ಮಂಡ್ಯದಲ್ಲಿ ಅತಿ ಹೆಚ್ಚು ಮತದಾನ – ಯಾವ ಕ್ಷೇತ್ರದಲ್ಲಿ ಎಷ್ಟು ಮತ? ಗೆಲುವು ಯಾರಿಗೆ?

Public TV
2 Min Read

ಮಂಡ್ಯ: ರಾಜ್ಯಾದ್ಯಂತ ಕುತೂಹಲ ಕೆರಳಿಸಿದ್ದ ಹೈವೋಲ್ಟೇಜ್ ಕ್ಷೇತ್ರ ಮಂಡ್ಯದಲ್ಲಿ ಮತದಾನ ಮುಗಿದಿದೆ. ಆದರೆ ಮಂಡ್ಯದಲ್ಲಿ ಯಾರು ಗೆಲ್ತಾರೆ ಎಂಬ ಲೆಕ್ಕಾಚಾರ ಶುರುವಾಗಿದೆ. ಮತದಾನ ಚಲಾವಣೆಯಲ್ಲಿ ಶೇಕಡವಾರು ಹೆಚ್ಚಳವಾಗಿರುವುದು ಯಾರಿಗೆ ಲಾಭವಾಗಲಿದೆ. ನಿಖಿಲ್ ಮತ್ತು ಸುಮಲತಾ ಚುನಾವಣೆ ಮುಗಿದ ನಂತರವೂ ಮಂಡ್ಯದಲ್ಲೇ ಇರುತ್ತಾರಾ. ಈ ಎಲ್ಲ ಚರ್ಚೆಗಳು ಚುನಾವಣೆ ಮುಗಿದ ನಂತರವೂ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಸಿಎಂ ಕುಮಾರಸ್ವಾಮಿ ಮಗ ನಿಖಿಲ್ ಕುಮಾರ್ ಹಾಗೂ ದಿ. ಅಂಬರೀಶ್ ಅವರ ಪತ್ನಿ ಸುಮಲತಾ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿದ್ದರಿಂದ ಈ ಬಾರಿ ಮಂಡ್ಯ ಕಣ ರಂಗೇರಿತ್ತು. ಒಂದಲ್ಲ ಒಂದು ಸುದ್ದಿಯಿಂದ ಸದಾ ಸೌಂಡ್ ಮಾಡ್ತಿತ್ತು. ಅಂಥ ಹೈವೋಲ್ಟೇಜ್ ಕಣ ಮಂಡ್ಯ ಮೊದಲ ಹಂತದ ಮತದಾನದಲ್ಲಿ ಈ ಬಾರಿ ದಕ್ಷಿಣ ಕನ್ನಡವನ್ನೇ ಮೀರಿಸಿದೆ. ಮಂಡ್ಯದಲ್ಲಿ ಶೇಕಡಾ 80.23 ರಷ್ಟು ಮತದಾನವಾಗಿದೆ. ಕಳೆದ ನಾಲ್ಕೈದು ಚುನಾವಣೆಯನ್ನು ಹೋಲಿಸಿದರೆ, ಈ ಬಾರಿ ಅತೀ ಹೆಚ್ಚು ಮತದಾನವಾಗಿದೆ.

ಯಾವ ಕ್ಷೇತ್ರದಲ್ಲಿ ಎಷ್ಟು ಮತ:
ಮಳವಳ್ಳಿಯಲ್ಲಿ ಶೇ. 76.68, ಮದ್ದೂರಿನಲ್ಲಿ ಶೇ. 82.33, ಮೇಲುಕೋಟೆಯಲ್ಲಿ ಶೇ. 86.54, ಮಂಡ್ಯದಲ್ಲಿ ಶೇ. 74.80, ನಾಗಮಂಗಲದಲ್ಲಿ ಶೇ. 81.47, ಶ್ರೀರಂಗಪಟ್ಟಣದಲ್ಲಿ ಶೇ. 81.91, ಕೆ.ಆರ್. ಪೇಟೆಯಲ್ಲಿ ಶೇ. 80.20 ಹಾಗೂ ಕೆ.ಆರ್. ನಗರದಲ್ಲಿ ಶೇ. 79.31ನಷ್ಟು ಮತದಾನವಾಗಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕುಗಳಲ್ಲಿ 79.11% ಮತದಾನ ನಡೆದಿದ್ದರೆ 2018 ರಲ್ಲಿ 83.80% ಪ್ರಮಾಣದ ಮತದಾನ ನಡೆದಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ 71.47% ರಷ್ಟು ಮತದಾನ ನಡೆದರೆ ಈ ಬಾರಿ 8.76% ರಷ್ಟು ಏರಿಕೆಯಾಗಿ 80.23% ದಾಖಲಿಸಿದೆ.

