ಟಿಪ್ಪು, ಹೈದರಾಲಿ ಹೆಸರಿಲ್ಲದೇ ಮೈಸೂರು ಇತಿಹಾಸವೇ ಮುಗಿಯಲ್ಲ: ಸಿದ್ದರಾಮಯ್ಯ

Public TV
1 Min Read

ಮಂಡ್ಯ: ಟಿಪ್ಪು, ಹೈದರಾಲಿ ಹೆಸರಿಲ್ಲದೇ ಮೈಸೂರು ಇತಿಹಾಸವೇ ಮುಗಿಯುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಇಂದಿರಾಗಾಂಧಿ ಅವರ ಪುಣ್ಯ ತಿಥಿ ಅಂಗವಾಗಿ ಮಂಡ್ಯದ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಟಿಪ್ಪು ಮುಸ್ಲಿಂ ಎಂಬ ಕಾರಣಕ್ಕೆ ಅಂತ ಮಹಾನ್ ನಾಯಕನ ಅಧ್ಯಯ ಬಿಜೆಪಿ ತೆಗೆಯಲು ಹೊರಟಿದೆ. ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿ ಮಾಡಿದರು. ಆಗ ಟಿಪ್ಪು ಮತಾಂಧ ಎಂದು ಅವರಿಗೆ ಗೊತ್ತಾಗ್ಲಿಲ್ವಾ. ಶೆಟ್ಟರ್, ಅಶೋಕ್ ಮತ್ತು ಪಿ.ಸಿ.ಮೋಹನ್ ಟಿಪ್ಪು ಜಯಂತಿ ಆಚರಣೆ ಮಾಡಿಲ್ಲವೇ ಎಂದು ಪ್ರಶ್ನಿಸಿದರು.

ಈ ದೇಶದ ರಾಷ್ಟಪತಿ ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದಿದ್ದಾರೆ. ಬಿಜೆಪಿಗೆ ಅಧಿಕಾರ ಇಲ್ಲದಿದ್ದಾಗ ಟಿಪ್ಪು ಹೀರೋ. ಈಗ ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ಟಿಪ್ಪು ಸ್ವಾತಂತ್ರ್ಯ ಹೋರಾಟ ಮಾಡಿಲ್ವಾ? ಮಕ್ಕಳನ್ನು ಬ್ರಿಟಿಷರಿಗೆ ಅಡಮಾನ ಇಡಲಿಲ್ವಾ ಇವೆಲ್ಲಾ ಸುಳ್ಳೇ? ಅಂಗೈ ಉಣ್ಣಿಗೆ ಕನ್ನಡಿ ಏಕೆ ಇದಕ್ಕೆ ಕಮಿಟಿ ರಚನೆ ಏಕೆ ಬೇಕು ಎಂದು ಬಿಜೆಪಿ ನಾಯಕರ ಮೇಲೆ ಸಿದ್ದು ಅಸಮಾಧಾನ ಹೊರಹಾಕಿದರು.

ನೆರೆ ಪರಿಹಾರ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಜಮಖಂಡಿ ಭಾಗದಲ್ಲಿ 24 ಹಳ್ಳಿಗಳು ಮುಳುಗಿವೆ. ಆ ಜನರನ್ನು ಕೇಳಿದಾಗ ಯಡಿಯೂರಪ್ಪ ಅವರು ಸುಳ್ಳು ಹೇಳ್ತಿದ್ದಾರೆ ಎಂದು ಆ ಜನರೇ ಹೇಳುತ್ತಿದ್ದಾರೆ. ಇವತ್ತಿಗೆ ನೆರೆ ಬಂದು ಮೂರು ತಿಂಗಳಾಗಿದೆ. ಯಡಿಯೂರಪ್ಪ ಒಬ್ಬರಿಗೆ ಬೆಳೆ ಪರಿಹಾರ ಕೊಟ್ಟಿದ್ದೀವಿ, ಅಂಗಡಿಗಳಿಗೆ ಪರಿಹಾರ ಕೊಟ್ಟಿದ್ದೀವಿ ಅಂತ ತೋರಿಸಲಿ ಎಂದು ಯಡಿಯೂರಪ್ಪನವರಿಗೆ ಸವಾಲ್ ಎಸೆದರು.

ಕೆಪಿಸಿಸಿ ಕಚೇರಿಯಲ್ಲಿ ಇಂದಿರಾಗಾಂಧಿ ಅವರ ಸ್ಮರಣೆ ಮಾಡಲು ಆಗಲಿಲ್ಲ. ಆದ್ದರಿಂದ ಮಂಡ್ಯದ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಸ್ಮರಣೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಇಂದಿರಾ ಗಾಂಧಿ ಅವರು ದೇಶ ಕಂಡ ಮಹಾನ್ ನಾಯಕಿ ಅವರು ‘ಬಡವರ ಇಂದ್ರಮ್ಮ’. ಕ್ರಾಂತಿಕಾರಕ ನೀತಿಗಳನ್ನು ದೇಶದಲ್ಲಿ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂದಿರಾ ಗಾಂಧಿ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬಂದಿದೆ. ಅವರನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದುರ್ಗೆ ಎಂದು ಕರೆಯುತ್ತಿದ್ದರು ಎಂದು ಹೇಳಿ ಇಂದಿರಾ ಗಾಂಧಿಯನ್ನು ಹಾಡಿಹೊಗಳಿದರು.

Share This Article
Leave a Comment

Leave a Reply

Your email address will not be published. Required fields are marked *