ಮಂಡ್ಯ | ನಿಂತಿದ್ದ ಕಂಟೈನರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ – 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

Public TV
2 Min Read

– ಸರ್ಕಾರ ಶಕ್ತಿ ಯೋಜನೆ ನಿಲ್ಲಿಸಬೇಕು ಎಂದು ವಿದ್ಯಾರ್ಥಿಗಳ ಆಕ್ರೋಶ

ಮಂಡ್ಯ: ನಿಂತಿದ್ದ ಕಂಟೈನರ್‌ಗೆ ಕೆಎಸ್‌ಆರ್‌ಟಿಸಿ (KSRTC) ಬಸ್ ಡಿಕ್ಕಿ ಹೊಡೆದಿದ್ದು, 20ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಸಾಂಜೋ ಆಸ್ಪತ್ರೆ (Sanjo Hospital) ಬಳಿ ನಡೆದಿದೆ.

ಬೆಂಗಳೂರು-ಮೈಸೂರು (Bengaluru-Mysuru) ದಶಪತ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು, ಬೆಂಗಳೂರು ಕಡೆಯಿಂದ ಮಂಡ್ಯಕ್ಕೆ ತೆರಳುತ್ತಿದ್ದ ಬಸ್ ಎಕ್ಸ್‌ಪ್ರೆಸ್‌ ವೇ ನಿಂದ ಸರ್ವಿಸ್ ರಸ್ತೆಗೆ ಬರುತ್ತಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಪಲ್ಟಿ ಹೊಡೆದಿದೆ.ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಸುಪ್ರೀಂ ರಿಲೀಫ್ – ಬಳ್ಳಾರಿ ಪ್ರವೇಶಕ್ಕೆ ಇದ್ದ ನಿರ್ಬಂಧ ತೆರವು

ಬೆಳಿಗ್ಗೆ 9:50ಕ್ಕೆ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ಬಸ್‌ನಲ್ಲಿ 80ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದು, ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು ಪ್ರಯಾಣ ಮಾಡುತ್ತಿದ್ದರು. 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗೊಂಡಿದ್ದು, 30ಕ್ಕೂ ಹೆಚ್ಚು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳ ಪೈಕಿ ವಿದ್ಯಾರ್ಥಿಗಳೇ ಹೆಚ್ಚು ಗಾಯಗೊಂಡಿದ್ದು, ಜಿಲ್ಲೆಯ ಮಿಮ್ಸ್ ಆಸ್ಪತ್ರೆಗೆ (MIMS Hospital) ರವಾನಿಸಲಾಗಿದೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಬಸ್ ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿನಿ ಅನುಷಾ ಮಾತನಾಡಿ, ಮೊದಲು ಫ್ರೀ ಬಸ್ ಯೋಜನೆ ನಿಲ್ಲಿಸಿ. ಶಕ್ತಿ ಯೋಜನೆಯಿಂದ ಬಸ್‌ಗಳು ಸಿಕ್ಕಾಪಟ್ಟೆ ರಶ್ ಆಗುತ್ತಿವೆ. ಇವತ್ತು ಕೂಡ ಬಸ್‌ನಲ್ಲಿ 60-70 ಪ್ರಯಾಣಿಕರಿದ್ದರು. ಬಸ್ ಓವರ್ ಸ್ಪೀಡ್‌ನಲ್ಲಿದ್ದ ಕಾರಣ ನಿಯಂತ್ರಣ ಸಿಗದೇ ಪಲ್ಟಿಯಾಯಿತು. ಬಸ್ ಒಳಗಿದ್ದ ನಾವೆಲ್ಲರು ಗಾಬರಿಯಾಗಿದ್ದೆವು. ಕಿಟಕಿ ಗಾಜು ಒಡೆದು ಯುವಕರು ಹೊರಬಂದಿದ್ದು, ಸ್ಥಳೀಯರು ನಮ್ಮನ್ನೆಲ್ಲಾ ರಕ್ಷಿಸಿದ್ದಾರೆ. ಸರ್ಕಾರ ಮೊದಲು ಶಕ್ತಿ ಯೋಜನೆ ನಿಲ್ಲಿಸಬೇಕು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು,

ಬಸ್ ಪಲ್ಟಿ ಹೊಡೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅತಿವೇಗದ ಹಿನ್ನೆಲೆ ತಿರುವು ಇದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್‌ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿದೆ. ಇದೇ ವೇಳೆ ಎದುರಿಗೆ ಬರುತ್ತಿದ್ದ ಬೈಕ್ ಸವಾರ ಕ್ಷಣಾರ್ಧದಲ್ಲಿ ಪಾರಾಗಿದ್ದಾನೆ.

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.ಇದನ್ನೂ ಓದಿ: ಧಾರಾಕಾರ ಮಳೆಯಿಂದಾಗಿ ಹಳ್ಳದಲ್ಲಿ ಕೊಚ್ಚಿ ಹೋದ ಯುವಕರು – ಓರ್ವನ ಶವ ಪತ್ತೆ

Share This Article