ಮಂಡ್ಯದಲ್ಲಿ ಶೇಕಡವಾರು ಮತದಾನದಲ್ಲಿ ಹೆಚ್ಚಳವಾಗಿದ್ದೇನು ನಿಜ. ಆದ್ರೆ ಈಗ ಗೆಲುವಿನ ಕಿರೀಟ ಯಾರಿಗೆ? ನಿಖಿಲ್‍ಗಾ ಇಲ್ಲಾ ಸುಮಲತಾ ಅವರಿಗಾ ಎನ್ನುವ ಚರ್ಚೆ, ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಬಿಸಿ ಬಿಸಿ ಚರ್ಚೆ ಜೊತೆಗೆ ನಿಖಿಲ್ ಮತ್ತು ಸುಮಲತಾ ಇನ್ನು ಮುಂದೆ ಮಂಡ್ಯದಲ್ಲೇ ಇರುತ್ತಾರ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ಬಾಡಿಗೆ ಮನೆ ಮಾಡಿ ಇಲ್ಲಿಯೇ ಇರುತ್ತೇನೆ ಎಂದಿದ್ದ ಸುಮಲತಾ, ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ತಂಗಿದ್ದು ಅಲ್ಲಿಂದಲೇ ಚುನಾವಣಾ ಪ್ರಚಾರಕ್ಕೆ ಮಂಡ್ಯಕ್ಕೆ ಬರುತ್ತಿದ್ರು. ಇದೀಗ ಚುನಾವಣೆ ಮುಗಿದಿದ್ದು ಸುಮಲತಾ ಎಂದಿನಂತೆ ಮಂಡ್ಯದಲ್ಲಿ ಸಿಗ್ತಾರ ಗೊತ್ತಿಲ್ಲ. ಈ ಮಧ್ಯೆ ಸುಮಲತಾ ಮತ್ತು ಅಭಿಷೇಕ್ ಚುನಾವಣೆ ಮುಗಿದ ನಂತರ ಸಿಂಗಾಪುರಕ್ಕೆ ಹೋಗಲಿದ್ದಾರೆ ಎಂಬ ಗಾಸಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಆದ್ರೆ ಅಭಿಷೇಕ್ ಇದೆಲ್ಲಾ ಸುಳ್ಳು ಎಂದು ಹೇಳಿದ್ದಾರೆ.

ನಿಖಿಲ್ ಮಂಡ್ಯದಲ್ಲೇ ಜಮೀನು ಖರೀದಿಸಿ, ಮನೆ ಕಟ್ಟುತ್ತೇನೆ ಎಂದು ಹೋದಲೆಲ್ಲ ಹೇಳಿಕೊಂಡಿದ್ರು. ನಂತರ ಮದ್ದೂರು ತಾಲ್ಲೂಕಿನ ಕೆಎಂ ದೊಡ್ಡಿಯಲ್ಲಿರುವ ಸಚಿವ ಡಿಸಿ.ತಮ್ಮಣ್ಣ ಮನೆಯಲ್ಲಿ ವಾಸ್ತವ್ಯ ಹೂಡಿ ಅಲ್ಲಿಂದಲೇ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ರು. ಆದ್ರೆ ಈಗ ಚುನಾವಣೆ ಮುಗಿದಿದ್ದು, ನಾವು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ ಅಂತಿದ್ದ ಇಬ್ಬರು ಎದುರಾಳಿಗಳು ಎಲ್ಲಿ ವಾಸ್ತವ್ಯ ಹೂಡ್ತಾರೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *