
2 Min Read

ಬೆಂಗಳೂರು: ಮಂಡ್ಯ (Mandya) ಜನರನ್ನು ಛತ್ರಿಗಳು ಎಂದು ಕರೆದಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆದು, ಮಂಡ್ಯ ಜನರ ಕ್ಷಮೆ ಕೇಳಬೇಕು ಎಂದು ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ, ಮಾಜಿ ಶಾಸಕ ಅನ್ನದಾನಿ (K Annadani) ಡಿಕೆ ಶಿವಕುಮಾರ್‌ಗೆ ಆಗ್ರಹಿಸಿದ್ದಾರೆ.

ಜೆಪಿ ಭವನದಲ್ಲಿ ಮಾತನಾಡಿದ ಅವರು, ಮಂಡ್ಯ ಜನರು ಛತ್ರಿಗಳು ಎಂಬ ಡಿಕೆ ಶಿವಕುಮಾರ್ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಜನರ ವಿರೋಧ ಡಿಕೆಶಿ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಚೆಲುವರಾಯಸ್ವಾಮಿ ಡಿಕೆಶಿ ಪರವಾಗಿ ಮಾತನಾಡುತ್ತಾರೆ. ಶಾಸಕ ಉದಯ್ ಡಿಕೆಶಿ ಹೇಳಿಕೆಗೆ ಬೇರೆ ಅರ್ಥ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಛತ್ರಿಗಳು ಅನ್ನಬೇಕಿತ್ತು. ಮಂಡ್ಯದ ಜನರಿಗೆ ಛತ್ರಿ ಅನ್ನುತ್ತೀರಾ? ಸಿಎಂ ಆಗುತ್ತಾರೆ ಅಂತ ಜನ 6 ಸೀಟು ಕೊಟ್ಟರು. ಮಂಡ್ಯ ಜನರ ಬಗ್ಗೆ ನಿಮಗೆ ಗೊತ್ತಿಲ್ಲ. ಮಂಡ್ಯಕ್ಕೆ ದೊಡ್ಡ ಇತಿಹಾಸ ಇದೆ ಎಂದು ಡಿಕೆಶಿ ವಿರುದ್ದ ಕಿಡಿಕಾರಿದರು. ಇದನ್ನೂ ಓದಿ: ಹನಿಟ್ರ‍್ಯಾಪ್ ಪ್ರಕರಣ; ಜೆಡಿಎಸ್‌ನಲ್ಲಿ ಯಾರು ಟ್ರ‍್ಯಾಪ್ ಆಗಿಲ್ಲ: ಅನ್ನದಾನಿ

ಎಸ್‌ಎಂ ಕೃಷ್ಣ (SM Krishna) ಮಂಡ್ಯ ಜಿಲ್ಲೆಯವರು, ಸಿಎಂ ಆದವರು. ಎಸ್‌ಎಂ ಕೃಷ್ಣ ಶಿಷ್ಯರಾಗಿ ಕೃಷ್ಣ ಅವರ ಜಿಲ್ಲೆಯನ್ನು ಛತ್ರಿಗಳು ಅಂತೀರಲ್ಲ, ಇದನ್ನು ನಾವು ಖಂಡಿಸುತ್ತಿದ್ದೇವೆ. ಮಂಡ್ಯದ ಜನ ನಿಮಗೆ ಮುಂದಿನ ದಿನಗಳಲ್ಲಿ ಬುದ್ಧಿ ಕಲಿಸುತ್ತಾರೆ. ನಮಗೆ ಯಾರ ಬಗ್ಗೆಯೂ ಭಯ ಇಲ್ಲ. ಯಾರನ್ನು ಕಂಡರೂ ಭಯವಿಲ್ಲ. ನಾವು ಭಯ ಪಡೋದು ದೇವೇಗೌಡ, ಕುಮಾರಸ್ವಾಮಿಗೆ ಮಾತ್ರ. ಬೇರೆ ಯಾರಿಗೂ ಸೊಪ್ಪು ಹಾಕಲ್ಲ, ಯಾರಿಗೂ ಹೆದರಲ್ಲ. ಎಂತಹ ಸಮಯ ಬಂದರೂ ನಾವು ಎದುರಿಸುತ್ತೇವೆ. ಡಿಕೆ ಶಿವಕುಮಾರ್ ಕೂಡಲೇ ಹೇಳಿಕೆ ವಾಪಸ್ ಪಡೆಯಬೇಕು. ಮಂಡ್ಯ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಏ.1ರಿಂದ ಕರ್ನಾಟಕದಲ್ಲಿ ಟೋಲ್‌ ದರ ಶೇ.5ರಷ್ಟು ಹೆಚ್ಚಳ!

ಮಂಡ್ಯದ ಜನರಿಗೆ ಛತ್ರಿಗಳು ಅಂತ ಹೇಳಿದ್ದಾರೆ. ಹಿರಿಯರಾಗಿ ಹೀಗೆ ಮಾತನಾಡುವುದು ಸರಿಯಲ್ಲ. ಸಿಎಂ ಆಗಬೇಕು ಎಂದು ಆಸೆ ಇಟ್ಟುಕೊಂಡಿರುವವರು ಹೀಗೆ ಮಾತನಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಂವಿಧಾನ ಬದಲಾವಣೆ ‌ಹೇಳಿಕೆಗೆ ಡಿಕೆಶಿ ದೇಶದ, ರಾಜ್ಯದ ಕ್ಷಮೆ ಕೇಳಿ, ರಾಜೀನಾಮೆ ಕೊಡ್ಬೇಕು – ಅನ್ನದಾನಿ

Share This Article