ರಷ್ಯಾದಲ್ಲಿ ಸಕ್ಕರೆ ನಾಡಿನ ಕೀರ್ತಿ ಬೆಳಗಿಸಲು ಸಜ್ಜಾಗಿರುವ ಮಂಡ್ಯದ ಬಾಲೆ

Public TV
1 Min Read

ಮಂಡ್ಯ: ಸಾಮಾನ್ಯ ರೈತನ ಮಗಳು ಕ್ರೀಡೆಯಲ್ಲಿ ಏನಾದ್ರು ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದು, ಇಂದು ಸತತ ಅಭ್ಯಾಸದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಸಕ್ಕರೆನಾಡಿನ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದ್ದಾಳೆ.

ಹಂಸವೇಣಿ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಪ್ರತಿಭಾನ್ವಿತ ಟೆನ್ನಿಕೋಯಿಟ್ ಕ್ರೀಡಾಪಟು. ಗ್ರಾಮೀಣ ಕ್ರೀಡೆ ಎನಿಸಿರುವ ಟೆನ್ನಿಕೋಯಿಟ್ ಸ್ಪರ್ಧೆಯಲ್ಲಿ ಸತತ ಪರಿಶ್ರಮದ ಸಾಧನೆ ಮೂಲಕ ಇದೀಗ ಜು-31 ರಿಂದ ಆಗಸ್ಟ್ -06 ರ ವರೆಗೆ ರಷ್ಯಾದ ಬೆಲಾರಸ್ ನಲ್ಲಿ ನಡೆಯಲಿರುವ 4ನೇ ವಿಶ್ವ ಟೆನ್ನಿಕೋಯಿಟ್ ಚಾಂಪಿಯನ್ ಶಿಫ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾಳೆ.

ಈಗಾಗಲೇ ಹತ್ತು ಹಲವು ಸ್ಪರ್ಧೆಗಳಲ್ಲಿ ಜಯಗಳಿಸಿ ಬಹುಮಾನ ಪಡೆದು ಹೆಸರು ಗಳಿಸಿರುವ ಹಂಸವೇಣಿ ಗ್ರಾಮೀಣ ಪ್ರತಿಭೆ. ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವ ಮೂಲಕ ರಾಜ್ಯ ಮತ್ತು ತವರು ಜಿಲ್ಲೆ ಸಕ್ಕರೆ ನಾಡಿನ ಕೀರ್ತಿ ಬೆಳಗಿಸಲು ಸಜ್ಜಾಗಿದ್ದು, ವಿಶ್ವ ಚಾಂಪಿಯನ್ ಶಿಫ್ ನಲ್ಲಿ ಜಯಗಳಿಸುವ ವಿಶ್ವಾಸ ಹೊಂದಿದ್ದಾಳೆ.

ಟೆನ್ನಿಕೋಯಿಟ್ ಕ್ರೀಡೆ ನಮ್ಮ ಹಳ್ಳಿಗಾಡಿನಲ್ಲಿ ರಿಂಗ್ ಎಸೆಯೋದು ಅಂತಾರೆ, ಈ ಆಟವನ್ನ ಸಾಮಾನ್ಯವಾಗಿ ಹೆಣ್ಣು ಮಕ್ಕಳು ಹೆಚ್ಚಾಗಿ ಆಡುತ್ತಾರೆ. ಆದರೆ ಈ ಆಟದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬಹುದು ಎಂಬುದಕ್ಕೆ ಸಾಮಾನ್ಯ ರೈತ ಕುಟುಂಬದಿಂದ ಬೆಳೆದು ಟೆನ್ನಿಕೋಯಿಟ್ ಕ್ರೀಡೆಯಲ್ಲಿ ಸಾಧನೆ ಮಾಡುತ್ತಿರುವ ಹಂಸವೇಣಿಯೇ ಸಾಕ್ಷಿ. ಪ್ರತಿಭಾನ್ವಿತ ಹಂಸವೇಣಿಗೆ ಹಿಂದೆ ತಂದೆಯ ಪರಿಶ್ರಮವೂ ಇದೇ. ಸ್ವತಃ ಮೈಸೂರು ವಿ.ವಿಯ ಕಬ್ಬಡಿ ಕ್ರೀಡಾಪಟುವಾಗಿದ್ದ ಹಂಸವೇಣಿ ತಂದೆ ಕೂಡ ಮಗಳ ಸಾಧನೆ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿಶ್ವ ಮಟ್ಟದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಲಿ ಎಂದು ಪೋಷಕರು ಹಾರೈಸಿದ್ದಾರೆ.

ಈಗಾಗಲೇ ಸತತ ಪರಿಶ್ರಮದ ಮೂಲಕ ಸಾಕಷ್ಟು ಹೆಸರು ಮಾಡಿರುವ ಹಂಸವೇಣಿ, ಇದೀಗ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಬಳಿಕ ಗ್ರಾಮದಲ್ಲಿ ಹೆಚ್ಚಿನ ತರಬೇತಿ ಪಡೆಯುತ್ತಿದ್ದಾಳೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಜ್ಜಾಗಿರುವ ಹಂಸವೇಣಿ ವಿದೇಶದಲ್ಲಿ ಪ್ರಶಸ್ತಿಗಳಿಸಿ ಭಾರತದ ಕೀರ್ತಿ ಪತಾಕೆ ಹಾರಿಸಲಿ ಅನ್ನೋದು ಎಲ್ಲರ ಆಶಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *