ಮಂಡ್ಯ ಕಾಂಗ್ರೆಸ್‍ನಲ್ಲಿ ಭುಗಿಲೆದ್ದ ಆಕ್ರೋಶ – ಸಾಮೂಹಿಕ ರಾಜೀನಾಮೆಗೆ ಯುವಪಡೆ ನಿರ್ಧಾರ!

Public TV
1 Min Read

ಮಂಡ್ಯ: ಜೆಡಿಎಸ್ ಪರವಾಗಿ ಕೆಲಸ ಮಾಡಿ ಎಂದಿದ್ದ ಕೆಪಿಸಿಸಿ ನಾಯಕರ ವಿರುದ್ಧ ಮಂಡ್ಯ ಕಾಂಗ್ರೆಸ್‍ನ ಯುವ ನಾಯಕರು ಅಸಮಾಧಾನ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖಂಡರು, ನೀವೇನು ಶಿಸ್ತು ಕ್ರಮ ತೆಗೆದುಕೊಳ್ಳೋದು. ನಾವೇ ರಾಜೀನಾಮೆ ಕೊಡುತ್ತೇವೆ. ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿಎಂ ಕುಮಾರಸ್ವಾಮಿಯವರೇ ಕಾಂಗ್ರೆಸ್‍ನವರ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಮಂಡ್ಯ ಕಾಂಗ್ರೆಸ್ ಇಬ್ಭಾಗ ಮಾಡಲು ಬಂದಿದ್ದಾರೆ. ಮಂಡ್ಯ ಕಾಂಗ್ರೆಸ್ ಮುಖಂಡರು ಯಾವುದೇ ಕಾರಣಕ್ಕೂ ಜೆಡಿಎಸ್ ಪರ ಪ್ರಚಾರ ಮಾಡಬಾರದು. ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಸಿಎಂ ಬಳಿ ಕೆಲಸ ಮಾಡಿಸಿಕೊಳ್ಳಬಹುದೆಂದು ಕೆಲವರ ಉಚ್ಛಾಟನೆಗೆ ಮುಂದಾಗಿದ್ದಾರೆ. ಅವರಿಗೆ ಪಕ್ಷ ಸಂಘಟನೆಗಿಂತ ಸ್ವ-ಹಿತಾಸಕ್ತಿ ಮುಖ್ಯ ಎಂದು ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್ ಅಧ್ಯಕ್ಷರಿಗೆ ಗಟ್ಟಿತನ ಇದ್ದರೆ ಸುಮಾರು 80 ರಿಂದ 90 ಮಂದಿಯನ್ನು ಉಚ್ಛಾಟನೆ ಮಾಡಬೇಕಾಗುತ್ತದೆ. ಕೆಲವರನ್ನು ಮಾತ್ರ ಉಚ್ಛಾಟನೆ ಮಾಡುವುದು ಸರಿಯಲ್ಲ. ಈ ಹಿಂದಿನ ಚುನಾವಣೆಯಲ್ಲಿ ಯಾರೆಲ್ಲ ಪಕ್ಷ ನಿಷ್ಠೆ ತೋರಿದ್ದಾರೆ ಎಂಬುದು ನಮಗೂ ತಿಳಿದಿದೆ. ಆದ್ದರಿಂದ ಇಂತಹ ಅನಗತ್ಯ ಕ್ರಮಗಳನ್ನು ಬಿಟ್ಟು ಮೈತ್ರಿ ಧರ್ಮದ ಪಾಲನೆಯನ್ನು ಜೆಡಿಎಸ್ ಅವರು ಮಾಡಲಿ. ಕೇವಲ ಮಂಡ್ಯದಲ್ಲಿ ಮಾತ್ರ ಮೈತ್ರಿ ಆದರೆ ಆಗುವುದಿಲ್ಲ ಅಂದಿದ್ದಾರೆ.

ಸೌಜನ್ಯಕ್ಕಾದರು ಕಾಂಗ್ರೆಸ್ ಮಾಜಿ ಶಾಸಕರನ್ನು ಭೇಟಿ ಮಾಡಲು ಸಿಎಂ ಅವರಿಗೆ ಮನಸ್ಸಿಲ್ಲ. ಸಚಿವ ಎಚ್‍ಡಿ ರೇವಣ್ಣ ಅವರು ಭೇಟಿ ಮಾಡಿ ಸಹಕಾರ ಕೇಳಿದ್ದಾರೆ. ಆದರೆ ಮಂಡ್ಯದ ಯಾವುದೇ ಮಾಜಿ ಕಾಂಗ್ರೆಸ್ ಶಾಸಕರನ್ನು ಜೆಡಿಎಸ್ ಅಭ್ಯರ್ಥಿ ಭೇಟಿ ಮಾಡಿದ್ದಾರಾ ಎಂದು ಪ್ರಶ್ನೆ ಮಾಡಿದರು. ರಾಜೀನಾಮೆ ನೀಡುವ ಸಂದರ್ಭ ಬಂದರೆ ಎಲ್ಲರೂ ಒಟ್ಟಿಗೆ ಮಾಧ್ಯಮಗಳ ಮುಂದೆಯೇ ನೀಡುತ್ತೆವೆ ಎಂದು ಸ್ಪಷ್ಟಪಡಿಸಿದರು.

ಮಂಡ್ಯ ಯುವ ಕಾಂಗ್ರೆಸ್‍ನ ವಿವಿಧ ಘಟಕಗಳ ಅಧ್ಯಕ್ಷರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಮುಖವಾಗಿ ಜಿಲ್ಲಾ ಯುವ ಕಾಂಗ್ರೆಸ್‍ನ ಅರವಿಂದ್, ಹೆಚ್.ಪಿ.ಶಶಿಕುಮಾರ್, ಶರತ್ ರಾಮು, ಕೃಷ್ಣೇಗೌಡ, ವಿಜಯ್ ಕುಮಾರ್, ಪ್ರದೀಪ್ ಕುಮಾರ್, ಮಂಜುನಾಥ್ ಸೇರಿದಂತೆ ಹಲವರು ಯುವ ಮುಖಂಡರು ರಾಜೀನಾಮೆಗೆ ಮುಂದಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *